ಬೆಂಗಳೂರು: ಕೋಲಾರ ಜಿಲ್ಲಾ ಸಹಕಾರ ಹಾಲು ಒಕ್ಕೂಟದ ವತಿಯಿಂದ ಜಿಲ್ಲೆಯ ಹಾಲು ಉತ್ಪಾದಕರಿಗೆ 2 ರೂಪಾಯಿಗಳ ಪ್ರೋತ್ಸಾಹ ಧನವನ್ನು ಹೆಚ್ಚಿಗೆ ನೀಡಲಾಗುವುದು ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಬಿ. ಎಸ್ ಸುರೇಶ (ಬೈರತಿ) ತಿಳಿಸಿದ್ದಾರೆ.
ವಿಧಾನಸೌಧದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು ಕೋಲಾರ ಹಾಲು ಒಕ್ಕೂಟ ಹಾಲು ಉತ್ಪಾದಕರ ಶ್ರೇಯೋಭಿವೃದ್ಧಿಗಾಗಿ ಕೋಲಾರ ಜಿಲ್ಲಾ ಒಕ್ಕೂಟ ಈ ತೀರ್ಮಾನ ತೆಗೆದುಕೊಂಡಿದ್ದು, ಇದೆ ಮಾರ್ಚ್ 20 ರಿಂದ 2 ರೂಪಾಯಿ ಪ್ರೋತ್ಸಾಹ ಧನವನ್ನು ನೀಡುತ್ತೇವೆ ಎಂದು ತಿಳಿಸಿದರು.
ಪ್ರಸ್ತುತ 6.64 ಲಕ್ಷ ಲೀಟರ್ ಹಾಲನ್ನು ಕೋಲಾರ ಜಿಲ್ಲಾ ಹಾಲು ಒಕ್ಕೂಟದಿಂದ ಶೇಖರಣೆಯಾಗುತ್ತಿದ್ದು, 2025-26ನೇ ಸಾಲಿಗೆ 7.50 ಲಕ್ಷ ಲೀಟರ್ ಹಾಲು ಶೇಖರಣೆ ಗುರಿಯನ್ನು ಒಕ್ಕೂಟವು ಹೊಂದಿದೆ. ಬೇಸಿಗೆ ಕಾಲ ಪ್ರಾರಂಭವಾಗಿರುವುದರಿಂದ ಹೈನು ರಾಸುಗಳಲ್ಲಿ ಹಾಲಿನ ಇಳುವರಿ ಕಡಿಮೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಹೈನುಗಾರಿಕೆಯನ್ನು ಉತ್ತೇಜಿಸಲು ಹಾಗೂ ಹಾಲು ಉತ್ಪಾದನಾ ವೆಚ್ಚ ಅಧಿಕವಾಗಿರುವುದನ್ನು ಸರಿದೂಗಿಸುವ ಅವಶ್ಯಕತೆ ಇರುವುದರಿಂದ ಹಾಲು ಉತ್ಪಾದಕರ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿ ಇರಿಸಿಕೊಂಡು ಹಾಲು ಶೇಖರಣೆ ಮತ್ತು ಗುಣಮಟ್ಟವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರೋತ್ಸಾಹ ಧನವನ್ನು ಹೆಚ್ಚಿಸಲಾಗಿದೆ ಎಂದು ಸಚಿವ ಬೈರತಿ ಸುರೇಶ್ ಹೇಳಿದರು.
