ಬೆಂಗಳೂರು: ನಾಲ್ಕು ತಿಂಗಳ ಹಿಂದೆ ನಡೆದಿದ್ದ ಒಂಟಿ ಮಹಿಳೆಯ ಕೊಲೆ ಆರೋಪಿಯನ್ನು ಕೊತ್ತನೂರು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಚಿನ್ನಾಭರಣಕ್ಕಾಗಿ ಕೊಲೆ ಮಾಡಿರುವುದು ತನಿಖೆಯಿಂದ ತಿಳಿದು ಬಂದಿದೆ.
2024ರ ನವೆಂಬರ್ 26ರಂದು ನಾಗೇನಹಳ್ಳಿಯ ಸ್ಲಂ ಬೋರ್ಡ್ ವಸತಿ ಪ್ರದೇಶದಿಂದ ಕಾಣೆಯಾಗಿದ್ದ ಮೇರಿ (59) ಅವರ ಮೃತದೇಹ ಮಾರ್ಚ್ 9 ರಂದು ಬಾಗಲೂರಿನ ಹೊಸೂರು ಬಂಡೆ ಬಳಿ ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಹಲವು ಆಯಾಮಗಳಲ್ಲಿ ತನಿಖೆ ನಡೆಸಿ, ಆರೋಪಿ ಲಕ್ಷ್ಮಣ್ ಎಂಬಾತನನ್ನು ಬಂಧಿಸಿದ್ದಾರೆ.
ಮೇರಿ ಮತ್ತು ಲಕ್ಷ್ಮಣ್ ಒಂದೇ ಬಡಾವಣೆಯಲ್ಲಿ ವಾಸವಾಗಿದ್ದರು. ನೀರು ಬಿಡುವ ಕೆಲಸ ಹಾಗೂ ಆಟೊ ಚಾಲಕನಾಗಿದ್ದ ಲಕ್ಷ್ಮಣ್, ಮೇರಿ ಮನೆಯಲ್ಲಿಯೂ ಕೆಲಸ ಮಾಡುತ್ತಿದ್ದ. ಇದರಿಂದ ಇಬ್ಬರಿಗೂ ಪರಸ್ಪರ ಪರಿಚಯ ಇತ್ತು. ಆರೋಪಿ ಲಕ್ಷ್ಮಣ್ ರೂ.2 ಲಕ್ಷ ಸಾಲ ಮಾಡಿಕೊಂಡಿದ್ದ. ಸಾಲ ತೀರಿಸಲು ಹಣದ ಅವಶ್ಯಕತೆ ಇತ್ತು. ಮೇರಿ ಧರಿಸಿದ್ದ 50 ಗ್ರಾಂ ಚಿನ್ನಾಭರಣಗಳ ಆಸೆಗೆ ನವೆಂಬರ್ 26ರಂದು ಕೊಲೆ ಮಾಡಿ, ಆಟೊದಲ್ಲಿ ಮೃತದೇಹವನ್ನು ಸಾಗಿಸಿ ಬಾಗಲೂರು ಸಮೀಪದ ಹೊನ್ನೂರು ಬಂಡೆಯ ಕಸವನ್ನು ಸಂಗ್ರಹಿಸುವ ಪ್ರದೇಶದಲ್ಲಿ ಎಸೆದು ಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ನಂತರ ಮೇರಿ ಅವರ ಮೊಬೈಲ್ ಆನ್ ಮಾಡಿ ಕಸ ಸಂಗ್ರಹಿಸುವ ಆಟೊವೊಂದರಲ್ಲಿ ಎಸೆದಿದ್ದ. ತಾನು ಬಳಸುತ್ತಿದ್ದ ನಾಲ್ಕು ಸಿಮ್ ಕಾರ್ಡ್‌ಗಳ ಪೈಕಿ ಮೂರು ಸಿಮ್ ಕಾರ್ಡ್‌ಗಳಿದ್ದ ಫೋನ್‌ಗಳನ್ನು ಡಿ.ಜೆ ಹಳ್ಳಿಯ ತನ್ನ ಪತ್ನಿಯ ಮನೆಯಲ್ಲಿ ಬಚ್ಚಿಟ್ಟಿದ್ದ. ತನಿಖೆ ಆರಂಭಿಸಿದ್ದ ಪೊಲೀಸರು, ಮಹಿಳೆಗೆ ಪರಿಚಯದಲ್ಲಿದ್ದ ಲಕ್ಷ್ಮಣ್ ನ ಫೋನ್ ಕರೆ ವಿವರಗಳು, ಟವರ್ ಲೊಕೇಷನ್ ಪರಿಶೀಲಿಸಿದ್ದಾಗ ಯಾವುದೇ ಅನುಮಾನ ಉಂಟಾಗಿರಲಿಲ್ಲ. ಇತ್ತೀಚೆಗೆ ಸ್ನೇಹಿತರೊಬ್ಬರ ಜೊತೆಗೆ ಮಾತನಾಡಲು ಕರೆ ಮಾಡಿದಾಗ ಲಕ್ಷ್ಮಣ್ ನ ಮತ್ತೊಂದು ಸಿಮ್ ಕಾರ್ಡ್ ಸಕ್ರಿಯವಾಗಿತ್ತು. ಆತನನ್ನು ಪತ್ತೆ ಹಚ್ಚಿ, ವಿಚಾರಿಸಿದಾಗ ಕೊಲೆಯ ವಿಚಾರ ಬಾಯಿ ಬಿಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.