ಪಾಲಾನ್ ಪುರ: ಗುಜರಾತ್ ನ ಬನಾಸ್ ಕಾಂತ ಜಿಲ್ಲೆಯಲ್ಲಿ ಕಾಲೇಜು ವಿದ್ಯಾರ್ಥಿನಿಯೊಬ್ಬರ ನಗ್ನ ವಿಡಿಯೋ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡುತ್ತಾ 7 ಮಂದಿಯ ಗುಂಪು ಆಕೆಯ ಮೇಲೆ ಸತತ 17 ತಿಂಗಳ ಕಾಲ ಅತ್ಯಾಚಾರ ನಡೆಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
2023ರಲ್ಲಿ ಪಾಲಾನ್‌ಪುರದ ಕಾಲೇಜೊಂದಕ್ಕೆ ಸೇರ್ಪಡೆಯಾದ ಬಳಿಕ ಆರೋಪಿಗಳಲ್ಲಿ ಓರ್ವ ಇನ್‌ಸ್ಟಾಗ್ರಾಮ್ ಮೂಲಕ ಆಕೆಯ ಸ್ನೇಹವನ್ನು ಬೆಳೆಸಿಕೊಂಡಿದ್ದ. 2023ರ ನವೆಂಬರ್‌ನಲ್ಲಿ ಆಕೆಯ ಮನವೊಲಿಸಿ ಹೋಟೆಲ್ ಒಂದಕ್ಕೆ ಬೆಳಗಿನ ಉಪಾಹಾರಕ್ಕೆ ಕರೆದುಕೊಂಡು ಹೋಗಿದ್ದ. ಅಲ್ಲಿ ಉದ್ದೇಶಪೂರ್ವಕವಾಗಿ ಆಕೆಯ ಬಟ್ಟೆಯ ಮೇಲೆ ಆಹಾರವನ್ನು ಚೆಲ್ಲಿ, ಅದನ್ನು ಶುಚಿ ಮಾಡಲು ಕೋಣೆಗೆ ಕರೆದುಕೊಂಡು ಹೋಗಿದ್ದ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ
ಸಂತ್ರಸ್ತೆ ಶೌಚಾಲಯದಲ್ಲಿ ಬಟ್ಟೆ ಬಿಚ್ಚಿ ಸ್ವಚ್ಛಗೊಳಸುಕೊಳ್ಳುತ್ತಿದ್ದ ಸಂದರ್ಭದಲ್ಲಿ ಆರೋಪಿ ವಿಶಾಲ್ ಚೌದರಿ ರಹಸ್ಯವಾಗಿ ವಿಡಿಯೊ ಮಾಡಿದ್ದಾನೆ. ಆಕೆ ಪ್ರತಿಭಟಿಸಿದಾಗ, ವಿಡಿಯೊ ಬಹಿರಂಗ ಮಾಡುವುದಾಗಿ, ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಸಿದ್ದಾನೆ ಎಂದು ವಿದ್ಯಾರ್ಥಿನಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದೇ ವಿಡಿಯೊವನ್ನು ಮುಂದಿಟ್ಟುಕೊಂಡು, ಆರೋಪಿ ಹಾಗೂ ಆತನ ಸ್ನೇಹಿತರು 2023ರ ನವೆಂಬರ್‌ನಿಂದ 2025ರ ಫೆಬ್ರುವರಿವರೆಗೆ ವಿವಿಧ ಸ್ಥಳಗಳಿಗೆ ಆಕೆಯನ್ನು ಕರೆದೊಯ್ದು ಅತ್ಯಾಚಾರ ನಡೆಸಿದ್ದಾರೆ. ಇವರ ವರ್ತನೆಯಿಂದ ಬೇಸತ್ತ ವಿದ್ಯಾರ್ಥಿನಿ ಪಲಾನ್ ಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಆರು ಮಂದಿ ಪರಿಚಿತ ಹಾಗೂ ಓರ್ವ ಅಪರಿಚಿತನ ವಿರುದ್ಧ ಬಿಎನ್‌ಎಸ್ ಹಾಗೂ ಐಟಿ ಕಾಯ್ದೆಯಡಿ ದೂರು ದಾಖಲಿಸಿಕೊಂಡಿದ್ದಾರೆ. ಆರೋಪಿಗಳ ಪತ್ತೆಗೆ ಹುಡುಕಾಟ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.