ರಾಜ್ಯದ ಇತರೆ ಜಿಲ್ಲೆಗಳ ಹಾಲು ಒಕ್ಕೂಟಗಳ ಪ್ರೋತ್ಸಾಹಧನಕ್ಕೆ ಹೋಲಿಸಿದರೆ ಕೋಲಾರ ಜಿಲ್ಲಾ ಹಾಲು ಒಕ್ಕೂಟ 2 ರೂಪಾಯಿಯನ್ನು ಹೆಚ್ಚಿಗೆ ನೀಡಲಾಗುತ್ತಿದ್ದು, ಅಂದರೆ ಹಾಲು ಉತ್ಪಾದಕರಿಂದ ಪ್ರತಿ ಲೀಟರ್ ಹಾಲನ್ನು ರೂ 33.40 ಪೈಸೆಗಳಿಗೆ ಖರೀದಿಸಲಾಗುತ್ತದೆ ಇದು ಯುಗಾದಿ ಹಬ್ಬಕ್ಕೆ ನಮ್ಮ ಸರ್ಕಾರ ಹಾಲು ಉತ್ಪಾದಕರಿಗೆ ನೀಡಿದ ಕೊಡುಗೆ ಎಂದು ಸಂತಸದಿಂದ ಹೇಳಲು ಇಚ್ಚಿಸುತ್ತೇನೆ. ಬೇಸಿಗೆ ಕಾಲದಲ್ಲಿಯೂ ಹಾಲು ಉತ್ಪಾದನೆಯನ್ನು ಹೆಚ್ಚು ಮಾಡುವ ಉದ್ದೇಶದಿಂದ ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ತೊರಲಕ್ಕಿ ಗ್ರಾಮದಲ್ಲಿ ಎನ್.ಡಿ.ಡಿ.ಬಿ (National Dairy Development Board) ಮತ್ತು ಕರ್ನಾಟಕ ಹಾಲು ಮಹಾ ಮಂಡಳ (KMF) ಸಹಾಯೋಗದೊಂದಿಗೆ ಶ್ರೀ ಮಾರಿಕಾಂಭ ಮೇವು ಅಭಿವೃದ್ಧಿ ರೈತ ಸಹಕಾರ ಸಂಘ ನಿಯಮಿತವನ್ನು ಸ್ಥಾಪಿಸಲಾಗಿದೆ. ಸದರಿ ಸಂಘದ ವತಿಯಿಂದ ವಿಶೇಷವಾಗಿ ಹಾಲು ಉತ್ಪಾದಕರಿಗೆ ಸಕಾಲದಲ್ಲಿ ಮೇವು ಬೆಳೆಯಲು ವಿವಿಧ ತಳಿಯ ಮೇವಿನ ಬೀಜವನ್ನು ರಿಯಾಯಿತಿ ದರದಲ್ಲಿ ವಿತರಿಸಲು ಇದು ಸಹಕಾರಿಯಾಗಲಿದೆ. ರಸಮೇವು ಪ್ರತಿ ಕೆ.ಜಿ ಗೆ 10 ರೂಪಾಯಿಯಂತೆ ಮಾರುಕಟ್ಟೆ ದರ ಇದ್ದು, ರೂ. 6 ರಂತೆ ರಿಯಾಯಿತಿ ದರದಲ್ಲಿ ಹಾಲು ಉತ್ಪಾದಕರಿಗೆ ಮಾರಾಟ ಮಾಡಲು ಕ್ರಮ ವಹಿಸಲಾಗಿದೆ ಎಂದು ಅವರು ತಿಳಿಸಿದರು.
