ನವದೆಹಲಿ: ವಕ್ಫ್ ತಿದ್ದುಪಡಿ ಕಾಯ್ದೆ– 2025ರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಇಂದಿನಿಂದ ಆರಂಭಿಸಿದೆ. ವಿಚಾರಣೆ ಸಂದರ್ಭದಲ್ಲಿ ಹಿಂದೂ ಧಾರ್ಮಿಕ ಟ್ರಸ್ಟ್ ನಲ್ಲಿ ಮುಸ್ಲಿಮರಿಗೂ ಅವಕಾಶ ನೀಡಲು ಬಯಸುವಿರಾ ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ.
ಸಂಸತ್ತಿನಲ್ಲಿ ಇತ್ತೀಚೆಗೆ ಅಂಗೀಕಾರ ಪಡೆದ ವಕ್ಫ್ ತಿದ್ದುಪಡಿ ಮಸೂದೆಯು ರಾಷ್ಟ್ರಪತಿ ಮುರ್ಮು ಅಂಕಿತದ ಬಳಿಕ ಕಾಯ್ದೆಯಾಗಿ ಜಾರಿಗೆ ಬಂದಿದೆ. ಈ ಕಾಯ್ದೆಯ ಸಿಂಧುತ್ವವನ್ನು ಪ್ರಶ್ನಿಸಿ ಎಐಎಂಐಎಂ ವರಿಷ್ಠ ಅಸಾದುದ್ದೀನ್ ಓವೈಸಿ, ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ), ಜಮಿಯತ್ ಉಲಮಾ-ಇ-ಹಿಂದ್, ಡಿಎಂಕೆ, ಕಾಂಗ್ರೆಸ್ ಸಂಸದರಾದ ಇಮ್ರಾನ್ ಪ್ರತಾಪ್ ಗಢಿ ಮತ್ತು ಮೊಹಮ್ಮದ್ ಜಾವೇದ್ ಸೇರಿದಂತೆ ಸುಮಾರು 72 ಅರ್ಜಿಗಳು ಸಲ್ಲಿಕೆಯಾಗಿವೆ.
ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ, ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಮತ್ತು ಕೆ.ವಿ. ವಿಶ್ವನಾಥನ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಅರ್ಜಿಗಳ ವಿಚಾರಣೆ ಆರಂಭಿಸಿದೆ. ಈ ವೇಳೆ ಎರಡು ಆಯಾಮದ ಪ್ರಶ್ನೆಗಳನ್ನು ಉಭಯ ಪಕ್ಷಗಳ ಮುಂದಿಟ್ಟಿದೆ.
ಮೊದಲನೆಯದಾಗಿ ನಾವು ಅರ್ಜಿಗಳನ್ನು ವಿಚಾರಣೆಗೆ ಪರಿಗಣಿಸಬೇಕೇ ಅಥವಾ ಹೈಕೋರ್ಟ್‌ಗೆ ವರ್ಗಾಯಿಸಬೇಕೇ? ಎರಡನೆಯದಾಗಿ, ನೀವು ನಿಜವಾಗಿಯೂ ಏನಾಗಬೇಕೆಂದು ಬಯಸುತ್ತಿದ್ದೀರಿ ಮತ್ತು ಏನೆಂದು ವಾದಿಸಲು ಯತ್ನಿಸುತ್ತಿದ್ದೀರಿ ಎಂಬುದನ್ನು ಸೂಕ್ಷ್ಮವಾಗಿ ತಿಳಿಸುವಂತೆ ಮುಖ್ಯ ನ್ಯಾಯಮೂರ್ತಿಗಳು ಕೋರಿದರು.
ಎರಡನೇ ಅಂಶವು ನಮಗೆ ಮೊದಲ ಅಂಶದ ಬಗ್ಗೆ ನಿರ್ಧಾರ ಕೈಗೊಳ್ಳಲು ಒಂದು ಹಂತದವರೆಗೆ ಅನುಕೂಲಕರವಾಗಿರುತ್ತದೆ ಎಂದೂ ಅವರು ಹೇಳಿದ್ದಾರೆ. ಅರ್ಜಿದಾರರ ಪರವಾಗಿ ಹಿರಿಯ ವಕೀಲ ಕಪಿಲ್ ಸಿಬಲ್ ಹಾಜರಾಗಿದ್ದು, ವಾದ ಮಂಡಿಸುತ್ತಿದ್ದಾರೆ.
ಕಾಯ್ದೆಯ ಸಿಂಧುತ್ವ ಪ್ರಶ್ನಿಸಿದ ಅರ್ಜಿಗಳ ಸಂಬಂಧ ಕೇಂದ್ರ ಸರ್ಕಾರವು ಏಪ್ರಿಲ್ 8ರಂದು ಸುಪ್ರೀಂ ಕೋರ್ಟ್ ನಲ್ಲಿ ಕೇವಿಯಟ್ ಸಲ್ಲಿಸಿ, ಈ ವಿಷಯದಲ್ಲಿ ಯಾವುದೇ ಆದೇಶ ಹೊರಡಿಸುವ ಮೊದಲು ನಮ್ಮ ವಾದ ಆಲಿಸಬೇಕೆಂದು ಕೋರಿತ್ತು.