ಚಿನ್ನ ಕಳ್ಳ ಸಾಗಣೆ ಪ್ರಕರಣ: ರನ್ಯಾ ರಾವ್ ಮಲತಂದೆ ಡಿಜಿಪಿ ರಾಮಚಂದ್ರ ರಾವ್ ವಿಚಾರಣೆ

Most read


ಬೆಂಗಳೂರು: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಶಿಷ್ಟಾಚಾರ ನಿಯಮ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟಿ ರನ್ಯಾ ರಾವ್ ಅವರ ಮಲತಂದೆ ಡಿಜಿಪಿ ರಾಮಚಂದ್ರ ರಾವ್‌ ಅವರನ್ನು ಐಎಎಸ್‌ ಅಧಿಕಾರಿ ಗೌರವ ಗುಪ್ತ ನೇತೃತ್ವದ ತನಿಖಾ ತಂಡ ವಿಚಾರಣೆಗೆ ಒಳಪಡಿಸಿದೆ ಎಂದು ತಿಳಿದು ಬಂದಿದೆ.

ವಿಚಾರಣೆಗೆ ಹಾಜರಾಗುವಂತೆ ರಾಮಚಂದ್ರ ರಾವ್‌ ಅವರಿಗೆ ಸಮನ್ಸ್ ಜಾರಿಗೊಳಿಸಲಾಗಿತ್ತು. ನಿನ್ನೆ ಸಂಜೆ 5 ಗಂಟೆಯಿಂದ ಒಂದು ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಿ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ. ವಿಮಾನ ನಿಲ್ದಾಣದ ಪೊಲೀಸರು ಮತ್ತು ಸಿಬ್ಬಂದಿ ನೀಡಿರುವ ಹೇಳಿಕೆಗಳನ್ನು ಕುರಿತೂ ಪ್ರಶ್ನೆಗಳನ್ನು ಕೇಳಲಾಗಿದೆ ಎಂದು ಮೂಲಗಳು ತಿಳಿಸಿವೆ. ರಾಜ್ಯ ಪೊಲೀಸ್ ವಸತಿ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕರಾಗಿದ್ದ ರಾಮಚಂದ್ರ ರಾವ್ ಅವರನ್ನು ಮಾರ್ಚ್ 15ರಂದು ಸರ್ಕಾರ ಕಡ್ಡಾಯ ರಜೆ ಮೇಲೆ ಕಳುಹಿಸಿದೆ.

ಈ ಮಧ್ಯೆ ರನ್ಯಾ ರಾವ್‌ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಬೆಂಗಳೂರಿನ 64ನೇ ಸಿಸಿಎಚ್‌ ನ್ಯಾಯಾಲಯ ಮಾರ್ಚ್‌ 19ಕ್ಕೆ ಮುಂದೂಡಿದೆ. ಕಂದಾಯ ಗುಪ್ತಚರ ನ್ಯಾಯಾಲಯ (ಡಿಆರ್‌ ಐ) ಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಸೂಚಿಸಿ ಇಚಾರಣೆಯನ್ನು ಮುಂದೂಡಿದೆ.
ಆಕ್ಷೇಪಣೆಗಳನ್ನು ಸಲ್ಲಿಸಿದ ನಂತರ ವಿಚಾರಣೆ ಮುಂದುವರೆಯಲಿದೆ.

ಪ್ರಕರಣದ ಎರಡನೇ ಆರೋಪಿ ಹೋಟೆಲ್‌ ಉದ್ಯಮಿ ತರುಣ್‌ ರಾಜ್‌ ಅವರನ್ನು 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ತರುಣ್‌ ರಾಜ್‌ ಕಳ್ಳ ಸಾಗಣೆ ಮತ್ತು ಭಾರತದಲ್ಲಿ ಚಿನ್ನವನ್ನು ವಿತರಣೆ ಮಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದ್ದರು.