ಕೋಲಾರ ಜಿಲ್ಲೆಯಲ್ಲಿ 951 ಹಾಲು ಉತ್ಪಾದಕರ ಸಹಕಾರ ಸಂಘಗಳಿದ್ದು, ಕೋಲಾರ – ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ದಿನಾಂಕ: 01-01-2025 ರಂದು ವಿಭಜನೆಗೊಂಡಿದ್ದು, ಅಂದಿನಿಂದ ಕೋಲಾರ ಜಿಲ್ಲಾ ಸಹಕಾರ ಹಾಲು ಒಕ್ಕೂಟ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದೆ. ಕಳೆದ 3 ತಿಂಗಳಲ್ಲಿ 34 ನೂತನ ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಕೋಲಾರ ಜಿಲ್ಲಾ ಹಾಲು ಒಕ್ಕೂಟದಲ್ಲಿ ಸೇರಿಸಲಾಗಿದೆ. ಈಗ ಹೆಚ್ಚಿಸಿರುವ ಪ್ರೋತ್ಸಾಹ ಧನವು ಸುಮಾರು 45 ಸಾವಿರ ಕುಟುಂಬಗಳಿಗೆ ಸಹಾಯವಾಗಲಿದೆ. ಕೋಲಾರ ಜಿಲ್ಲಾ ಹಾಲು ಒಕ್ಕೂಟದ ವತಿಯಿಂದ ಮುಖ್ಯವಾಗಿ 3 ಹೊಸ ಯೋಜನೆಗಳು ಸದ್ಯದಲ್ಲೆ ಜಾರಿಗೆ ಬರಲಿದ್ದು ಅದರಲ್ಲಿ ಮುಖ್ಯವಾಗಿ ಎಂ.ವಿ.ಕೆ ಗೋಲ್ಡ್ ಡೈರಿಯನ್ನು ಕೋಲಾರ ಮುಖ್ಯ ಡೈರಿ ಆವರಣ ಪಕ್ಕದಲ್ಲಿ ತಲೆ ಎತ್ತಲಿದ್ದು, ಇದಕ್ಕಾಗಿ 220 ಕೋಟಿ ರೂಪಾಯಿಗಳ ವೆಚ್ಚ ತಗುಲಲಿದೆ. ಈಗಾಗಲೇ ಶೇ. 70 ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಕೆಲವೇ ದಿನಗಳ ಪೂರ್ಣಗೊಳ್ಳಲಿದ್ದು, ಇನ್ನೂ ಒಂದು ವರ್ಷದಲ್ಲಿ ನೂತನ ಡೈರಿ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.
ಸುಮಾರು 70 ಕೋಟಿ ವೆಚ್ಚದಲ್ಲಿ 12 M.W ಸೌರಶಕ್ತಿ ಘಟಕ ಪ್ರಾರಂಭವಾಗಲಿದೆ. ಪ್ರತಿ ತಿಂಗಳು 2 ಕೋಟಿ ರೂಪಾಯಿ ವಿದ್ಯುತ್ ವೆಚ್ಚವನ್ನು ಕೋಲಾರ ಹಾಲು ಒಕ್ಕೂಟ ಭರಿಸುತ್ತಿದ್ದು, ಪ್ರತಿ ತಿಂಗಳು 1 ಕೋಟಿಗೂ ಅಧಿಕ ವಿದ್ಯುತ್ ಬಿಲ್ ಇದರಿಂದಾಗಿ ಉಳಿತಾಯವಾಗಲಿದೆ. ಕೋಲಾರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘದ ಕುಟುಂಬದ ಹೆಣ್ಣು ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕಾಗಿ ಎರಡು ಪ್ರತ್ಯೇಕ ಹಾಸ್ಟೆಲ್‌ಗಳನ್ನು ತೆರೆಯಲಾಗಿದೆ ಎಂದು ಕೋಲಾರ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷರು ಹಾಗೂ ಮಾಲೂರು ಶಾಸಕರಾದ ಕೆ.ವೈ. ನಂಜೇಗೌಡ ರವರು ಇದೆ ವೇಳೆ ತಿಳಿಸಿದರು. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಕೋಲಾರ ಶಾಸಕ ಕೊತ್ತೂರು ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಎಂ.ಎಲ್ ಅನಿಲ್ ಕುಮಾರ್, ಸಹಾಯ ಆಯುಕ್ತರು ಹಾಗೂ ಕೋಲಾರ ಹಾಲು ಒಕ್ಕೂಟದ ಆಡಳಿತಾಧಿಕಾರಿ ಡಾ|| ಮೈತ್ರಿ ಹೆಚ್.ಪಿ.ಎಸ್ ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.