ಬೆಂಗಳೂರು: ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ವಿಧಾನಸಭೆ ಉಪಸಭಾಪತಿ ರುದ್ರಪ್ಪ ಲಮಾಣಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆಯಿಂದ ಬೆಂಗಳೂರಿಗೆ ಕರೆತಂದು ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ನಿನ್ನೆ ಸದನದ ಕಲಾಪ ಮುಗಿಸಿಕೊಂಡು ಬೆಂಗಳೂರಿನಿಂದ ಹಾವೇರಿಗೆ ತೆರಳುವ ಮಾರ್ಗದಲ್ಲಿ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಜೆ.ಜೆ.ಹಳ್ಳಿ ಗ್ರಾಮದ ಬಳಿ ರಸ್ತೆ ಅಪಘಾತ ಸಂಭವಿಸಿತ್ತು. ಕೂಡಲೇ ಅವರನ್ನು ದಾವಣಗೆರೆಯ ಎಸ್. ಎಸ್. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ರುದ್ರಪ್ಪ ಲಮಾಣಿ ಅವರನ್ನು ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದು ಸಹಜವಾಗಿಯೇ ಅವರ ಬೆಂಬಲಿಗರು ಮತ್ತು ಅಭಿಮಾನಿಗಳಿಗೆ ಆತಂಕ ಮೂಡಿಸಿದೆ.
ಹಾವೇರಿಗೆ ತೆರಳುತ್ತಿದ್ದಾಗ ಎಳೆನೀರು ಕುಡಿಯುವ ಸಲುವಾಗಿ ಹಿರಿಯೂರು ತಾಲ್ಲೂಕಿನ ಜೆಜೆ ಹಳ್ಳಿ ಬಳಿ ಕಾರನ್ನು ನಿಲ್ಲಿಸಿ ಇಳಿದಿದ್ದಾರೆ. ಅದೇ ವೇಳೆ ವೇಗವಾಗಿ ಬಂದ ಬೈಕ್ ರುದ್ರಪ್ಪ ಲಮಾಣಿ ಅವರಿಗೆ ಗುದ್ದಿದೆ. ಪರಿಣಾಮ ಅವರು ಸ್ಥಳದಲ್ಲೇ ಕುಸಿದು ಬಿದ್ದಿದ್ದು, ಹಣೆ, ಹಲ್ಲು, ಗದ್ದ ಮತ್ತು ಬಲ ಮೊಣಕಾಲಿಗೆ ಗಾಯವಾಗಿತ್ತು. ಕೂಡಲೇ ಅವರಿಗೆ ಹಿರಿಯೂರಿನಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ನಂತರ ದಾವಣಗೆರೆಯ ಎಸ್ಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಅವರ ಆರೋಗ್ಯ ಸ್ಥಿರವಾಗಿದೆ. ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದರು. ಆದರೂ ಮುನ್ನೆಚ್ಚರಿಕೆಯ ಕ್ರಮವಾಗಿ ದಾವಣಗೆರೆ ಎಸ್. ಎಸ್. ಆಸ್ಪತ್ರೆಯಿಂದ ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಗಳೂರಿನ ವೈದ್ಯರೂ ಸಹ ಅವರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ.