ಬಾಡಿಗೆ ತಾಯಿ ಮೂಲಕ ಮಗು ಕೊಡಿಸುತ್ತೇನೆಂದು ಕದ್ದ ಶಿಶು ನೀಡಿದ ವೈದ್ಯೆಗೆ 10 ವರ್ಷ ಜೈಲು

Most read

ಬೆಂಗಳೂರು: ಬಾಡಿಗೆ ತಾಯಿಯ ಮೂಲಕ ಮಗುವನ್ನು ಮಾಡಿಸಿಕೊಡುವುದಾಗಿ ದಂಪತಿಯನ್ನು ವಂಚಿಸಿ ಬೇರೊಬ್ಬ ಮಹಿಳೆಯ ಮಗುವನ್ನು ಕದ್ದು ತಾಯ್ತನದ ಮೂಲಕ ಪಡೆದ ಮಗು ಎಂದು ನಂಬಿಸಿದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಬೆಂಗಳೂರಿನ ನಾಗರಭಾವಿಯ ಡಾ. ರಶ್ಮಿ ಎಂಬಾಕೆಯೇ ಈ ಕೃತ್ಯ ಎಸಗಿದ ವೈದ್ಯೆ..  ನ್ಯಾಯಾಲಯ ಈಕೆಗೆ  10 ವರ್ಷ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ಪ್ರಕರಣದ ಹಿನ್ನೆಲೆ:

ಡಾ. ರಶ್ಮಿ  2015 ರಲ್ಲಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾಗ ಮಕ್ಕಳಿಲ್ಲದ ದಂಪತಿಯನ್ನು ಭೇಟಿಯಾಗಿದ್ದರು. ಅವರಿಗೆ ಸ್ವಾಭಾವಿಕವಾಗಿ ಮಗುವಾಗುವ ಸಾಧ್ಯತೆಗಳಿರಲಿಲ್ಲ. ಅವರ ಅನಿವಾರ್ಯತೆಯನ್ನು ಬಂಡವಾಳ ಮಾಡಿಕೊಂಡ ರಶ್ಮಿ, ಬಾಡಿಗೆ ತಾಯ್ತನದ ಮೂಲಕ ಮಗು ಮಾಡಿಸಿಕೊಡುವುದಾಗಿ ಭರವಸೆ ನೀಡಿದ್ದರು. ಬೆಂಗಳೂರಿನಲ್ಲಿ ಬಾಡಿಗೆ ತಾಯಿಯನ್ನು ಕಂಡುಕೊಂಡಿದ್ದೇನೆ ಎಂದು 2019ರಲ್ಲಿ ದಂಪತಿ ಬಳಿ ಸುಳ್ಳು ಹೇಳಿ ಅವರಿಂದ ಜೈವಿಕ ಮಾದರಿಗಳನ್ನು ಸಂಗ್ರಹಿಸಿ ತಾಯ್ತನದ ವೆಚ್ಚಕ್ಕಾಗಿ ರೂ. 14.5 ಲಕ್ಷ ರೂ. ಪಡೆದುಕೊಂಡಿದ್ದರು.

ಗಡುವು ಸಮೀಪಿಸುತ್ತಿದ್ದಂತೆ ರಶ್ಮಿಗೆ ಆತಂಕ ಶುರುವಾಯಿತು.  ಹೀಗಾಗಿ ಯಾವುದಾದರೊಂದು ಆಸ್ಪತ್ರೆಯಲ್ಲಿ ಮಗುವನ್ನೇ ಕಳವು ಮಾಡಲು ನಿರ್ಧರಿಸಿದ್ದರು.  ಇದಕ್ಕಾಗಿ ಹೆಚ್ಚಿನ ಭದ್ರತೆ ಇಲ್ಲದ ಚಾಮರಾಜಪೇಟೆಯ ಬಿಬಿಎಂಪಿ ಬಿಬಿಎಂಪಿ ಆಸ್ಪತ್ರೆಯನ್ನು ಆಯ್ದುಕೊಂಡಿದ್ದರು.  ಆಸ್ಪತ್ರೆಯ ಹೆರಿಗೆ ವಾರ್ಡ್‌ಗೆ ಹಲವು ಬಾರಿ ಭೇಟಿ ನೀಡಿ ಜನ್ಮ ನೀಡಿದ ತಾಯಿಗೆ ನಿದ್ರೆ ಮಾತ್ರೆಗಳನ್ನು ನೀಡುವಂತೆ ನರ್ಸ್‌ ಗೆ ಸೂಚಿಸಿದ್ದರು. ತಾಯಿ ನಿದ್ದೆಗೆ ಜಾರಿದ ನಂತರ 2020 ರ ಮೇ 29 ರಂದು ಮಗುವನ್ನು ತೆಗೆದುಕೊಂಡು ಹೊರಟುಹೋಗಿದ್ದರು. ನಂತರ ಮಗುವನ್ನು ವಿಜಯನಗರದಲ್ಲಿರುವ ಸ್ನೇಹಿತನ ಮನೆಯಲ್ಲಿ ದಂಪತಿಗೆ ಒಪ್ಪಿಸಿದ್ದರು. 45 ನಿಮಿಷಗಳ ನಂತರ ಎಚ್ಚರವಾದಾಗ, ಮಗು ಕಾಣೆಯಾಗಿರುವುದು ಬೆಳಕಿಗೆ ಬಂದಿತ್ತು.. ನಂತರ ಪೊಲೀಸ್ ದೂರು ದಾಖಲಾಗಿತ್ತು. ಆದರೆ, ಮಗುವನ್ನು ಪತ್ತೆ ಹಚ್ಚಿ ರಶ್ಮಿಯನ್ನು ಬಂಧಿಸಲು ಸುಮಾರು ಒಂದು ವರ್ಷ ಬೇಕಾಯಿತು.

