ಜಾತಿ ಗಣತಿ ವರದಿ ಚರ್ಚೆಗೆ ವಿಶೇಷ ಅಧಿವೇಶನ ಕರೆಯಬೇಕು: ಸತೀಶ ಜಾರಕಿಹೊಳಿ

Most read

ಬೆಳಗಾವಿ: ಜಾತಿ ಗಣತಿ ವರದಿಯನ್ನು ಜಾರಿಗೊಳಿಸುವುದಕ್ಕೂ ಮುನ್ನ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಅಗತ್ಯ. ಅದಕ್ಕಾಗಿ ವಿಶೇಷ ಅಧಿವೇಶನ ಕರೆಯಬೇಕಾದ ಅನಿವಾರ್ಯತೆ ಇದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ.

ಈ ವರದಿ ವಿಚಾರದಲ್ಲಿ ಯಾರಿಗೆಲ್ಲಾ ಆತಂಕ ಮತ್ತು ಗೊಂದಲ ಇದೆಯೋ ಅವರು ಅಧಿವೇಶನದಲ್ಲಿ ಮುಕ್ತವಾಗಿ ಚರ್ಚೆ ಮಾಡಬಹುದು. ಸುದೀರ್ಘವಾಗಿ ಚರ್ಚೆ ಆಗಬೇಕಾದ ಅವಶ್ಯಕತೆಯೂ ಇದೆ. ವಿಶೇಷ ಅಧಿವೇಶನ ಕರೆಯುವುದಕ್ಕಿಂತ ಉತ್ತಮ ಮಾರ್ಗ ಬೇರೊಂದಿಲ್ಲ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಈ ಜಾತಿ ಗಣತಿಯಿಂದ ರಾಜಕೀಯದ ಮೇಲೆ ಯಾವುದೇ ರೀತಿಯ ಪರಿಣಾಮ ಉಂಟಾಗುವುದಿಲ್ಲ. ನಮ್ಮ ರಾಜ್ಯದಲ್ಲಿ ಕೇವಲ 1,000 ಮತಗಳು ಮಾತ್ರ ಇರುವ ಸಮುದಾಯದವರೂ ಶಾಸಕರಾಗಿದ್ದಾರೆ. ವಸ್ತುಸ್ಥಿತಿ ಹೀಗಿರುವಾಗ ಪ್ರತಿ ಕ್ಷೇತ್ರದಲ್ಲಿ ಕನಿಷ್ಠ 70 ಸಾವಿರಕ್ಕೂ ಹೆಚ್ಚು ಮತ ಇರುವ ಸಮಾಜದ ನಾಯಕರು ಏಕೆ ಆತಂಕ ಪಡಬೇಕು? ಎಂದೂ ಅವರು ಪ್ರಶ್ನಿಸಿದರು.

ಒಕ್ಕಲಿಗ ಸಮುದಾಯದ 35 ಶಾಸಕರ ಜೊತೆಗೆ ಡಿ.ಕೆ.ಶಿವಕುಮಾರ್‌ ಅವರು ಸಭೆ ಮಾಡುತ್ತಿದ್ದಾರೆ. ಅದಕ್ಕಿಂತ ಮುಂದೆ ಹೋಗಿ ಸದನದಲ್ಲಿ ಚರ್ಚೆ ಆಗಬೇಕು ಎಂದು ನಾನು ಹೇಳುತ್ತಿದ್ದೇನೆ. ಜಾತಿ ಗಣತಿ ಕುರಿತೇ ನಾಲ್ಕು ದಿನ ಮೀಸಲಿಡಬೇಕು. ವರದಿಯ ಸರಿ ತಪ್ಪು ಕುರಿತು ಚರ್ಚೆ ನಡೆಯಲಿ. ಅಂತಿಮವಾಗಿ ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಅವರು ತಿಳಿಸಿದರು.

ಏ.16ರಂದು ಬಿಜೆಪಿ ಬೆಳಗಾವಿಯಲ್ಲಿ ಜನಾಕ್ರೋಶ ಯಾತ್ರೆ ನಡೆಸುತ್ತಿದೆ. ಹಾಲಿನ ದರ ಏರಿಕೆಯ ಜತೆಗೇ ಅವರು ಪೆಟ್ರೋಲ್, ಡೀಸೆಲ್‌ ದರ ಏರಿಸಿದ ಕೇಂದ್ರ ಸರ್ಕಾರದ ವಿರುದ್ಧವೂ ಪ್ರತಿಭಟನೆ ಮಾಡಬೇಕು. ಇದರಿಂದ ಜನರಿಗೆ ಒಳ್ಳೆಯದಾಗುತ್ತದೆ. ಆಗ ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ ಮಾಡುವುದು ತಪ್ಪುತ್ತದೆ ಎಂದು ಅವರು ಉತ್ತರಿಸಿದರು.

ಮಹಾರಾಷ್ಟ್ರದ ಜಲಾಶಯಗಳಿಂದ ರಾಜ್ಯಕ್ಕೆ ನೀರು ಬಿಡಲು ಮತ್ತೆ ಮನವಿ ಮಾಡಿಕೊಳ್ಳುತ್ತೇವೆ. ಅವರು ಕೃಷ್ಣಾ ನದಿಗೆ ನೀರು ಬಿಟ್ಟರೆ ನಾವು ಜತ್ತ ತಾಲ್ಲೂಕಿಗೆ ನೀರು ಬಿಡುವ ಯೋಚನೆ ಇದೆ. ಆ ಬಗ್ಗೆ ಮಾತುಕತೆ ಆಗಿದೆ. ಆದರೆ, ಅದು ಅನುಷ್ಠಾನಕ್ಕೆ ಬಂದಿಲ್ಲ. ಕಲ್ಲೋಳ, ಕಾರದಗಾ ಬ್ಯಾರೇಜ್‌ನಿಂದ ನೀರು ಬಿಡಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಸತೀಶ ಜಾರಕಿಹೊಳಿ ಹೇಳಿದರು.

More articles

Latest article