ಭೀಕರ ಅಪಘಾತ: ಕುಂಭಮೇಳದಿಂದ ಹಿಂತಿರುಗುತ್ತಿದ್ದ ಗೋಕಾಕ್‌ ನ ಆರು ಮಂದಿ ಸಾವು

Most read

ಬೆಳಗಾವಿ: ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಭಾಗವಹಿಸಿ ಹಿಂತಿರುಗುತ್ತಿದ್ದ ಬೆಳಗಾವಿಯ ಗೋಕಾಕ್‌ ನಿವಾಸಿಗಳು ಪ್ರಯಾಣಿಸುತ್ತಿದ್ದ ಬಸ್‌ಗೆ ಡಿಕ್ಕಿ ಹೊಡೆದು ಆರು ಮಂದಿ ಮೃತಪಟ್ಟು ಇಬ್ಬರು ಗಾಯಗೊಂಡಿರುವ ಭೀಕರ ದುರಂತ ಘಟನೆ ಮಧ್ಯಪ್ರದೇಶದ ಜಬಲ್ಪುರದಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ. ಮೃತಪಟ್ಟವರನ್ನು ಗೋಕಾಕ್ ತಾಲೂಕಿನ ಲಕ್ಷ್ಮಿ ಬಡಾವಣೆ ನಿವಾಸಿಗಳಾದ ಬಾಲಚಂದ್ರ‌ ಗೌಡರ (50), ಸುನೀಲ್ ಶೇಡಶ್ಯಾಳೆ (45), ಬಸವರಾಜ್ ಕುರ್ತಿ (63), ಬಸವರಾಜ್ ದೊಡಮಾಳ್ (49), ಈರಣ್ಣ ಶೇಬಿನಕಟ್ಟಿ (27), ವಿರೂಪಾಕ್ಷ ಗುಮತಿ (61) ಎಂದು ಗುರುತಿಲಾಗಿದೆ. ಘಟನೆಯಲ್ಲಿ ಗಾಯಗೊಂಡಿರುವ ಮುಸ್ತಾಕ್ ಶಿಂಧಿಕುರಬೇಟ, ಸದಾಶಿವನನ್ನು ಜಬಲ್ಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಮಧ್ಯಪ್ರದೇಶದ ಜಬಲ್ಪುರನ ಖಿತೌಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಗಿನ ಜಾವ 5 ಗಂಟೆಗೆ ಅಪಘಾತ ನಡೆದಿದೆ. ಕರ್ನಾಟಕದ ನೋಂದಣಿ ಹೊಂದಿರುವ ತೂಫಾನ್ ವಾಹನದಲ್ಲಿ ಒಟ್ಟು 8 ಮಂದಿ ಪ್ರಯಾಣಿಸುತ್ತಿದ್ದರು. ಮಹಾಕುಂಭಮೇಳದಿಂದ ಮರಳುತ್ತಿದ್ದ ಇವರು ಮಧ್ಯಪ್ರದೇಶದ ಕೆಲವು ಧಾರ್ಮಿಕ ಕ್ಷೇತ್ರಗಳ ವೀಕ್ಷಣೆಗೆ ಹೊರಟಿದ್ದರು. ನಿದ್ರೆ ಮಂಪರಿನಲ್ಲಿದ್ದ ಚಾಲಕನ ನಿಯಂತ್ರಣ ತಪ್ಪಿ ತೂಫಾನ್‌ ವಾಹನ ಡಿವೈಡರ್ ಗೆ ಡಿಕ್ಕಿಯಾಗಿ ನಂತರ ಬಸ್‌ಗೆ ಗುದ್ದಿ ಪಲ್ಟಿಯಾಗಿ ಅಪಘಾತ ಸಂಭವಿಸಿದೆ

ವಿಷಯ ತಿಳಿದ ಕೂಡಲೇ ಜಬಲ್ಪುರ ಜಿಲ್ಲೆಯ ಪೊಲೀಸ್‌ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿ ಹಾಗೂ ಸ್ಥಳೀಯರು ಧಾವಿಸಿ ವಾಹನದಲ್ಲಿ ಸಿಲುಕಿಕೊಂಡಿದ್ದವರನ್ನು ಹೊರಕ್ಕೆ ಎಳೆದು ತಂದಿದ್ದಾರೆ. ಡಿಕ್ಕಿ ಹೊಡದ ರಭಸಕ್ಕೆ ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆಸ್ಪತ್ರೆಗೆ ದಾಖಲಿಸಲಾಗಿರುವ ಇಬ್ಬರ ಸ್ಥಿತಿಯೂ ಗಂಭೀರವಾಗಿದೆ. ಎಲ್ಲರ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ. ಮಧ್ಯಾಹ್ನದೊಳಗೆ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹಗಳನ್ನು ಗೋಕಾಕ್‌ಗೆ ಕಳುಹಿಸಲು ವ್ಯವಸ್ಥೆ ಮಾಡಲಾಗುತ್ತಿದೆ.

More articles

Latest article