ಬೆಳಗಾವಿ: ಮಹಿಳೆಯೊಬ್ಬರು ಕೌಟುಂಬಿಕ ಕಿರುಕುಳದಿಂದ ಬೇಸತ್ತು ತನ್ನ ಇಬ್ಬರು ಹೆಣ್ಣುಮಕ್ಕಳು ಹಾಗೂ ಒಬ್ಬ ಗಂಡು ಮಗು ಸೇರಿ ಮೂವರು ಮಕ್ಕಳೊಂದಿಗೆ ಕೃಷ್ಣಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯ ರಾಯಭಾಗ ತಾಲ್ಲೂಕಿನ ಪ್ರಸಿದ್ದ ಯಾತ್ರಾ ಸ್ಥಳವಾದ ಚಿಂಚಳಿ ಸಮೀಪದಲ್ಲಿ ಈ ಅವಘಡ ಸಂಭವಿಸಿದೆ. ಮೂವರು ಮಕ್ಕಳೊಂದಿಗೆ ಮಹಿಳೆ ಹಾರಿದ್ದನ್ನು ಗಮನಿಸಿದ ಸ್ಥಳೀಯರ ಕೂಡಲೇ ರಕ್ಷಣೆಗೆ ಧಾವಿಸಿದರು. ರಕ್ಷಣಾ ಪಡೆಗಳು ಕೂಡ ಆಗಮಿಸಿದ್ದವು. ಆದರೆ ಮೂವರು ನದಿಯಲ್ಲೇ ಅಸು ನೀಗಿದ್ದರೆ ಮತ್ತೊಂದು ಮಗುವನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಬದುಕುಳಿಯಲಿಲ್ಲ ಎಂದು ಬೆಳಗಾವಿ ಪೊಲೀಸರು ತಿಳಿಸಿದ್ದಾರೆ.
ಆತ್ಮಹತ್ಯೆಗೆ ಶರಣಾದವರನ್ನು ಶಾರದಾ (32), ಮಕ್ಕಳಾದ ಅಮೃತಾ(14), ಆದರ್ಶ(8) ಹಾಗೂ ಅನುಷಾ(5) ಎಂದು ಗುರುತಿಸಲಾಗಿದೆ. ಈ ಸಂಬಂಧ ಕುಡಚಿ ಪೊಲೀಸರು ಶಾರದಾ ಪತಿ ಚಿಂಚಲಿ ಪಟ್ಟಣದ ನಿವಾಸಿಯಾಗಿರುವ ಅಶೋಕ್ ಎಂಬಾತನನ್ನು ಬಂಧಿಸಿದ್ದಾರೆ. ಇವರಿಗೆ ಹದಿನೈದು ವರ್ಷದ ಹಿಂದೆಯೇ ವಿವಾಹವಾಗಿದ್ದು ಮೂರು ಮಕ್ಕಳೀದ್ದವು. ಅಶೋಕ್ ಇತ್ತೀಚಿನ ದಿನಗಳಲ್ಲಿ ಕುಡಿದು ಗಲಾಟೆ ಮಾಡುತ್ತಿದ್ದ. ಈ ವಿಚಾರದಲ್ಲಿ ಪತಿ ಪತ್ನಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು.
ಬುಧವಾರ ಬೆಳಿಗ್ಗೆಯೂ ಜಗಳ ಮುಂದುವರಿದಿದೆ. ಮಕ್ಕಳನ್ನು ಶಾಲೆಗೆ ಕಳುಹಿಸುವ ಬದಲು ಶಾರದಾ ಸಮೀಪದಲ್ಲೇ ಹರಿಯುವ ಕೃಷ್ಣಾ ನದಿಗೆ ಆಗಮಿಸಿ ಮಕ್ಕಳೊಂದಿಗೆ ನದಿಗೆ ಹಾರಿದ್ದಾಳೆ. ನೀರಿನ ಪ್ರಮಾಣ ಇರುವುದರಿಂದ ಮಕ್ಕಳು ಕೊಚ್ಚಿಕೊಂಡು ಹೋಗಿವೆ. ಕೊನೆಗೆ ಇದನ್ನು ಗಮನಿಸಿದವರು ಉಳಿಸಲು ಯತ್ನಿಸಿದರೂ ಪ್ರಯೋಜನವಾಗದೇ ನಾಲ್ವರು ಮೃತಪಟ್ಟಿದ್ದಾರೆ. ಅನುಷಾ ಎಂಬಾಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರೂ ಆಕೆ ಕೆಲವೇ ಕ್ಷಣದಲ್ಲಿ ಮೃತಪಟ್ಟಳು ಎಂದು ವೈದ್ಯರು ತಿಳಿಸಿದ್ದಾರೆ. ವಿಷಯ ತಿಳಿದು ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದರು. ಕುಟುಂಬದವರ ಆಕ್ರಂದನ ಮುಗಲು ಮುಟ್ಟಿತ್ತು. ಕುಡಚಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.