ರಜೆ ಹಾಕಿದ ಮಹಿಳಾ ಸಿಬ್ಬಂದಿಗೆ ಲೈಂಗಿಕ ನಿಂದನೆ: ದೂರು ದಾಖಲು

Most read

ಬೆಂಗಳೂರು:  ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಚೇರಿಯಲ್ಲಿ ಉನ್ನತ ಅಧಿಕಾರಿಯೊಬ್ಬರ ವಿರುದ್ಧ ಮಹಿಳಾ ಸಿಬ್ಬಂದಿಗೆ ಲೈಂಗಿಕ ನಿಂದನೆ ಮಾಡಿದ ಆರೋಪ ಕೇಳಿಬಂದಿದೆ. ತುರ್ತು ಕೆಲಸಕ್ಕೆ ರಜೆ ಹಾಕಿದ ಮಹಿಳಾ ಸಿಬ್ಬಂದಿಗೆ, ನಿನಗೆ ಎಚ್​ಐವಿ ಬಂದಿದೆಯಾ ? ನಿನ್ನನ್ನು ಯಾರಾದರೂ ರೇಪ್ ಮಾಡಿದ್ದಾರೆಯೇ ? ಪಾಸಿಟಿವ್ ಇದೆಯಾ ಎಂದೆಲ್ಲಾ ನಿಂದಿಸಿದ್ದ ಅಧಿಕಾರಿ ವಿರುದ್ಧ ದೂರು ದಾಖಲಿಸಲಾಗಿದೆ.  

ಈ ರೀತಿ ನಿಂದಿಸಿದ ಅಧಿಕಾರಿ ಬಿಬಿಎಂಪಿ ಅಸ್ತಿ ವಿಭಾಗದ ಸಹಾಯಕ ಅಯುಕ್ತ ಶ್ರೀನಿವಾಸ ಮೂರ್ತಿ. ಈತನ ವಿರುದ್ಧ  ಸಂತ್ರಸ್ತೆಯು ಈಗಾಗಲೇ ಬಿಬಿಎಂಪಿ ವಿಶೇಷ ಆಯುಕ್ತರಿಗೆ ಪತ್ರದ ಮೂಲಕ ದೂರು ನೀಡಿದ್ದಾರೆ. ಮಹಿಳಾ ಸಿಬ್ಬಂದಿ ಐದು ದಿನ ರಜೆ ಹಾಕಿದ್ದರು. ಇದಕ್ಕೆ ಸಿಟ್ಟಿಗೆದ್ದಿದ್ದ ಅಧಿಕಾರಿ, ದಂಧೆ ನಡೆಸುತ್ತಾ ಇದ್ದೀಯಾ? ಅದಕ್ಕೆ ರಜೆ ಹಾಕಿದ್ದೀಯಾ’’ ಎಂದು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ರೀತಿಯ ದುರ್ವರ್ತನೆ ಕುರಿತು ಶ್ರೀನಿವಾಸ ಮೂರ್ತಿಗೆ ನೌಕರರ ಸಂಘಟನೆ ಈ ಹಿಂದೆಯೇ ಎಚ್ಚರಿಕೆ ನೀಡಿತ್ತು. ಆದರೂ ಅವರು ತಮ್ಮ ಕೆಟ್ಟ ಚಾಳಿಯನ್ನು ಮುಂದುವರೆಸಿದ್ದರು. ಈ ಹಿಂದೆ ಪಾಲಿಕೆ ನೌಕರರ ಸಂಘದ ಮೂಲಕ ರಾಜಿ ಸಂಧಾನ ಕೂಡ ಅಗಿತ್ತು. ರಾಜಿ ಸಂಧಾನದ ವೇಳೆ ಶ್ರೀನಿವಾಸ ಮೂರ್ತಿಗೆ ಎಚ್ಚರಿಕೆ ನೀಡಲಾಗಿತ್ತು. ಅದರೂ ಕೂಡ ಆತ ಅದೇ ಚಾಳಿ ಮುಂದುವರೆಸಿದಿದ್ದಾರೆ.

ಸಾರ್ವಜನಿಕರ ಮುಂದೆ ಸಿಬ್ಬಂದಿಯನ್ನು ಹೀಯಾಳಿಸುತ್ತಾರೆ. ಇದರಿಂದ ಈ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಮಾನಸಿಕವಾಗಿ, ದೈಹಿಕವಾಗಿ ಖಿನ್ನತೆಗೆ ಒಳಗಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

More articles

Latest article