ನವದೆಹಲಿ: ದೆಹಲಿಯ ಮುಸ್ತಫಾಬಾದ್ ಪ್ರದೇಶದಲ್ಲಿ ಇಂದು ಬಹುಮಹಡಿ ಕಟ್ಟಡವೊಂದು ಕುಸಿದು ಬಿದ್ದಿದ್ದು, 11 ಮಂದಿ ಮೃತಪಟ್ಟು 11 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಂದು ಮುಂಜಾನೆ 3 ಗಂಟೆ ವೇಳೆಗೆ 20 ವರ್ಷದಷ್ಟು ಹಳೆಯದಾದ ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ಬಿದ್ದಿತ್ತು. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ ಡಿ ಆರ್ ಎಫ್), ಅಗ್ನಿಶಾಮಕ ದಳ, ದೆಹಲಿ ಪೊಲೀಸರು ಸತತ 12 ಗಂಟೆಗಳಿಗೂ ಹೆಚ್ಚು ಕಾಲ ರಕ್ಷಣಾ ಕಾರ್ಯಾಚರಣೆ ನಡೆಸಿದವು ಎಂದು ಅವರು ತಿಳಿಸಿದ್ದಾರೆ.
ಈ ಕಟ್ಟಡದಲ್ಲಿ 22 ಮಂದಿ ವಾಸುತ್ತಿದ್ದರು. ಕಟ್ಟಡದ ಮಾಲೀಕ ತೆಹ್ಸೀನ್ ಮತ್ತು ಅವರ ಕುಟುಂಬದ ಆರು ಮಂದಿ ಸದಸ್ಯರು ಈ ದುರಂತದಲ್ಲಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ನೆಲ ಮಹಡಿಯಲ್ಲಿ ಅಂಗಡಿ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಇದೇ ಕಾರಣಕ್ಕೆ ಕಟ್ಟಡ ಕುಸಿತಕ್ಕೆ ಕಾರಣವಾಗಿರಬಹುದು. ಒಳಚರಂಡಿಯಿಂದ ಬರುವ ತ್ಯಾಜ್ಯ ನೀರು ವರ್ಷಗಳಿಂದ ಕಟ್ಟಡದ ಮುಂದೆ ಹರಿಯುತ್ತಿದ್ದು, ಗೋಡೆಗಳಲ್ಲಿ ತೇವಾಂಶ ಉಳಿದಿದೆ. ಇದರಿಂದ ಗೋಡೆಗಳು ಶಿಥಿಲಗೊಂಡು, ಕಟ್ಟಡ ಕುಸಿದಿರಬಹುದು ಎಂದು ಮತ್ತೊಬ್ಬ ನಿವಾಸಿ ಹೇಳಿದ್ದಾರೆ.
ಈ ಪ್ರದೇಶವು ಹೆಚ್ಚು ಜನದಟ್ಟಣೆಯಿಂದ ಕೂಡಿದ್ದರಿಂದ ರಕ್ಷಣಾ ಪ್ರಯತ್ನಗಳು ಸವಾಲಿನ ಕೆಲಸವಾಗಿತ್ತು. ಅವಶೇಷಗಳನ್ನು ನಿಧಾನವಾಗಿ ತೆರವುಗೊಳಿಸಲಾಗಿದೆ. ಸ್ಥಳಾವಕಾಶದ ಕೊರತೆಯಿಂದಾಗಿ ಭಾರೀ ಯಂತ್ರೋಪಕರಣಗಳ ಬಳಕೆಗೆ ತೊಂದರೆಯಾಗಿತ್ತು ಎಂದು ಎನ್‌ಡಿಆರ್‌ಎಫ್ ಸಿಬ್ಬಂದಿ ತಿಳಿಸಿದ್ದಾರೆ.