ದೇವನಹಳ್ಳಿ: ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದುಬೈನಿಂದ ಬಂದಿದ್ದ ಅಂಧ ಪ್ರಯಾಣಿಕರೊಬ್ಬರಿಂದ ರೂ. 3.44ಕೋಟಿ ಮೌಲ್ಯದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿ ಮಾರ್ಚ್ 4ರಂದು 3 ಕೆ.ಜಿ 995 ಗ್ರಾಂ ಚಿನ್ನ ಕಳ್ಳ ಸಾಗಣೆ ಮಾಡುವಾಗ ಸಿಕ್ಕಿ ಬಿದ್ದಿದ್ದಾರೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
ಅಂಧ ಆರೋಪಿಯು, ಅಧಿಕಾರಿಗಳ ಕಣ್ತಪ್ಪಿಸಿ ಚಿನ್ನ ಸಾಗಿಸುವ ಸಂಚು ರೂಪಿಸಿದ್ದರು. ಅವರು ಧರಿಸಿದ್ದ ಅಂಗಿಯ ಒಳಗೆ ಚಿನ್ನವನ್ನು ಬಚ್ಚಿಟ್ಟುಕೊಂಡು ಸಾಗಣೆಗೆ ಪ್ರಯತ್ನಿಸಿದ್ದರು. ಅನುಮಾನ ಬಂದು ತಪಾಸಣೆ ನಡೆಸಿದಾಗ ದಾಖಲೆ ಇಲ್ಲದೆ ಚಿನ್ನ ಸಾಗಿಸುತ್ತಿರುವುದು ಪತ್ತೆಯಾಗಿದೆ.
ಅಕ್ರಮ ಚಿನ್ನ ಸಾಗಣೆ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ. ಅಂಧ ವ್ಯಕ್ತಿ ಒಬ್ಬರೇ ಈ ಕೃತ್ಯ ಎಸಗಿದ್ದಾರೆಯೇ ಅಥವಾ ಬೇರೆಯವರ ಕೈವಾಡ ಇದೆಯೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.