ಮುಂಬೈ: ಆಲಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಚಿಸುವ ಕರ್ನಾಟಕದ ಪ್ರಸ್ತಾವವನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರ ಸುಪ್ರಿಂಕೋರ್ಟ್‌ನಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಲಿದೆ ಎಂದು ಜಲ ಸಂಪನ್ಮೂಲ ಸಚಿವ ರಾಧಾಕೃಷ್ಣ ವಿಖೆ ಪಾಟೀಲ್ ಮಂಗಳವಾರ ವಿಧಾನ ಪರಿಷತ್ತಿನಲ್ಲಿ ತಿಳಿಸಿದ್ದಾರೆ.
ಕರ್ನಾಟಕ ಸರ್ಕಾರ ಆಲಮಟ್ಟಿ ಅಣೆಕಟ್ಟು ಎತ್ತರಿಸಲು ಪ್ರಸ್ತಾಪ ಮಾಡಿದೆ. ಇದಕ್ಕೆ ನಿಮ್ಮ ಆಕ್ಷೇಪಣೆ ಸಲ್ಲಿಸಿದ್ದೀರಾ? ಎಂದು ಎನ್‌ಸಿಪಿ ಸದಸ್ಯ ಅರುಣ್ ಲಾಡ್ ಕೇಳಿದ ಪ್ರಶ್ನೆಗೆ ಸಚಿವ ಪಾಟೀಲ್ ಉತ್ತರಿಸಿದರು. ಆಲಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಚಿಸುವ ಕರ್ನಾಟಕದ ಪ್ರಸ್ತಾವವನ್ನು ರಾಜ್ಯ ಸರ್ಕಾರ ನಿರಂತರವಾಗಿ ವಿರೋಧಿಸುತ್ತಲೇ ಬಂದಿದೆ. ಎತ್ತರ ಹೆಚ್ಚಳಕ್ಕೆ ಅನುಮತಿ ನೀಡುವ ಮೊದಲು ನಮ್ಮ ರಾಜ್ಯದ ಕಳವಳಗಳನ್ನು ಪರಿಗಣಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ನಾವು ಶೀಘ್ರದಲ್ಲೇ ಸುಪ್ರೀಂ ಕೋರ್ಟ್‌ನಲ್ಲಿ ಮಧ್ಯಂತರ ಅರ್ಜಿ ಸಲ್ಲಿಸುತ್ತೇವೆ ಎಂದು ಹೇಳಿದ್ದಾರೆ. ಆಲಮಟ್ಟಿ ಜಲಾಶಯದ ಈಗಿನ ಎತ್ತರ 519.60 ಮೀಟರ್ ಇದ್ದು, 524.25 ಮೀಟರ್‌ಗೆ ಎತ್ತರಿಸಲು ಅಧಿಸೂಚನೆ ಹೊರಡಿಸುವಂತೆ ಕೇಂದ್ರ ಸರ್ಕಾರವನ್ನು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಕೋರಿದೆ.