ಬೆಂಗಳೂರು : ಅಪಾರ್ಟ್‌ಮೆಂಟ್‌ಗಳು ಕಾವೇರಿ ನೀರಿನ ಸಂಪರ್ಕ ಪಡೆಯುವ ಪ್ರಕ್ರಿಯೆಯನ್ನು ಸರಳೀಕರಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಬಿಡಬ್ಲೂಎಸ್‌ಎಸ್‌ಬಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ತಿಳಿಸಿದರು. ಮುಂಬರುವ ಬೇಸಿಗೆಯಲ್ಲಿ ನೀರಿನ ಸಮಸ್ಯೆಗಳ ಬಗ್ಗೆ ಅಪಾರ್ಟ್‌ಮೆಂಟ್ ನಿವಾಸಿಗಳಲ್ಲಿ ಜಾಗೃತಿ ಮೂಡಿಸುವ ಹಾಗೂ ಕಾವೇರಿ ಸಂಪರ್ಕಕ್ಕೆ ಪಡೆಯುವ ನಿಟ್ಟಿನಲ್ಲಿ ಅವರಲ್ಲಿರುವ ಗೊಂದಲಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಸರಣಿ ಸಭೆಗಳಲ್ಲಿ ಭಾಗವಹಿಸಿ ಈ ಮಾಹಿತಿ ನೀಡಿದರು.
ತಮ್ಮ ಅಪಾರ್ಟ್‌ಮೆಂಟ್‌ಗಳಿಗೆ ಹೆಚ್ಚಿನ ದರವನ್ನು ವಿಧಿಸಲಾಗುತ್ತಿದೆ ಎನ್ನುವ ನಿವಾಸಿಗಳ ಆತಂಕಗಳನ್ನು ಹಾಗೂ ಇನ್ನಿತರೆ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಬೆಂಗಳೂರು ಜಲಮಂಡಳಿ ಅಧ್ಯಕ್ಷರಾದ ಡಾ ರಾಮ್ ಪ್ರಸಾತ್ ಮನೋಹರ್ ಬೆಂಗಳೂರು ಅಪಾರ್ಟ್‌ಮೆಂಟ್ ಫೆಡರೇಷನ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಸರಣಿ ಸಭೆಯಲ್ಲಿ ಭಾಗವಹಿಸಿ, ಹಲವಾರು ಗೊಂದಲಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸಿದರು.
ಅರ್ಜಿ ಸಲ್ಲಿಕೆಯ ಪ್ರಕ್ರಿಯೆ, ಅದರ ಫಾಲೋಅಪ್ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಇರುವ ಪ್ರಕ್ರಿಯೆಯನ್ನು ಸರಳೀಕರಣಗೊಳಿಸುವುದು ಅಗತ್ಯವಿದೆ. ಅಲ್ಲದೇ, ಅಪಾರ್ಟ್‌ಮೆಂಟ್‌ಗಳು ಕಾವೇರಿ ಸಂಪರ್ಕ ಪಡೆಯುವ ಸಂಧರ್ಭದಲ್ಲಿ ವಿಧಿಸಲಾಗುತ್ತಿರುವ ಶುಲ್ಕದ ಬಗ್ಗೆ ಬಹಳಷ್ಟು ಗೊಂದಲಗಳಿವೆ. ಈ ಗೊಂದಲಕ್ಕೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಜಲಮಂಡಳಿಯ ವೆಬ್‌ಸೈಟ್‌ನಲ್ಲಿ ಶುಲ್ಕವನ್ನು ಪರಿಶೀಲಿಸಲು ಮಾದರಿ ಕ್ಯಾಲ್ಯುಕ್ಯುಲೇಟರ್ ನ್ನು ಅಳವಡಿಸಲಾಗುವುದು. ಈ ಕ್ಯಾಲ್ಯೂಕ್ಯೂಲೇಟರ್ ಮೂಲಕ ಗ್ರಾಹಕರು ತಮ್ಮ ಅಪಾರ್ಟ್‌ಮೆಂಟ್‌ಗಳಿಗೆ ಅಥವಾ ಮನೆಗಳಿಗೆ ವಿಧಿಸಲಾಗುವ ಶುಲ್ಕದ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಒಟ್ಟಾರೆಯಾಗಿ ಅಪಾರ್ಟ್‌ಮೆಂಟ್‌ಗಳು ಕಾವೇರಿ ಸಂಪರ್ಕ ಪಡೆದುಕೊಳ್ಳುವ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಲಾಗುವುದು ಎಂದು ತಿಳಿಸಿದರು.
ಶುಲ್ಕ ಸಂಬಂಧಿಸಿದಂತಹ ಯಾವುದೇ ಸಮಸ್ಯೆಗಳು ಹಾಗೂ ಗೊಂದಲಗಳು ಉಂಟಾದಲ್ಲಿ ಅದರ ಬಗ್ಗೆ ಗ್ರಾಹಕರು ದೂರು ನೀಡಲು ಹಾಗೂ ಅದಕ್ಕೆ ಪರಿಹಾರ ಪಡೆದುಕೊಳ್ಳಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ ಮುಖ್ಯ ಅಭಿಯಂತರರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗುವುದು. ಈ ಸಮಿತಿ ದೂರುಗಳನ್ನು ಪರಿಶೀಲಿಸಿ ಅವುಗಳ ಬಗ್ಗೆ ಗ್ರಾಹಕರಲ್ಲಿ ಉಂಟಾಗಿರುವ ಗೊಂದಲಗಳನ್ನು ಪರಿಹರಿಸುವ ಕಾರ್ಯ ನಿರ್ವಹಿಸಲಿದೆ. ಹೆಚ್ಚಿನ ಶುಲ್ಕ ಹಾಗೂ ಅನಗತ್ಯ ವಿಳಂಬಕ್ಕೆ ಈ ಸಮಿತಿಯ ಮೂಲಕ ಪಾರದರ್ಶಕವಾಗಿ ಪರಿಹಾರ ನೀಡುವುದು ನಮ್ಮ ಉದ್ದೇಶವಾಗಿದೆ ಎಂದರು.
ಕಾವೇರಿ ನೀರಿನ ಸಂಪರ್ಕ ಪಡೆದುಕೊಳ್ಳುವ ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಪ್ರತಿನಿತ್ಯ ಪ್ರತಿಮನೆಗೂ ಪ್ರತಿನಿತ್ಯ 200 ಲೀಟರ್ ನೀರು ಸರಬರಾಜು ಮಾಡಲಾಗುವುದು. ಕಾವೇರಿ 5 ನೇ ಹಂತದ ಯೋಜನೆ ಲೋಕಾರ್ಪಣೆಯ ನಂತರ ಬೆಂಗಳೂರು ಜಲಮಂಡಳಿಯ ಬಳಿ ಸಾಕಷ್ಟು ನೀರು ಲಭ್ಯವಿದೆ. ಹಂತ ಹಂತವಾಗಿ ಎಲ್ಲಾ ಪ್ರದೇಶಗಳಿಗೂ ಈ ನೀರನ್ನು ತಲುಪಿಸುವ ಕಾರ್ಯದಲ್ಲಿ ಬೆಂಗಳೂರು ಜಲಮಂಡಳಿ ತೊಡಗಿಕೊಂಡಿದೆ. ಅಗತ್ಯವಿರುವ ಪ್ರಮಾಣದ ನೀರನ್ನು ನೀಡುವುದು ನಮ್ಮ ಗುರಿಯಾಗಿದೆ ಎಂದು ಜಲಮಂಡಳಿ ಅಧ್ಯಕ್ಷರಾದ ಡಾ ರಾಮ್ ಪ್ರಸಾತ್ ಮನೋಹರ್ ಭರವಸೆ ನೀಡಿದರು.
