ಕುಂಭಮೇಳ ಕಾಲ್ತುಳಿತ ; ಕೇಂದ್ರ ಸರ್ಕಾರದ ಬಳಿ ಅಂಕಿಅಂಶವೇ ಇಲ್ಲವಂತೆ

Most read

ನವದೆಹಲಿ: ಇತ್ತೀಚೆಗೆ ನಡೆದ ಮಹಾಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತ ದುರ್ಘಟನೆಯ ತನಿಖೆಯನ್ನು ಉತ್ತರ ಪ್ರದೇಶದ ಸರ್ಕಾರ ನಡೆಸಿದ್ದು, ಸಾವು-ನೋವು ಹಾಗೂ ಗಾಯಗೊಂಡವರ ಬಗ್ಗೆ ಕೇಂದ್ರ ಸರ್ಕಾರದ ಬಳಿ ಅಂಕಿಅಂಶ ಇಲ್ಲ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ಇಂದು ತಿಳಿಸಿದೆ.

ಕಾಂಗ್ರೆಸ್ ಸಂಸದ ಕೆ.ಸಿ. ವೇಣುಗೋಪಾಲ್, ಕಾಲ್ತುಳಿತದಲ್ಲಿ ಮೃತಪಟ್ಟವರ ಹಾಗೂ ಗಾಯಾಳುಗಳ ಸಂಖ್ಯೆ ಮತ್ತು ಕಾರಣ ಪತ್ತೆ ಹಚ್ಚಲು ಅಧಿಕಾರಿಗಳು ತೆಗೆದುಕೊಂಡ ಕ್ರಮಗಳನ್ನು ಕುರಿತು ಪ್ರಶ್ನಿಸಿದರು.

ಈ ಸಂಬಂಧ ಉತ್ತರಿಸಿದ ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ನಿತ್ಯಾನಂದ ರಾಯ್, ಸಂವಿಧಾನದ ಏಳನೇ ವಿಧಿಯ ಪ್ರಕಾರ ಇದು ರಾಜ್ಯಕ್ಕೆ ಸಂಬಂಧಪಟ್ಟ ವಿಷಯವಾಗಿದೆ. ಧಾರ್ಮಿಕ ಸಭೆ, ಜನಸಂದಣಿ ನಿರ್ವಹಣೆ, ಭಕ್ತರಿಗೆ ಸೌಲಭ್ಯ ಒದಗಿಸುವುದು, ಇಂತಹ ಸಭೆಗಳ ವೇಳೆ ವಿಪತ್ತು ನಿರ್ವಹಣೆ ಇತ್ಯಾದಿಗಳು ‘ಸಾರ್ವಜನಿಕ ವ್ಯವಸ್ಧೆ’ ಹಾಗೂ ‘ಪೊಲೀಸ್‌’ಗೆ ಸಂಬಂಧಪಟ್ಟದ್ದಾಗಿದೆ. ಇವು ರಾಜ್ಯದ ಅಧೀನತೆಗೆ ಒಳಪಟ್ಟಿರುತ್ತವೆ ಎಂದು ತಿಳಿಸಿದ್ದಾರೆ.

ರಾಜ್ಯಗಳಲ್ಲಿ ಸಂಭವಿಸಿದ ವಿಪತ್ತುಗಳ ಪರಿಶೀಲನೆ ನಡೆಸುವುದು, ಕಾಲ್ತುಳಿತ ಸೇರಿದಂತೆ ಸಂತ್ರಸ್ತರ ಕುಟುಂಬಗಳಿಗೆ ಹಣಕಾಸಿನ ನೆರವು ನೀಡುವುದು ಸಹ ಆಯಾ ರಾಜ್ಯಗಳ ವ್ಯಾಪ್ತಿಗೆ ಬರುತ್ತವೆ. ಅಂತಹ ಸನ್ನಿವೇಶಗಳನ್ನು ನಿಭಾಯಿಸಲು ರಾಜ್ಯ ಸರ್ಕಾರಗಳು ಸಮರ್ಥವಾಗಿವೆ. ಈ ಸಂಬಂಧ ಕೇಂದ್ರವು ಅಂಕಿಅಂಶವನ್ನು ನಿರ್ವಹಿಸುವುದಿಲ್ಲ ಎಂದು ಹೇಳಿದ್ದಾರೆ.

ಹೆಚ್ಚು ಜನರು ಸೇರುವ ಸ್ಥಳಗಳಲ್ಲಿ ಜನಸಂದಣಿ ನಿರ್ವಹಣೆ ಕುರಿತಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ವಿವರವಾದ ಮಾರ್ಗಸೂಚಿಗಳನ್ನು ನಿರ್ದೇಶಿಸಿದೆ’ ಎಂದು ಅವರು ತಿಳಿಸಿದ್ದಾರೆ. ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಕುಂಭಮೇಳವು ಜನವರಿ 13ರಿಂದ ಆರಂಭವಾಗಿ ಫೆಬ್ರುವರಿ 26ರಂದು ಮುಕ್ತಾಯಗೊಂಡಿತ್ತು. ಆದರೆ ಜನವರಿ 29, ಮೌನಿ ಅಮಾವಾಸ್ಯೆಯಂದು ಸಂಭವಿಸಿದ್ದ ಕಾಲ್ತುಳಿತದಲ್ಲಿ 30 ಮಂದಿ ಮೃತಪಟ್ಟು, 60 ಮಂದಿ ಗಾಯಗೊಂಡಿದ್ದರು.

More articles

Latest article