ಬೆಂಗಳೂರು: ಲಾರಿ ಮಾಲೀಕರೊಂದಿಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ನಡೆಸಿದ ಸಭೆ ಯಶಸ್ವಿಯಾಗಿದ್ದು, ಲಾರಿ ಮಾಲೀಕರ ಸಂಘ ಮುಷ್ಕರವನ್ನು ಹಿಂಪಡೆದಿದೆ. ಸಚಿವರ ಜತೆ ನಡೆಸಿದ ಮಾತುಕತೆ ಯಶಸ್ವಿಯಾಗಿದ್ದು, ಅನಿರ್ದಿಷ್ಟಾವಧಿ ಮುಷ್ಕರವನ್ನು ವಾಪಸ್ ತೆಗೆದುಕೊಳ್ಳುವುದಾಗಿ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಜಿ.ಆರ್.ಷಣ್ಮುಗಪ್ಪ ಘೋಷಿಸಿದ್ದಾರೆ. ಈ ಕ್ಷಣದಿಂದಲೇ ಮುಷ್ಕರವನ್ನು ಹಿಂಪಡೆದಿದ್ದೇವೆ. ನಮ್ಮ ಬಹುತೇಕ ಬೇಡಿಕೆಗಳನ್ನು ಈಡೇರಿಸಿದ ಸರ್ಕಾರಕ್ಕೆ ಧನ್ಯವಾದವನ್ನೂ ಅರ್ಪಿಸುವುದಾಗಿ ಅವರು ತಿಳಿಸಿದ್ದಾರೆ.
20 ವರ್ಷಗಳಲ್ಲಿ ಈಡೇರದ ಬೇಡಿಕೆಗಳನ್ನು ಸಚಿವ ರಾಮಲಿಂಗಾ ರೆಡ್ಡಿ ಈಡೇರಿಸಿದ್ದಾರೆ. ಲಾರಿ ಮುಷ್ಕರದಿಂದ ಆದ ತೊಂದರೆಗೆ ಜನತೆಯಲ್ಲಿ ವಿಷಾದ ವ್ಯಕ್ತಪಡಿಸುತ್ತೇನೆ. ಒಂದು ದಿನದ ಲಾರಿ ಮುಷ್ಕರದಿಂದ 4,500 ಕೋಟಿ ರೂ. ನಷ್ಟ ಉಂಟಾಗಿದೆ ಷಣ್ಮುಗಪ್ಪ ಹೇಳಿದ್ದಾರೆ.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ ಲಾರಿ ಮಾಲೀಕರ ಸಂಘದ ಪದಾಧಿಕಾರಿಗಳ ಜೊತೆ ನಡೆಸಿದ ಸಭೆ ಯಶಸ್ವಿಯಾಗಿದೆ. ಲಾರಿ ಮಾಲೀಕ ಸಂಘ ಪ್ರಮುಖವಾಗಿ 6 ಬೇಡಿಕೆಗಳನ್ನು ಮುಂದಿಟ್ಟಿತ್ತು. ಗಡಿ ಭಾಗದಲ್ಲಿ ಟೋಲ್ ತೆಗೆಯಲು ಸಭೆಯಲ್ಲಿ ಮನವಿ ಮಾಡಿದ್ದರು. ಈ ಬಗ್ಗೆ ಮೂರು ದಿನಗಳಲ್ಲಿ ವರದಿ ತರಸಿಕೊಳ್ಳುತ್ತೇನೆ. ನೋ ಎಂಟ್ರಿ ಬೋರ್ಡ್ ಬದಲಾವಣೆ ಕುರಿತು ಚರ್ಚೆ ಮಾಡುತ್ತೇನೆ. ಲಾರಿ ಮಾಲೀಕರಿಗೆ ವಿಧಿಸುವ ದಂಡ ಕಡಿತ ಮಾಡುವ ಬಗ್ಗೆಯೂ ಚರ್ಚೆ ಮಾಡುತ್ತೇನೆ ಎಂದು ಹೇಳಿದರು.