ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 1.4 ಕೋಟಿ ನಿವಾಸಿಗಳಿದ್ದಾರೆ. ದಿನನಿತ್ಯ ಬಂದು ಹೋಗುವವರ ಮತ್ತು ವಾಹನಗಳ ಸಂಖ್ಯೆ ಲಕ್ಷ ದಾಟುತ್ತದೆ. ಹಾಗಾದರೆ ಐಟಿಬಿಬಿ ರಾಜಧಾನಿಯೂ ಆಗಿರುವ ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ ಎಷಿರಬಹುದು ಎಂಬ ಕುತೂಹಲ ಇರುವುದಿಲ್ಲವೇ? ಬೆಂಗಳೂರಿನಲ್ಲಿ 1.23 ಕೋಟಿ ವಾಹನಗಳಿವೆ.
2024-25 ರಲ್ಲಿ 4.68 ದ್ವಿಚಕ್ರ ಮತ್ತು 1.45 ಕಾರುಗಳ ಸಂಖ್ಯೆ ಸೇರಿ 7.22 ಲಕ್ಷ ವಾಹನಗಳ ನೋಂದಣಿಯಾಗಿದೆ.
2023-24ರಲ್ಲಿ 1.16 ಕೋಟಿ ವಾಹನಗಳಿದ್ದವು. ಈ ವರ್ಷಕ್ಕೆ ಶೇ.6.5ರಷ್ಟು ಹೆಚ್ಚಳವಾಗಿದೆ. 2022-23 ರಲ್ಲಿ 1.09, 2021-22 ರಲ್ಲಿ 1.04 ಕೋಟಿ, 2020-21 ರಲ್ಲಿ 1 ಕೋಟಿ ವಾಹನಗಳಿದ್ದವು ಎಂದು ಸಾರಿಗೆ ಇಲಾಖೆ ತಿಳಿಸಿದೆ. 2024-25 ರಲ್ಲಿ ತಿಂಗಳಿಗೆ 60,000 ಅಥವಾ ಪ್ರತಿದಿನ 2,000 ವಾಹನಗಳು ನೋಂದಣಿಯಾಗಿವೆ. ರಾಜ್ಯದಲ್ಲಿರುವ ಒಟ್ಟು ಕಾರುಗಳ ಸಂಖ್ಯೆಯಲ್ಲಿ ಅರ್ಧದಷ್ಟು ಕಾರುಗಳು ಬೆಂಗಳೂರಿನಲ್ಲಿ ನೊಂದಣಿಯಾಗಿವೆ. ಬೆಂಗಳೂರಿನ ಕಿರಿದಾದ ರಸ್ತೆಗಳು ಈ ಭಾರವನ್ನು ತಡೆದುಕೊಳ್ಳಲು ಸಾಧ್ಯವೇ ಇಲ್ಲ.
ರಸ್ತೆಗಳಿಗೆ ಭಾರ:
ಬೆಂಗಳೂರಿನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಬಸ್, ಮೆಟ್ರೋ ವ್ಯವಸ್ಥೆ ಇದ್ದರೂ ಖಾಸಗಿ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ವಾಹನಗಳ ಸಂಖ್ಯೆ ಮಾತ್ರ ಹೆಚ್ಚುತ್ತಿದೆಯೇ ಹೊರತು ನಗರದ ರಸ್ತೆಗಳನ್ನು ಮಾತ್ರ ವಾಹನಗಳ ಏರಿಕೆಗೆ ತಕ್ಕಂತೆ ಸಜ್ಜುಗೊಳಿಸುತ್ತಿಲ್ಲ. ಬೆಂಗಳೂರಿನಲ್ಲಿ ಇರುವುದೇ 15,000 ಕಿಮೀ ರಸ್ತೆ. ವಾಹನಗಳ ಸಾಂದ್ರತೆ 2023-24 ರಲ್ಲಿ ಪ್ರತಿ ಕಿಮೀಗೆ 761 ವಾಹನಗಳಿದ್ದರೆ 2024-25 ರಲ್ಲಿ ಪ್ರತಿ ಕಿಮೀಗೆ 823 ವಾಹನಗಳಿಗೆ ಏರಿಕೆಯಾಗಿದೆ.
ರಾಜ್ಯದಲ್ಲಿ 2024-25ರಲ್ಲಿ 3.34 ಕೋಟಿ ವಾಹನಗಳಿದ್ದರೆ 2023-24 ರಲ್ಲಿ 3.16 ವಾಹನಗಳಿದ್ದವು. 2022-23 ರಲ್ಲಿ 2.98, 2021-22 ರಲ್ಲಿ 2.84, 2020-21 ರಲ್ಲಿ 2.72 ವಾಹನಗಳಿದ್ದವು ಎಂದು ಸಾರಿಗೆ ಇಲಾಖೆ ಮೂಲಗಳು ಖಚಿತಪಡಿಸಿವೆ.
ಕಾರುಗಳ ಸಂಖ್ಯೆ ಎಷ್ಟು?
ಬೆಂಗಳೂರಿನಲ್ಲಿ ಕಾರುಗಳ ಸಂಖ್ಯೆ ಶೇ. 20ರಷ್ಟಿದ್ದರೆ ಇಡೀ ರಾಜ್ಯದಲ್ಲಿ ಶೇ. 15 ರಷ್ಟು ಕಾರುಗಳಿವೆ. ಬೆಂಗಳೂರಿನಲ್ಲಿ 25.37 ಲಕ್ಷ ಕಾರುಗಳಿದ್ದರೆ ರಾಜ್ಯಾದ್ಯಂತ 49.16 ಲಕ್ಷ ಕಾರುಗಳಿವೆ. ಸರಳವಾಗಿ ಹೇಳುವುದಾದರೆ ಬೆಂಗಳೂರಿನಲ್ಲಿ ನೋಂದಣಿಯಾಗುವ ಪ್ರತಿ 5 ನೇ ವಾಹನ ಕಾರು ಆಗಿರುತ್ತದೆ. 2024-25 ರಲ್ಲಿ ಶೇ. 5 ರಷ್ಟು ಮತ್ತು 2023-24 ರಲ್ಲಿ ಶೇ.7 ರಷ್ಟು ಕಾರುಗಳು ನೊಂದಣಿಯಾಗಿವೆ.