ಸಾಹಿತಿ ಡಾ. ಪಿ.ವಿ. ನಾರಾಯಣ ನಿಧನ; ಕಂಬನಿ ಮಿಡಿದ ಸಾಹಿತ್ಯ ವಲಯ

Most read

ಬೆಂಗಳೂರು: ಖ್ಯಾತ ಸಾಹಿತಿ ಪಿ.ವಿ. ನಾರಾಯಣ ಅವರು ನಿದನ ಹೊಂದಿದ್ದಾರೆ.  ಅವರು ವಯೋಸಹಜ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಇವರಿಗೆ ಪತ್ನಿ, ಪುತ್ರ ಇದ್ದಾರೆ. ಜಯನಗರದ 8ನೇ ಬ್ಲಾಕ್ ನಲ್ಲಿರುವ ಹೇಮಂತ ಅರಿಷ್ಠ ಅಪಾರ್ಟೆಂಟ್ ನಲ್ಲಿ ವಾಸಿಸುತ್ತಿದ್ದರು. ಪಿ. ವಿ. ನಾರಾಯಣ ಅವರು ಬೆಂಗಳೂರಿನ ವಿಜಯಾ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ, ನಿವೃತ್ತರಾಗಿದ್ದರು. ಅನೇಕ ಕನ್ನಡ ಪರ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದರು.

ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನಲ್ಲಿ 1942ರ ಡಿ.18 ರಂದು ಜನಿಸಿದ ಅವರು, ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿ, ಕರ್ನಾಟಕ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ನಲ್ಲಿ ಸ್ನಾತಕೋತ್ತರ ಪದವಿ ಹಾಗೂ ‘ವಚನ ಸಾಹಿತ್ಯ: ಒಂದು ಸಾಂಸ್ಕೃತಿಕ ಅಧ್ಯಯನ’ ಮಹಾಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್‌.ಡಿ. ಪಡೆದಿದ್ದಾರೆ.

ವಿಮರ್ಶೆ, ಸಂಶೋಧನೆ-ಬಳ್ಳಿಗಾವೆ, ಕಾಯಕತತ್ವ, ಚಂಪೂಕವಿಗಳು, ವಚನ ಚಳವಳಿ, ವಚನ ವ್ಯಾಸಂಗ, ಪದ್ಮಿನೀ ಪರಿಣಯ, ಅನುವಾದ-ಮದುವೆ ಮತ್ತು ನೀತಿ, ಹನ್ನೆರಡನೇ ರಾತ್ರಿ, ಅಶ್ವತ್ಥಾಮನ್, ಬುವಿಯ ಬಸಿರಿಗೆ ಪಯಣ, ಪಂಪ ರಾಮಾಯಣ, ಅಂತರ, ವಿಕಾಸ, ಶೋಧನೆ ನಿರ್ಧಾರ, ಧರ್ಮಕಾರಣ ಸೇರಿ ಒಟ್ಟು 45ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ಬಿ.ಎಂ.ಶ್ರೀ. ಪ್ರತಿಷ್ಠಾನದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.

ವಚನ ವ್ಯಾಸಂಗ ಕೃತಿಗೆ ಇಳಕಲ್ಲಿನ ಶ್ರೀವಿಜಯ ಮಹಂತೇಶ ಮಠ ಪುರಸ್ಕಾರ, ಸಮಾಜದ ಮೇಲೆ ವಿಜ್ಞಾನದ ಪ್ರಭಾವ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ, ‘ಶೋಧನೆ’ ಕಾದಂಬರಿಗೆ ಸುಧಾ ವಾರ ಪತ್ರಿಕೆಯ ಕಾದಂಬರಿ ಸ್ಪರ್ಧೆ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ ಸೇರಿ ವಿವಿಧ ಪ್ರಶಸ್ತಿಗಳು ಅವರಿಗೆ ಲಭಿಸಿವೆ.

More articles

Latest article