ನಾಗ್ಪುರ ಹಿಂಸಾಚಾರ: ಶಾಂತಿ ಕಾಪಾಡುವಂತೆ ಮಹಾ ಸಿಎಂಗೆ ಮಮತಾ ಬ್ಯಾನರ್ಜಿ ಆಗ್ರಹ

Most read

ಮುಂಬೈ: ಹಿಂಸಾಚಾರ ಪೀಡಿತ ನಾಗ್ಪುರದಲ್ಲಿ ಶಾಂತಿ ಕಾಪಾಡುವಂತೆ ಮತ್ತು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಶಿವಸೇನೆ (ಯುಬಿಟಿ) ಸಂಸದೆ ಪ್ರಿಯಾಂಕಾ ಚತುರ್ವೇದಿ ಒತ್ತಾಯಿಸಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಮಮತಾ, ಬ್ಯಾನರ್ಜಿ ಮಹಾರಾಷ್ಟ್ರದಲ್ಲಿ ಯಾವುದೇ ಸಮಾಧಿಯನ್ನು ಹಾನಿಗೊಳಿಸುವುದು ಸರಿಯಾದ ಕ್ರಮ ಅಲ್ಲ. ಇದರಿಂದ ಅಲ್ಲಿ ಪರಸ್ಪರ ಸಹೋದರತ್ವ, ಶಾಂತಿ ಮತ್ತು ಸಾಮರಸ್ಯವನ್ನು ಹಾಳಾಗುತ್ತಿದೆ ಎಂದು ಹೇಳಿದ್ದಾರೆ.

ಹಿಂಸಾಚಾರ ಪೀಡಿತ ನಾಗ್ಪುರದಲ್ಲಿ ಶಾಂತಿ ಮರುಸ್ಥಾಪಿಸುವಂತೆ ಅಲ್ಲಿನ ಸರ್ಕಾರ ಕಠಿಣ ಕಾನೂನುಗಳನ್ನು ಜಾರಿಗೊಳಿಸುವಂತೆ ಮಮತಾ ಒತ್ತಾಯಿಸಿದ್ದಾರೆ. ಪ್ರಿಯಾಂಕಾ ಚತುರ್ವೇದಿ, ರಾಜ್ಯದಲ್ಲಿ ಹಿಂಸಾಚಾರವನ್ನು ಪ್ರಚೋದಿಸುವುದು, ಅಸ್ಥಿರತೆಯನ್ನು ಸೃಷ್ಟಿಸುವ ಮೂಲಕ ಹೆಚ್ಚುತ್ತಿರುವ ನಿರುದ್ಯೋಗ ಮತ್ತು ರೈತರ ಆತ್ಮಹತ್ಯೆಗಳ ಸಮಸ್ಯೆ ಕುರಿತ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಬಹುದು ಎಂದುಕೊಂಡಂತಿದೆ ಎಂದು ಫಡಣವೀಸ್‌ ಸರ್ಕಾರವನ್ನು ಗುರಿಯಾಗಿಸಿಕೊಂಡು ಟೀಕಿಸಿದ್ದಾರೆ.

ಮೊಘಲ್‌ ದೊರೆ ಔರಂಗಜೇಬ ಸಮಾಧಿ ತೆರವುಗೊಳಿಸುವಂತೆ ಆಗ್ರಹಿಸಿ ಬಜರಂಗದಳದ ಸದಸ್ಯರು ಸೋಮವಾರ ನಡೆಸಿದ ಪ್ರತಿಭಟನೆ ವೇಳೆ, ಮುಸ್ಲಿಂ ಸಮುದಾಯದ ಪವಿತ್ರ ಗ್ರಂಥ ಕುರಾನ್‌ ಅನ್ನು ಸುಟ್ಟುಹಾಕಲಾಗಿದೆ ಎಂಬ ವದಂತಿ ಹಬ್ಬಿದ ಪರಿಣಾಮ ನಾಗ್ಪುರದ ಕೇಂದ್ರ ಭಾಗದಲ್ಲಿ ಹಿಂಸಾಚಾರ ನಡೆದಿದೆ.

ಈ ಘಟನೆ ಕುರಿತು ವಿಧಾನಸಭೆಯಲ್ಲಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್,  ಈ ಹಿಂಸಾಚಾರ ಆಕಸ್ಮಿಕವಾಗಿ ನಡೆದಿಲ್ಲ. ಇದು ಪೂರ್ವ ಯೋಜಿತ ದಾಳಿ ಎಂದು ಆರೋಪಿಸಿದ್ದಾರೆ. ಈ ದಾಳಿಯು ಸಾಮಾಜಿಕ ಸಾಮರಸ್ಯವನ್ನು ಭಂಗಗೊಳಿಸುವ ಉದ್ದೇಶದಿಂದ ನಡೆದಿದೆ. ಪೊಲೀಸರ ಮೇಲೆ ಉದ್ದೇಶಪೂರ್ವಕವಾಗಿ ದಾಳಿ ನಡೆಸಲಾಗಿದ್ದು, ಗೊಂದಲ ಸೃಷ್ಟಿಸುವ ಪ್ರಯತ್ನ ಮಾಡಲಾಗಿದೆ. ಆರೋಪಿಗಳು ಯಾರೇ ಆಗಿರಲಿ, ಯಾವ ಧರ್ಮಕ್ಕೆ ಸೇರಿದವರಾಗಿರಲಿ, ತಪ್ಪಿತಸ್ಥರನ್ನು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಕಾನೂನನ್ನು ಕೈಗೆ ತೆಗೆದುಕೊಳ್ಳಲು ಯಾರಿಗೂ ಅನುಮತಿ ಇಲ್ಲ. ಶಾಂತಿ ಕಾಪಾಡುವಂತೆ ಎಲ್ಲರಿಗೂ ಮನವಿ ಮಾಡುತ್ತೇನೆ ಎಂದು ಹೇಳಿದರು.

More articles

Latest article