ಹೆಚ್ಚುವರಿಯಾಗಿ 1 ಲಕ್ಷ ಮೆಟ್ರಿಕ್ ಟನ್ ಜೋಳ ಖರೀದಿಗೆ ನಿರ್ಧಾರ: ರೈತರಿಗೆ ನೆರವಿಗೆ ಧಾವಿಸಿದ ಸರ್ಕಾರ

Most read

ಬೆಂಗಳೂರು:  ರಾಜ್ಯದಲ್ಲಿ ಹಿಂಗಾರು ಹಂಗಾಮಿನ ಅವಧಿಯಲ್ಲಿ ಬೆಳೆಯಲಾದ 1 ಲಕ್ಷ ಮೆಟ್ರಿಕ್ ಟನ್ ಜೋಳವನ್ನು ಹೆಚ್ಚುವರಿಯಾಗಿ ಬೆಂಬಲ ಬೆಲೆ ಯೋಜನೆಯಡಿಯಲ್ಲಿ  ರೈತರಿಂದ ನೇರವಾಗಿ ಖರೀದಿ ಕೇಂದ್ರಗಳ ಮೂಲಕ ಖರೀದಿಸಲು ತೀರ್ಮಾನಿಸಲಾಗಿದೆ ಎಂದು ಆಹಾರ ನಾಗರಿಕ ಸರಬರಾಜು ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದ್ದಾರೆ.

ವಸತಿ ಸಚಿವ ಜಮೀರ್ ಅಹ್ಮದ್ ಖಾನ್‌ ರವರ ನೇತೃತ್ವದಲ್ಲಿ ಬಳ್ಳಾರಿ ಜಿಲ್ಲೆಯ ರೈತರು, ಅಧಿಕಾರಿಗಳೊಂದಿಗೆ ವಿಧಾನಸೌಧದಲ್ಲಿ ಸಭೆ ನಡೆಸಿದ ನಂತರ ಅವರು ಮಾತನಾಡಿದರು.
ಬಳ್ಳಾರಿ, ರಾಯಚೂರು, ವಿಜಯನಗರ ಹೆಚ್ಚಾಗಿ ಜೋಳ ಬೆಳೆಯುವ ಜಿಲ್ಲೆಗಳಾಗಿದ್ದು ಹಾಗೂ ರಾಜ್ಯಾದ್ಯಂತ ಹಿಂಗಾರು ಹಂಗಾಮಿನ ಅವಧಿಯಲ್ಲಿ ಹೆಚ್ಚಿನ ಜೋಳ ಬೆಳೆಯುವ ಜಿಲ್ಲೆಗಳಿಂದ ಬೆಂಬಲ ಬೆಲೆ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ 1 ಲಕ್ಷ ಮೆಟ್ರಿಕ್ ಟನ್ ಜೋಳ ಖರೀದಿಸಲಾಗುವುದು ಎಂದರು.

ಹೈಬ್ರಿಡ್  ಜೋಳಕ್ಕೆ ಪ್ರತಿ ಕ್ವಿಂಟಾಲ್ ಗೆ ರೂ. 3371 ಮಾಲ್ದಂಡಿ ಜೋಳಕ್ಕೆ ಪ್ರತಿ ಕ್ವಿಂಟಾಲ್‌ಗೆ 3421 ದರವನ್ನು ನಿಗದಿಪಡಿಸಲಾಗಿದೆ. ಈಗಾಗಲೇ ನೊಂದಾಯಿಸಿದ ರೈತರು ಹಾಗೂ ಹೊಸದಾಗಿ ನೊಂದಾಯಿಸುವ ರೈತರೂ ಸಹ ತಾವು ಬೆಳೆದ ಬೆಲೆಯನ್ನು ನಿರ್ದಿಷ್ಟ ಖರೀದಿ ಕೇಂದ್ರದ ಸ್ಥಳದಲ್ಲಿ ನೊಂದಣಿ ಮಾಡಿಕೊಂಡು ಮಾರಾಟಮಾಡಬಹುದು ಎಂದರು.

ಅನ್ನಭಾಗ್ಯ ಯೋಜನೆ ಫಲಾನುಭವಿಗಳಿಗೆ ಪ್ರತಿ ವ್ಯಕ್ತಿಗೆ 5 ಕೆಜಿ ಪಡಿತರ ಧಾನ್ಯ ನೀಡುತ್ತಿದ್ದು, ಉತ್ತರ ಕರ್ನಾಟಕದ ಭಾಗದಲ್ಲಿ 2 ಕೆಜಿ ಅಕ್ಕಿಯ ಜೊತೆಗೆ 3 ಕೆಜಿ ಜೋಳವನ್ನು ವಿತರಿಸಲು ತೀರ್ಮಾನಿಸಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್‌ ಸದಸ್ಯ ಬಸನಗೌಡ ಬಾದರ್ಲಿ, ವಸತಿ ಇಲಾಖೆ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ಆಹಾರ ಇಲಾಖೆ ಕಾರ್ಯದರ್ಶಿ ಮನೋಜ್ ಜೈನ್ ಹಾಗೂ ರೈತ ಸಂಘದ ರಘುನಾಥ್, ಮಾದವರೆಡ್ಡಿ ಕರೂರ್ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

More articles

Latest article