ಅತ್ತೆ ಮಾವನ ಮೇಲೆ ಹಲ್ಲೆ ನಡೆಸಿದ ವೈದ್ಯೆ; ದೂರು ದಾಖಲು

Most read

ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆಯ ವೈದ್ಯೆಯೊಬ್ಬರು ತನ್ನ ಅತ್ತೆ ಹಾಗೂ ಮಾವನ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ. ಡಾ.ಪ್ರಿಯದರ್ಶಿನಿ ಅವರೇ ಅತ್ತೆ ಮಾವನ ಮೇಲೆ ಹಲ್ಲೆ ನಡೆಸಿರುವ ವೈದ್ಯೆ. ಈಕೆ ಅನ್ನಪೂರ್ಣೇಶ್ವರಿ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿರುವ ತನ್ನ ಮಾವ ನರಸಿಂಹಯ್ಯ (79) ಅವರ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ. ಹಲ್ಲೆ ಮಾಡುತ್ತಿರುವ ದೃಶ್ಯಗಳನ್ನು  ಸ್ಥಳೀಯರು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಡಾ. ಪ್ರಿಯದರ್ಶನಿ ಅವರು ನರಸಿಂಹಯ್ಯ ಅವರ ಪುತ್ರ ಇಎಸ್ಐ ಆಸ್ಪತ್ರೆಯ ದಂತ ವೈದ್ಯ ನವೀನ್ ಕುಮಾರ್ ಅವರೊಂದಿಗೆ 2007 ರಲ್ಲಿ ಮದುವೆಯಾಗಿರುತ್ತಾರೆ. ಇವರ ದಾಂಪತ್ಯದಲ್ಲಿ ಬಿರುಕು ಬಿಟ್ಟಿದ್ದು, ಇಬ್ಬರೂ ವಿವಾಹ ವಿಚ್ಛೇದನಕ್ಕೆ ಅರ್ಜಿ ಹಾಕಿಕೊಂಡಿದ್ದಾರೆ. ನವೀನ್‌ ಕುಮಾರ್‌ ಪೋಷಕರೊಂದಿಗೆ ವಾಸಿಸುತ್ತಿದ್ದರೆ ಪ್ರಿಯದರ್ಶಿನಿ ಮಕ್ಕಳೊಂದಿಗೆ ಪ್ರತ್ಯೇಕವಾಗಿ ವಾಸವಾಗಿದ್ದಾರೆ.

ಮಾ.10ರಂದು ಪ್ರಿಯದರ್ಶಿನಿ ಅವರು ಅತ್ತೆ, ಮಾವನ ಮನೆಗೆ ಆಗಮಿಸಿ ಇಬ್ಬರ ಮೇಲೂ ಹಲ್ಲೆ ನಡೆಸಿದ್ದಾರೆ. ಪತಿಗೂ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಸೊಸೆ ನಡೆಸಿರುವ ಹಲ್ಲೆ ಕುರಿತು ನರಸಿಂಹಯ್ಯ ಅವರು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಅವರು ನೀಡಿದ ದೂರಿನಡಿ ಡಾ. ಪ್ರಿಯದರ್ಶಿನಿ  ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಹಲ್ಲೆಗೊಳಗಾದ ನರಸಿಂಹಯ್ಯ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರೆ ಅವರ ಪತ್ನಿ ಕ್ಯಾನ್ಸರ್ ರೋಗಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

More articles

Latest article