ಕಾರ್ಗಿಲ್: ಲಡಾಖ್ ನ ಕಾರ್ಗಿಲ್‌ನಲ್ಲಿ ಇಂದು ಶುಕ್ರವಾರ ಬೆಳಗಿನ ಜಾವ ರಿಕ್ಟರ್ ಮಾಪಕದಲ್ಲಿ 5.2 ತೀವ್ರತೆಯ ಭೂಕಂಪ ಸಂಭವಿಸಿದೆ. ಕಾಶ್ಮೀರದಲ್ಲೂ ಕಂಪನದ ಅನುಭವವಾಗಿದೆ. 15 ಕಿ.ಮೀ. ಆಳದಲ್ಲಿ ಭೂಕಂಪದ ಕೇಂದ್ರ ಬಿಂದು ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಮಾಹಿತಿ ನೀಡಿದೆ.
ಅರುಣಾಚಲ ಪ್ರದೇಶದಲ್ಲೂ ಇಂದು ರಿಕ್ಟರ್ ಮಾಪಕದಲ್ಲಿ 4.0 ತೀವ್ರತೆಯ ಭೂಕಂಪ ಸಂಭವಿಸಿದ್ದು, ಪಶ್ಚಿಮ ಕಮೆಂಗ್‌ನಲ್ಲಿ 10 ಕಿ.ಮೀ. ಆಳದಲ್ಲಿ ಕೇಂದ್ರ ಬಿಂದು ಪತ್ತೆಯಾಗಿದೆ. ಟಿಬೆಟ್‌ನಲ್ಲಿ ಗುರುವಾರ ಒಂದೇ ದಿನದಲ್ಲಿ ಮೂರು ಬಾರಿ ಭೂಮಿ ಕಂಪಿಸಿತ್ತು. ಇದರ ಬೆನ್ನಲ್ಲೇ ಕಾರ್ಗಿನ್‌ನಲ್ಲೂ ಕಂಪನದ ಅನುಭವ ಉಂಟಾಗಿದೆ.
ಮಾರ್ಚ್ 12ರಂದು ಟಿಬೆಟ್‌ನಲ್ಲಿ ರಿಕ್ಟರ್ ಮಾಪಕದಲ್ಲಿ 4.3, 3.5 ಹಾಗೂ 4.0 ತೀವ್ರತೆಯ ಸರಣಿ ಭೂಕಂಪ ಸಂಭವಿಸಿತ್ತು. ಆದರೆ ಯಾವುದೇ ಸಾವು ನೋವು ಸಂಭವಿಸಿರಲಿಲ್ಲ. ಗುರುವಾರ ಅಫ್ಘಾನಿಸ್ತಾನದಲ್ಲೂ ರಿಕ್ಟರ್ ಮಾಪಕದಲ್ಲಿ 4.0 ತೀವ್ರತೆಯ ಭೂಕಂಪ ಸಂಭವಿಸಿತ್ತು. ‘ಟೆಕ್ಟೋನಿಕ್ ಪ್ಲೇಟ್’ಗಳ ಘರ್ಷಣೆಯಿಂದಾಗಿ ಟಿಬೆಟ್ ವಲಯದಲ್ಲಿ ಪದೇ ಪದೇ ಭೂಕಂಪನಗಳು ಸಂಭವಿಸುತ್ತಿವೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.