ಮಗು ಕಳವು ಪ್ರಕರಣದ ತನಿಖೆ ತೀವ್ರಗೊಳಿಸಿದ್ದ ಪೊಲೀಸರು 700 ಕ್ಕೂ ಹೆಚ್ಚು ಸಾಕ್ಷಿಗಳ ಸಂದರ್ಶನ, 300 ಸಿಸಿಟಿವಿ ರೆಕಾರ್ಡಿಂಗ್‌ ಗಳು ಮತ್ತು 5,000 ಫೋನ್ ಕರೆ ದಾಖಲೆಗಳನ್ನು ಪರಿಶೀಲಿಸಿದ್ದರು. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ, ಪೊಲೀಸರು ಶಂಕಿತ ವ್ಯಕ್ತಿಯ ರೇಖಾಚಿತ್ರವನ್ನು ರಚಿಸಿದ್ದರು. ಅಂತಿಮವಾಗಿ ಡಾ. ರಶ್ಮಿ ಮತ್ತು ಉತ್ತರ ಕರ್ನಾಟಕ ಮೂಲದ ದಂಪತಿ ಬಗ್ಗೆ ಅನುಮಾನ ಉಂಟಾಗಿತ್ತು.

ಡಿಎನ್ಎ ಪರೀಕ್ಷೆಗಳಲ್ಲೂ ಮಗುವಿನ ಜೈವಿಕ ಪೋಷಕರು ಯಾರೆಂದು ತಿಳಿದು ಬಂದಿದೆ.  ಡಾ. ರಶ್ಮಿ ಉತ್ತರ ಕರ್ನಾಟಕ ದಂಪತಿಯಿಂದ 14.5 ಲಕ್ಷ ರೂ. ಪಡೆದಿರುವುದು ಬ್ಯಾಂಕ್ ದಾಖಲೆಗಳಿಂದ ತಿಳಿದುಬಂದಿತ್ತು.

ಜಡ್ಜ್ ಸಿಬಿ ಸಂತೋಷ್ ಅವರು ತೀರ್ಪು ಪ್ರಕಟಿಸಿದ್ದು, ಇದೇ ವೇಳೆ ವೈದ್ಯೆ ರಶ್ಮಿ ನ್ಯಾಯಾಲಯದಲ್ಲಿ ಹಾಜರಿದ್ದರು. ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ರಶ್ಮಿ, ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಅವರನ್ನು ತೀರ್ಪು ಪ್ರಕಟವಾದ ಬೆನ್ನಲ್ಲೇ ಬೆಂಗಳೂರು ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಯಿತು.

ವೈದ್ಯೆ ರಶ್ಮಿ ನೀಡಿದ ಮಗು ತಮ್ಮದೇ, ಬಾಡಿಗೆ ತಾಯ್ತನದ ಮೂಲಕ ಜನಿಸಿದೆ ಎಂದೇ ಉತ್ತರ ಕರ್ನಾಟಕ ಮೂಲದ ದಂಪತಿ ಭಾವಿಸಿದ್ದರು. 2021 ರ ಮೇ 29 ರಂದು ಮಗುವಿನ ಮೊದಲ ಹುಟ್ಟುಹಬ್ಬವನ್ನು ಸಂತೋಷದಿಂದ ಆಚರಿಸುತ್ತಿದ್ದಾಗಲೇ ಅವರಿಗೆ ಆಘಾತ ಕಾದಿತ್ತು. ಪೊಲೀಸ್ ಅಧಿಕಾರಿಗಳು ಅವರ ಮನೆಗೆ ಆಗಮಿಸಿ ಮಗುವಿನ ಮಾಹಿತಿ ಕಲೆಹಾಕಿದರು. ಆದರೆ ಆ ದಂಪತಿಗೆ ವಂಚನೆಯ ಅರಿವಿರಲಿಲ್ಲ.

More articles

Latest article