ಬೆಂಗಳೂರು: ಇಬ್ಬರು ಮಹಿಳಾ ಐಪಿಎಸ್ ಅಧಿಕಾರಿಗಳ ಕದನ ಹಾದಿರಂಪ ಬೀದಿರಂಪವಾಗಿದ್ದು ಇನ್ನೂ ಮುಂದುವರೆದಿದೆ. ಐಪಿಎಸ್ ಅಧಿಕಾರಿ ವರ್ತಿಕಾ ಕಟಿಯಾರ್ ನೀಡಿದ್ದ ದೂರಿಗೆ ಹಿರಿಯ ಐಪಿಎಸ್ ಅಧಿಕಾರಿ ಡಿ. ರೂಪಾ ಮೌದ್ಗಿಲ್ ನೀಡಿದ್ದಾರೆ. ಈ ಸಂಬಂಧ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದಿದ್ದು, ಆಂತರಿಕ ಭದ್ರತಾ ವಿಭಾಗದ ಡಿಐಜಿ ವರ್ತಿಕಾ ಕಟಿಯಾರ್ ಅವರು ಕೆಲವು ಸುಳ್ಳು ಮತ್ತು ಆಧಾರರಹಿತ ಆರೋಪಗಳನ್ನು ಮಾಡಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ. ಈ ಮೂಲಕ ವರ್ತಿಕಾ ಅವರು ಶಿಸ್ತಿನ ಇಲಾಖೆಯಲ್ಲಿ ಇದ್ದುಕೊಂಡು ಅಶಿಸ್ತಿನ ರೀತಿ ನಡೆದುಕೊಂಡಿದ್ದಾರೆ ಎಂದೂ ಆರೋಪಿಸಿದ್ದಾರೆ.
ರೂಪಾ ವಿರುದ್ಧ ಸರ್ಕಾರದ ಮುಖ್ಯಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ ಆಂತರಿಕ ಭದ್ರತಾ ವಿಭಾಗದ ಡಿಐಜಿಯಾಗಿದ್ದ ವರ್ತಿಕಾ ಅವರನ್ನು ಸಿವಿಲ್ ಡಿಫೆನ್ಸ್ ಮತ್ತು ಹೋಮ್ ಗಾರ್ಡ್ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿತ್ತು. ಇಂದು ಆಂತರಿಕ ಭದ್ರತಾ ವಿಭಾಗದ ಐಜಿಪಿಯಾಗಿದ್ದ ರೂಪಾ ಅವರನ್ನು ಕರ್ನಾಟಕ ಸಿಲ್ಕ್ ಮಾರ್ಕೆಟಿಂಗ್ ಬೋರ್ಡ್ ಎಂಡಿ ಆಗಿ ವರ್ಗಾವಣೆ ಮಾಡಲಾಗಿದೆ.
ಕೆಲವು ದಿನಗಳ ಹಿಂದೆ ಕಾನ್ಸ್ಟೆಬಲ್ಗಳು ಕಡತಗಳನ್ನು ತಮ್ಮ ಕೊಠಡಿಯಿಂದ ತೆಗೆದುಕೊಂಡು ಹೋಗಿದ್ದಾರೆ ಎಂದು ವರ್ತಿಕಾ ಹೇಳುತ್ತಾರೆ. ಆದರೆ ಅವರ ಆರೋಪಗಳಿಗೆ ಯಾವುದೇ ಪುರಾವೆಗಳಿಲ್ಲ. ಕಾನ್ಸ್ಟೆಬಲ್ಗಳು ಯಾವುದೇ ಹೇಳಿಕೆ ನೀಡಿಲ್ಲ. ಫೈಲ್ಗಳ ಫೋಟೋ ತೆಗೆದುಕೊಂಡಿರುವ ಯಾವುದೇ ಪುರಾವೆಗಳಿಲ್ಲ. ಅವರ ಕೊಠಡಿ ಮತ್ತು ನನ್ನ ಕೊಠಡಿಯ ಮುಂದಿನ ಕಾರಿಡಾರ್ನಲ್ಲಿ ಕನಿಷ್ಠ 5 ಸಿಸಿಟಿವಿ ಕ್ಯಾಮೆರಾಗಳಿವೆ. ಅವರು ಯಾವುದೇ ಸಿಸಿಟಿವಿ ದೃಶ್ಯಾವಳಿಗಳನ್ನು ಲಗತ್ತಿಸಿಲ್ಲ ಎಂದು ರೂಪಾ ಅವರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ಒಂದು ವೇಳೆ ಈ ರೀತಿ ಘಟನೆ ನಡೆದಿದ್ದರೆ ಅವರು (ವರ್ತಿಕಾ) ಆಂತರಿಕ ಭದ್ರತಾ ವಿಭಾಗದ (ಐಎಸ್ಡಿ) ಹಿರಿಯ ಅಧಿಕಾರಿಗಳ ಗಮನಕ್ಕೆ ಏಕೆ ತರಲಿಲ್ಲ? ನನ್ನ ಮೇಲೆ ಎಡಿಜಿ ಐಎಸ್ಡಿ ಇದ್ದಾರೆ. ಪೊಲೀಸ್ ಮಹಾನಿರ್ದೇಶಕ ಐಎಸ್ಡಿ ಇದ್ದಾರೆ ಮತ್ತು ಪೊಲೀಸ್ ಪಡೆಯ ಮುಖ್ಯಸ್ಥರಾಗಿರುವ ಡಿಜಿ ಮತ್ತು ಐಜಿಪಿ ಇದ್ದಾರೆ. ಈ ಬಗ್ಗೆ ಅವರು ಏಕೆ ಇವರುಗಳ ಗಮನಕ್ಕೆ ತರಲಿಲ್ಲ. ನನ್ನ ಮೇಲೆ ಕೆಲವು ಕಡತಗಳ ಕಳ್ಳತನ ಮಾಡಿರುವ ಆರೋಪಿಗಳನ್ನು ಮಾಡುತ್ತಿದ್ದಾರೆ. ಅವರು ನಿಷ್ಪಕ್ಷಪಾತ ತನಿಖೆಗಾಗಿ ಇಲಾಖಾ ಮುಖ್ಯಸ್ಥರಿಗೆ ಪತ್ರ ಬರೆಯಬಹುದಿತ್ತಲ್ಲವೇ ಎಂದೂ ಪ್ರಶ್ನಿಸಿದ್ದಾರೆ. ಅವರು ನನ್ನ ಖ್ಯಾತಿಗೆ ಕಳಂಕ ತರುವ ಮತ್ತು ನನಗೆ ಮಾನಹಾನಿ ಮಾಡುವ ಏಕೈಕ ಉದ್ದೇಶದಿಂದ ಈ ರೀತಿಯ ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ಅವರ ಕ್ರಮಗಳು ಅಶಿಸ್ತು ಮತ್ತು ಘೋರ ದುಷ್ಕೃತ್ಯಕ್ಕೆ ಸಮಾನವಾಗಿವೆ. ಪೊಲೀಸ್ ಇಲಾಖೆಯು ಶಿಸ್ತುಬದ್ಧವಾಗಿದೆ. ಮುಖ್ಯ ಕಾರ್ಯದರ್ಶಿಗೆ ನೇರವಾಗಿ ಬರೆಯುವ ಕ್ರಮಗಳು ಅವಿಧೇಯತೆಗೆ ಸಮಾನವಾಗಿರುತ್ತದೆ. ಹೀಗಾಗಿ ವರ್ತಿಕಾ ಕಟಿಯಾರ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ವರ್ತಿಕಾ ಅವರು 2010 ರ ಐಪಿಎಸ್ ಬ್ಯಾಚ್ಗೆ ಸೇರಿದವರಾಗಿದ್ದು, ಹೈದರಾಬಾದ್ನ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ಪ್ರೊಬೆಷನರ್ ಆಗಿ ತರಬೇತಿ ಪಡೆಯುತ್ತಿದ್ದಾಗ ಐಪಿಎಸ್ ಅಧಿಕಾರಿ ವಿಪುಲ್ ಕುಮಾರ್ ವಿರುದ್ಧ ಲೈಂಗಿಕ ಕಿರುಕುಳದ ಬಗ್ಗೆ ಲಿಖಿತ ದೂರು ನೀಡಿದ್ದರು. ವಿಪುಲ್ ಕುಮಾರ್ ಒಬ್ಬ ಅತ್ಯುತ್ತಮ ಅಧಿಕಾರಿ ಮತ್ತು ಅವರು ಕರ್ನಾಟಕ ಕೇಡರ್ಗೆ ಸೇರಿದವರು ಎಂದು ನಮಗೆಲ್ಲರಿಗೂ ತಿಳಿದಿದೆ. ಆದರೆ ದ್ರೆ ಆ ದೂರು ಸುಳ್ಳು ಎಂದು ಸಾಬೀತಾಗಿತ್ತು.
ತಮ್ಮ ಪತಿ ನಿತಿನ್ ಯೆಯೋಲಾ ವಿರುದ್ಧವೇ ಸುಳ್ಳು ದೂರು ನೀಡಿದ್ದರು. ಎಂಎಸ್ ಕಟ್ಟಡದ 6ನೇ ಮಹಡಿಯಲ್ಲಿರುವ ತಮ್ಮ ಕಚೇರಿಗೆ ಆ್ಯಸಿಡ್ ಎರಚಲು ಬಂದಿದ್ದರು. ಕಚೇರಿಯಲ್ಲಿ ಇಲ್ಲದ ಕಾರಣ ತಪ್ಪಿಸಿಕೊಂಡೆ ಎಂದು ತಮ್ಮ ಪತಿ ವಿರುದ್ಧವೇ ಆರೋಪಿಸಿದ್ದರು ಎಂದು ರೂಪಾ ಅವರು ವರ್ತಿಕಾ ಅವರ ವರ್ತನೆ ಕುರಿತು ತಿಳಿಸಿದ್ದಾರೆ.