ಬೆಂಗಳೂರು: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 7,13.862 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಇವರಲ್ಲಿ
3,35,468 ವಿದ್ಯಾರ್ಥಿಗಳು ಮತ್ತು 3,78,389 ವಿದ್ಯಾರ್ಥಿನಿಯರು ಮತ್ತು ಐವರು ದ್ವಿಲಿಂಗಿಗಳಿದ್ದಾರೆ. 7.13 ಲಕ್ಷ ವಿದ್ಯಾರ್ಥಿಗಳಲ್ಲಿ 2.9 ಲಕ್ಷ ವಿಜ್ಞಾನ ವಿಭಾಗ, 2.2 ಲಕ್ಷ ವಾಣಿಜ್ಯ ಮತ್ತು 1.9 ಲಕ್ಷ ಕಲಾ ವಿಭಾಗದ ವಿದ್ಯಾರ್ಥಿಗಳಿದ್ದಾರೆ. ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಒಟ್ಟು 8,96,447 ವಿದ್ಯಾರ್ಥಿಗಳು ಹಾಜರಾಗಲಿದ್ದು, ಇವರಲ್ಲಿ 4,61,563 ಬಾಲಕರು ಮತ್ತು 4,34.884 ಬಾಲಕಿಯರಿದ್ದಾರೆ ಎಂದು ಪರೀಕ್ಷಾ ಮಂಡಳಿ ತಿಳಿಸಿದೆ.
ಪಿಯುಸಿ ಪರೀಕ್ಷೆ ಮಾರ್ಚ್ 1 ರಿಂದ 20 ರವರೆಗೆ ಮತ್ತು ಎಸ್ ಎಸ್ ಎಲ್ ಸಿ ಪರೀಕ್ಷೆ ಮಾರ್ಚ್ 21 ರಿಂದ ಏಪ್ರಿಲ್ 4 ರವರೆಗೆ ನಡೆಯಲಿದೆ. ರಾಜ್ಯಾದ್ಯಂತ ಪಿಯುಸಿ ಪರೀಕ್ಷೆಗೆ 1,171 ಪರೀಕ್ಷಾ ಕೇಂದ್ರಗಳನ್ನು ಹಾಗೂ ಎಸ್ ಎಸ್ ಎಲ್ ಸಿ ಪರೀಕ್ಷೆಗೆ 2,818 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. 31,000 ಮೌಲ್ಯಮಾಪಕರು 76 ಕೇಂದ್ರಗಳಲ್ಲಿ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಲಿದ್ದಾರೆ. 65,000 ಮೌಲ್ಯಮಾಪಕರು 240 ಕೇಂದ್ರಗಳಲ್ಲಿ ಎಸ್ ಎಸ್ ಎಲ್ ಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಲಿದ್ದಾರೆ. ಕಳೆದ ವರ್ಷದಂತೆಯೇ ಈ ವರ್ಷವೂ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಎಲ್ಲಾ ಮೌಲ್ಯಮಾಪನ ಕೇಂದ್ರಗಳಲ್ಲಿ ವೆಬ್ ಕಾಸ್ಟಿಂಗ್ ಜಾರಿಗೊಳಿಸಲಾಗಿದೆ.
ಕೋವಿಡ್ ಪೂರ್ವದಲ್ಲಿ ಇದ್ದ ನಿಯಮದಂತೆ ಈ ವರ್ಷದಿಂದ ಗ್ರೇಸ್ ಮಾರ್ಕ್ಸ್ ಪಡೆಯಲು ಕನಿಷ್ಠ ಅಂಕಗಳನ್ನು ಪಡೆಯಲೇಬೇಕಿದೆ. ಕೋವಿಡ್ ಅವಧಿಯಲ್ಲಿ 35 ಅಂಕಗಳಿಗೆ ಬದಲಾಗಿ 25 ಅಂಕಗಳನ್ನು ಗಳಿಸಿದ್ದರೆ ಗ್ರೇಸ್ ಮಾರ್ಕ್ಸ್ ನೀಡಲಾಗುತ್ತಿತ್ತು. ಆದರೆ ಈಗ ಗ್ರೇಸ್ ಮಾರ್ಕ್ಸ್ ಪಡೆಯಲು ಎಲ್ಲಾ ವಿಷಯಗಳಲ್ಲಿ 175 ಅಂಕಗಳನ್ನು ಕಡ್ಡಾಯವಾಗಿ ಗಳಿಸಬೇಕಾಗುತ್ತದೆ.
ಯಾವುದೇ ಅಕ್ರಮ ಚಟುವಟಿಕೆಗಳಿಗೆ ಅವಕಾಶವಾಗದಂತೆ ಪ್ರತಿ ಪರೀಕ್ಷಾ ಕೇಂದ್ರದ ಸುತ್ತ 200 ಮೀಟರ್ ಪ್ರದೇಶವನ್ನು ನಿರ್ಬಂಧಿತ ವಲಯ ಎಂದು ಘೋಷಿಸಲಾಗುತ್ತದೆ. ಜೆರಾಕ್ಸ್, ಸೈಬರ್ ಸೆಂಟರ್, ಕಂಪ್ಯೂಟರ್ ಕೇಂದ್ರಗಳನ್ನು ಪರೀಕ್ಷಾ ದಿನಗಂದು ಮುಚ್ಚಿಸಲಾಗುತ್ತದೆ. ಪ್ರಶ್ನೆ ಪತ್ರಿಕೆಗಳನ್ನು ಸೋರಿಕೆ ಮಾಡುವ ಯಾರೇ ಆದರೂ ಶಿಕ್ಷಣ ಕಾಯಿದೆ ಅಡಿಯಲ್ಲಿ ಕಠಿಣ ನಿಯಮ ಕೈಗೊಳ್ಳಲು ಮಂಡಳಿ ನಿರ್ಧರಿಸಿದೆ ಮತ್ತು ಭದ್ರತೆಗಾಗಿ ಅಗತ್ಯ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲು ತೀರ್ಮಾನಿಸಿದೆ.
ಈ ವರ್ಷ ವಿಳಂಬ ಮಾಡದೆ ಪರೀಕ್ಷೆ ಮುಗಿಯುತ್ತಿದ್ದಂತೆ ಮೌಲ್ಯಮಾಪನ ಆರಂಭಿಸಲು ನಿರ್ಧರಿಸಲಾಗಿದೆ. ಫಲಿತಾಂಶಗಳನ್ನು ವಿಶ್ಲೇಷಿಸಿ ಅಗತ್ಯ ಇರುವ ಕಡೆ ಸುಧಾರಣೆಗೆ ಒತ್ತು ನೀಡಲಾಗುತ್ತದೆ. ರಾಜ್ಯದಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪಿಯುಸಿ ಮತ್ತು ಎಸ್ ಎಸ್ ಎಲ್ ಸಿ ಎರಡರಲ್ಲೂ ಪ್ರತಿ ವರ್ಷ ಮೂರು ವಾರ್ಷಿಕ ಪರೀಕ್ಷೆಗಳನ್ನು ನಡೆಸುತ್ತಾ ಬರಲಾಗಿದೆ.