ನವದೆಹಲಿ: ಶಿಕ್ಷಣದಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ಯಾರೂ ಎದುರಿಸದಂತೆ ಖಾತ್ರಿಪಡಿಸಲು ರೋಹಿತ್ ವೇಮುಲ ಕಾಯ್ದೆಯನ್ನು ಅಳವಡಿಸಿಕೊಳ್ಳುವಂತೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಮುಖಂಡ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಪತ್ರ ಬರೆದು ಒತ್ತಾಯಿಸಿದ್ದಾರೆ. ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ತಮ್ಮ ಜೀವನದಲ್ಲಿ ಇಂತಹ ತಾರತಮ್ಯ ಎದುರಿಸಿದ್ದನ್ನು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಹಿಂದೆ, ನಮ್ಮಲ್ಲಿ ಸಾಕಷ್ಟು ಪ್ರಮಾಣದಲ್ಲಿ ಆಹಾರ ಧಾನ್ಯಗಳಿದ್ದವು. ಆದರೂ ನಮ್ಮಲ್ಲಿ ಕೆಲವರು ಹಸಿವಿನಿಂದ ಬಳಲುತ್ತಿದ್ದರು. ಊಟ ಮಾಡದೇ ಮಲಗಿದ ದಿನಗಳೂ ಇದ್ದವು. ನೀರು ಲಭ್ಯತೆಯೂ ಕಷ್ಟವಾಗಿತ್ತು. ಅಸ್ಪೃಶ್ಯರು ಎಂಬ ಒಂದೇ ಕಾರಣಕ್ಕೆ ಇವೆಲ್ಲವನ್ನೂ ಸಹಿಸಿಕೊಂಡು ಬದುಕಬೇಕಾಗಿತ್ತು ಎಂಬುದನ್ನು ಉಲ್ಲೇಖಿಸಿದ್ದಾರೆ.
ಅಂಬೇಡ್ಕರ್ ಅವರ ಮಾತನ್ನೇ ಉಲ್ಲೇಖಿಸಿರುವ ಅವರು, ನಾನೊಬ್ಬ ಅಸ್ಪೃಶ್ಯ ಎನ್ನುವುದು ತಿಳಿದಿತ್ತು. ಇದೇ ಕಾರಣಕ್ಕಾಗಿ ಅವಮಾನ ಮತ್ತು ತಾರತಮ್ಯ ಸಾಮಾನ್ಯವಾಗಿದ್ದವು. ಅಂಕಗಳಿದ್ದರೂ ಸಹಪಾಠಿಗಳೊಂದಿಗೆ ನಾನು ಸಹಜವಾಗಿ ಕೂರಲು ಸಾಧ್ಯವಿಲ್ಲ ಎಂಬುದೂ ತಿಳಿದಿತ್ತು. ಇಷ್ಟಾದರೂ, ತರಗತಿಯ ಒಂದು ಮೂಲೆಯಲ್ಲಿ ಕೂರುತ್ತಿದ್ದೆ. ಅವರು ಅನುಭವಿಸಿದ ಅವಮಾನವನ್ನು ಭಾರತದ ಯಾವ ಮಗುವೂ ಅನುಭವಿಸಬಾರದು ಎಂಬುದನ್ನು ನೀವು ಒಪ್ಪುತ್ತೀರಿ ಎಂದು ಭಾವಿಸಿದ್ದೇನೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ದಲಿತ, ಆದಿವಾಸಿ ಮತ್ತು ಇತರ ಹಿಂದುಳಿದ ಜಾತಿಗಳಿಗೆ ಸೇರಿದ ಲಕ್ಷಾಂತರ ವಿದ್ಯಾರ್ಥಿಗಳು ಇಂದಿಗೂ ಅದೇ ಘೋರ ತಾರತಮ್ಯವನ್ನು ಶಿಕ್ಷಣ ವ್ಯವಸ್ಥೆಯಲ್ಲಿ ಎದುರಿಸುತ್ತಿದ್ದಾರೆ. ಪ್ರತಿಭಾವಂತ ವಿದ್ಯಾರ್ಥಿಗಳಾಗಿದ್ದರೂ ರೋಹಿಲ್ ವೇಮುಲಾ, ಪಾಯಲ್ ತಾಡ್ವಿ ಮತ್ತು ದರ್ಶನ್ ಸೊಲಂಕಿ ಅವರ ಹತ್ಯೆಯಯನ್ನು ಸಹಿಸಲು ಸಾಧ್ಯವಿಲ್ಲ. ಇಂತಹ ತಾರತಮ್ಯಗಳಿಗೆ ಅಂತ್ಯ ಹಾಡುವ ಕಾಲವಿದು. ಹೀಗಾಗಿ ಕರ್ನಾಟಕ ಸರ್ಕಾರವು ರೋಹಿತ್ ವೇಮುಲ ಕಾಯ್ದೆಯನ್ನು ಜಾರಿಗೆ ತರಬೇಕು. ಆ ಮೂಲಕ ಡಾ. ಬಿ.ಆರ್. ಅಂಬೇಡ್ಕರ್, ರೋಹಿತ್ ವೇಮುಲ ಒಳಗೊಂಡಂತೆ ಹಲವರು ಎದುರಿಸಿದ ಅವಮಾನವನ್ನು ಯಾವುದೇ ಮಗು ಅನುಭವಿಸಬಾರದು ಎಂದು ವಿವರಿಸಿದ್ದಾರೆ.
ಶಿಕ್ಷಣ ವ್ಯವಸ್ಥೆಯಿಂದ ಮಾತ್ರ ಈ ದೇಶದಲ್ಲಿ ಜಾತಿ ತಾರತಮ್ಯವನ್ನು ಹೋಗಲಾಡಿಸಲು ಸಾಧ್ಯ. ಅವಕಾಶ ವಂಚಿತರೂ ಶಿಕ್ಷಣದ ಮೂಲಕ ಸಬಲರಾಗಬಹುದು ಎಂದು ಪತ್ರದಲ್ಲಿ ಹೇಳಿದ್ದಾರೆ. ಪರಿಶಿಷ್ಟ ಜಾತಿಗೆ ಸೇರಿದ ರೋಹಿಲ್ ವೇಮುಲ ಅವರು ಜಾತಿ ಆಧಾರಿತ ತಾರತಮ್ಯದಿಂದ 2016ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.