ರನ್ಯಾ ಅವರನ್ನು ಮಾರ್ಚ್‌ 3ರಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಬಂಧಿಸಲಾಗಿತ್ತು. ಆಕೆಯಿಂದ 12.56 ಕೋಟಿ ರೂ. ಮೌಲ್ಯದ 14.2 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿತ್ತು. ರನ್ಯಾ ನಿವಾಸದಿಂದ 2.06 ಕೋಟಿ ಮೌಲ್ಯದ ಚಿನ್ನಾಭರಣ ಮತ್ತು 2.67 ಕೋಟಿ ರೂ.ನಗದು ಜಪ್ತಿ ಮಾಡಲಾಗಿತ್ತು. ರನ್ಯಾ ಅಪಾರ ಪ್ರಮೆಣದ ಚಿನ್ನವನ್ನು ಕಳ್ಳ ಸಾಗಣೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ರನ್ಯಾ ಮತ್ತು ಜತಿನ್‌ ಇಬ್ಬರ ವಿರುದ್ಧವೂ ಕಸ್ಟಮ್ಸ್‌ ಮತ್ತು ಕಳ್ಳ ಸಾಗಣೆ ಚಟುವಟಿಕೆಗಳ ನಿಯಂತ್ರಣ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ರನ್ಯಾ ಪತಿ ಜತಿನ್ ವಿಜಯಕುಮಾರ್‌ ಹುಕ್ಕೇರಿ ಅವರ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಮಧ್ಯಂತರ ಆದೇಶ ನೀಡಿ ಅರ್ಜಿ ವಿಚಾರಣೆಯನ್ನು ಮಾರ್ಚ್ 24ಕ್ಕೆ ಮುಂದೂಡಿದೆ. ಆರೋಪಿ ಜತಿನ್ ಹುಕ್ಕೇರಿ ತಮ್ಮ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಸೋಮವಾರ ನ್ಯಾ.ಹೇಮಂತ್ ಚಂದನಗೌಡರ್ ಪೀಠದಲ್ಲಿ ಅರ್ಜಿ ವಿಚಾರಣೆ ನಡೆದಿದ್ದು, ಜತಿನ್ ಪರವಾಗಿ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ವಾದ ಮಂಡಿಸಿದ್ದರು. ಪತ್ನಿಯ ಮೇಲಿನ ಆರೋಪಕ್ಕೂ ಜತಿನ್ಗೂ ಸಂಬಂಧವಿಲ್ಲ ಎಂದು ವಾದಿಸಿದ್ದರು.

ನವೆಂಬರ್‌ ನಲ್ಲಿ ರನ್ಯಾ ರಾವ್ ಮತ್ತು ಜತಿನ್ ಮದುವೆ ನೆರವೇರಿತ್ತು. ಆದರೆ ಡಿಸೆಂಬರ್‌ ನಲ್ಲಿ ದಾಂಪತ್ಯದಲ್ಲಿ ಬಿರುಕು ಮೂಡಲಾರಂಭಿಸಿತ್ತು ಎಂದು ಜತಿನ್ ಹುಕ್ಕೇರಿ ಹೈಕೋರ್ಟ್‌ ಗೆ ಸಲ್ಲಿಸಿರುವ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ವಿವಾಹವಾದ ಎರಡೇ ತಿಂಗಳಿಗೆ ರನ್ಯಾ ದುಬೈಗೆ ಪದೇ ಪದೇ ಸಂಚಾರ ಆರಂಭಿಸಿದ್ದರು. ಇದು ತಮಗೆ ಅನುಮಾನ ಮೂಡಿಸಿದ್ದು, ಇಬ್ಬರ ನಡುವೆ ಕಲಹಕ್ಕೆ ನಾಂದಿ ಹಾಡಿತ್ತು. ಕೊನೆಗೆ ವಿವಾಹ ವಿಚ್ಛೇದನದ ಹಂತಕ್ಕೆ ಬಂದು ನಿಂತಿದೆ ಎಂದೂ ಜತಿನ್‌ ಮಾಹಿತಿ ನೀಡಿದ್ದಾರೆ.


More articles

Latest article