ಬೆಂಗಳೂರು: ರಾಜ್ಯದಲ್ಲಿ 10 ವಿದ್ಯಾರ್ಥಿಗಳಿಗಿಂತ ಕಡಿಮೆ ದಾಖಲಾತಿ ಇರುವ 4,264 ಶಾಲೆಗಳಿವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಶಾಲೆಗಳಲ್ಲಿ ದಾಖಲಾತಿ ಹೆಚ್ಚಿಸುವ ನಿಟ್ಟಿನಲ್ಲಿ ಮೇ ತಿಂಗಳಲ್ಲಿ ವಿಶೇಷ ಅಭಿಯಾನ ನಡೆಲಾಗುವುದು ಎಂದೂ ಅವರು ವಿಧಾನಸಭೆಗೆ ಮಾಹಿತಿ ನೀಡಿದ್ದಾರೆ. ಒಟ್ಟು ಶಾಲೆಗಳ ಶೇ.20 ರಷ್ಟು ಶಾಲೆಗಳಲ್ಲಿ ದಾಖಲಾತಿ (4,264 ಶಾಲೆಗಳು) 10 ವಿದ್ಯಾರ್ಥಿಗಳಿಗಿಂತ ಕಡಿಮೆ ಇದೆ. 10 ವಿದ್ಯಾರ್ಥಿಗಳಿಗಿಂತ ಕಡಿಮೆ ಇರುವ ಒಂದು ಪ್ರೌಢಶಾಲೆಯೂ ಇದೆ ಎಂದು ವಿಧಾನಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.
ಕರ್ನಾಟಕದಲ್ಲಿ 49,679 ಸರ್ಕಾರಿ ಶಾಲೆಗಳಿವೆ. ಇದರಲ್ಲಿ 21,045 ಶಾಲೆಗಳು ಪ್ರಾಥಮಿಕ ( 1-5ನೇ ತರಗತಿ) ಮತ್ತು 1 ರಿಂದ 8ನೇ ತರಗತಿವರೆಗಿನ 22,086 ಉನ್ನತ ಪ್ರಾಥಮಿಕ ಶಾಲೆಗಳು ಮತ್ತು 5,051 ಪ್ರೌಢಶಾಲೆಗಳಿವೆ. ದಾಖಲಾತಿ ಕಡಿಎಮ ಎಂಬ ಕಾರಣಕ್ಕೆ ಯಾವುದೇ ಸರ್ಕಾರಿ ಶಾಲೆಯನ್ನು ಮುಚ್ಚುವುದಿಲ್ಲ. ಭವಿಷ್ಯದಲ್ಲಿ ಮಕ್ಕಳ ದಾಖಲಾತಿಯಾದರೆ ಆ ಶಾಲೆಯನ್ನು ಪುನಾರಂಭಿಸಲಾಗುತ್ತದೆ ಎಂದೂ ತಿಳಿಸಿದ್ದಾರೆ.
ಮೇ ತಿಂಗಳಲ್ಲಿ ಮಕ್ಕಳ ದಾಖಲಾತಿಗೆ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗುತ್ತದೆ. ಜೂನ್ ತಿಂಗಳಲ್ಲಿ ಎಂದಿನಂತೆ ಸಾಮಾನ್ಯ ಅಭಿಯಾನ ನಡೆಯುತ್ತಿದೆ. ಮನೆ ಮನೆ ಭೇಟಿ, ಕರಪತ್ರ ಹಂಚಿಕೆ, ಜಾಥಾ ಮೊದಲಾದ ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಶಾಲಾ ಮಕ್ಕಳಿಗೆ ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಮಧ್ಯಾಹ್ನದ ಊಟ, ಶೂ, ಸಾಕ್ಸ್ ಪೂರೈಕೆ ಮಾಡಲಾಗುತ್ತದೆ.
ಜನನ ದರ ಕಡಿಮೆ ಇರುವುದು, ಕೆಲವು ಪ್ರಾಂತಗಳಲ್ಲಿ ವಲಸೆ ಹೆಚ್ಚಿರುವುದು, ಖಾಸಗಿ ಶಾಲೆಗಳಿಗೆ ಆದ್ಯತೆ ಮತ್ತು ಸಾಮಾಜಿಕ ಆರ್ಥಿಕ ಕಾರಣಗಳಿಗೆ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕಡಿಮೆಯಾಗಲು ಕಾರಣ ಎಂದು ಅಧಿಕಾರಿಗಳು ಹೇಳುತ್ತಾರೆ. ಗ್ರಾಮೀಣ ಪ್ರದೇಶಗಳ ನಿವಾಸಿಗಳು ಉದ್ಯೋಗ ಅರಸಿಕೊಂಡು ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿರುವುದೂ ಕಾರಣವಾಗಿದೆ. ಮೇಲಾಗಿ ಗ್ರಾಮೀಣ ಪ್ರದೇಶಗಳಲ್ಲಿ ಖಾಸಗಿ ಶಾಲೆಗಳು ಪೈಪೋಟಿ ನೀಡುತ್ತಿರುವುದು ಹೆಚ್ಚುತ್ತಿದೆ. ಶಿಕ್ಷಣದ ಮಹತ್ವದ ಅರಿವಿನ ಕೊರತೆಯಿಂದಾಗಿಯೂ ಅನೇಕ ಪೋಷಕರು ಮಕ್ಕಳನ್ನು ಶಾಲೆಗೆ ಸೇರಿಸಲು ಹಿಂದೇಟು ಹಾಕುತ್ತಿರುವುದು ಕಾರಣವಾಗಿದೆ. ಸಾಕ್ಷರತೆ ಕೊರತೆಯಿಂದಾಗಿ ಪೋಷಕರು ಮಕ್ಕಳನ್ನು ಕೃಷಿ ಮತ್ತಿತರ ಕೆಲಸಗಳಿಗೆ ಕಳುಹಿಸುತ್ತಿರುವುದು ದಾಖಲಾತಿ ಮತ್ತು ಹಾಜರಾತಿ ಕಡಿಮೆಯಾಗಲು ಕಾರಣವಾಗಿದೆ.