ಮಧ್ಯಪ್ರದೇಶ: ಕಾರು, ಜೀಪ್‌ಗೆ ಗ್ಯಾಸ್ ಟ್ಯಾಂಕರ್ ಡಿಕ್ಕಿ; 7 ಜನರ ಸಾವು

Most read

ಧಾರ್(ಮಧ್ಯಪ್ರದೇಶ): ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ಗ್ಯಾಸ್ ಟ್ಯಾಂಕರ್, ಕಾರು ಮತ್ತು ಜೀಪಿಗೆ ಡಿಕ್ಕಿ ಹೊಡೆದ ಪರಿಣಾಮ  7  ಮಂದಿ ಮೃತಪಟ್ಟಿದ್ದು ಮೂವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬುಧವಾರ ರಾತ್ರಿ 11 ಗಂಟೆ ಸುಮಾರಿಗೆ ಬದ್ನಾವರ್-ಉಜ್ಜಯಿನಿ ಹೆದ್ದಾರಿಯ ಬಮನ್ಸುತಾ ಗ್ರಾಮದ ಬಳಿಯ ರಸ್ತೆಯಲ್ಲಿ ಬರುತ್ತಿದ್ದ ಗ್ಯಾಸ್ ಟ್ಯಾಂಕರ್ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಕಾರು ಮತ್ತು ಜೀಪಿಗೆ ಡಿಕ್ಕಿ ಹೊಡೆದಿದೆ ಎಂದು ಧಾರ್ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಮನೋಜ್ ಕುಮಾರ್ ಸಿಂಗ್ ಹೇಳಿದ್ದಾರೆ.

ನಾಲ್ವರು ಸ್ಥಳದಲ್ಲೇ ಸಾವಿಗೀಡಾದರೆ, ಗಂಭೀರವಾಗಿ ಗಾಯಗೊಂಡಿದ್ದ ಮೂವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೃತರು ರತ್ಲಂ, ಮಂದ್ಸೌರ್ (ಮಧ್ಯಪ್ರದೇಶದಲ್ಲಿ) ಮತ್ತು ಜೋಧ್‌ಪುರ (ರಾಜಸ್ಥಾನ) ಜಿಲ್ಲೆಗಳಿಗೆ ಸೇರಿದವರು ಎಂದು ತಿಳಿದು ಬಂದಿದೆ. ಮೃತರಲ್ಲಿ ಕಾರಿನಲ್ಲಿದ್ದ ನಾಲ್ವರು ಮತ್ತು ಜೀಪಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳೀಯ ನಿವಾಸಿಗಳು ರಕ್ಷಣಾ ಕಾರ್ಯಾಚರಣೆಗೆ ನೆರವು ನೀಡಿದರು. ಕ್ರೇನ್ ಬಳಸಿ ವಾಹನಗಳಲ್ಲಿ ಸಿಲುಕಿಕೊಂಡಿದ್ದ ಜನರನ್ನು ಹೊರತೆಗೆಯಲಾಯಿತು. ಗಾಯಾಳುಗಳನ್ನು ನೆರೆಯ ರತ್ಲಂ ಜಿಲ್ಲೆಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ನಂತರ ಟ್ರಕ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರನ್ನು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮಂದ್ಸೌರ್ ಮತ್ತು ರತ್ಲಂ ನಿವಾಸಿಗಳಾದ ಗಿರ್ಧಾರಿ ಮಖಿಜಾ (44), ಅನಿಲ್ ವ್ಯಾಸ್ (43), ವೀರಮ್ ಧಂಗರ್, ಚೇತನ್ ಬಗರ್ವಾಲ್ (23) ಮತ್ತು ಜೀಪ್‌ನಲ್ಲಿದ್ದವರನ್ನು ಜೋಧಪುರದ ಬನಾ ಸಿಂಗ್, ಅನೂಪ್ ಪುನಿಯಾ (23) ಮತ್ತು ಜಿತೇಂದ್ರ ಪುನಿಯಾ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

More articles

Latest article