ಬೆಂಗಳೂರು ಅಪಾರ್ಟ್‌ಮೆಂಟ್ ಫೆಡರೇಷನ್‌ನ ಉಪಾಧ್ಯಕ್ಷರಾದ ಸತೀಶ್ ಮಲ್ಯ ಮಾತನಾಡಿ , ಕಾವೇರಿ ನೀರಿನ ಸಂಪರ್ಕ ಪಡೆಯುವ ನಿಟ್ಟಿನಲ್ಲಿ ಅಪಾರ್ಟ್‌ಮೆಂಟ್‌ಗಳು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಬೆಂಗಳೂರು ಜಲಮಂಡಳಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ನಮ್ಮ ಜೊತೆಗೂಡಿ ವಿಭಾಗವಾರು ಸಭೆಗಳನ್ನು ಆಯೋಜಿಸಲಾಗುತ್ತಿದ್ದು, ಜಲಮಂಡಳಿ ಅಧ್ಯಕ್ಷರೇ ಸಭೆಯಲ್ಲಿ ಭಾಗವಹಿಸಿ ಸಮಸ್ಯೆಗಳಿಗೆ ತ್ವರಿತಗತಿಯಲ್ಲಿ ಪರಿಹಾರ ನೀಡುತ್ತಿದ್ದಾರೆ. ನಿವಾಸಿಗಳ ಅನುಕೂಲಕ್ಕಾಗಿ ಸಂಜೆ ಸಭೆಗಳನ್ನು ಆಯೋಜಿಸಲಾಗುತ್ತಿದ್ದು, ಈಸ್ಟ್ ಜೋನ್ ನ ರೀತಿಯಲ್ಲಿಯೇ ನಾರ್ಥ್ ಜೋನ್ ನಲ್ಲೂ ಕೂಡಾ ಸಭೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಅಪಾರ್ಟ್‌ಮೆಂಟ್‌ಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಪಾರದರ್ಶಕವಾಗಿ ಪರಿಹರಿಸುವುದು ನಮ್ಮ ಪ್ರಮುಖ ಉದ್ದೇಶವಾಗಿದೆ. ಈಗಾಗಲೇ ಬೆಂಗಳೂರು ಈಸ್ಟ್ ಭಾಗದ ಹಲವಾರು ಅಪಾರ್ಟ್‌ಮೆಂಟ್‌ಗಳಿಗೆ ಭೇಟಿ ನೀಡಿ ಅವರ ಸಮಸ್ಯೆಗಳಿಗೆ ಪರಿಹಾರ ನೀಡಲಾಗಿದೆ. ಬೆಂಗಳೂರು ಅಪಾರ್ಟ್‌ಮೆಂಟ್ ಫೆಡರೇಷನ್ ಸಹಯೋಗದಲ್ಲಿ ಸರಣಿ ಸಭೆಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ. ಮುಂಬರುವ ಬೇಸಿಗೆಯ ಸಂಧರ್ಭದಲ್ಲಿ ಸಾರ್ವಜನಿಕರು ನೀರಿನ ಸಮಸ್ಯೆಯಿಂದ ಬಳಲಬಾರದು ಎನ್ನುವ ಉದ್ದೇಶದಿಂದ ಇಲ್ಲಿಯವರೆಗೆ 258 ಕಾವೇರಿ ಸಂಪರ್ಕ ಅಭಿಯಾನ ನಡೆಸುವ ಮೂಲಕ 21 ಸಾವಿರಕ್ಕೂ ಹೆಚ್ಚು ಸಂಪರ್ಕಗಳನ್ನು ನೀಡಲಾಗಿದೆ. ಅಪಾರ್ಟ್‌ಮೆಂಟ್‌ಗಳ ನಿವಾಸಿಗಳು ಸಂಜೆ ಹೊತ್ತು ಲಭ್ಯವಿರುವ ಹಿನ್ನಲೆಯಲ್ಲಿ ಪ್ರತಿಯೊಂದು ಜೋನ್ ವೈಸ್ ಮೀಟಿಂಗ್ ಮಾಡಿ ಸಭೆ ನಡೆಸಲಾಗುತ್ತಿದೆ ಎಂದು ಜಲಮಂಡಳಿ ಅಧ್ಯಕ್ಷರು ತಿಳಿಸಿದರು.