ನವದೆಹಲಿ: ಮಾಧ್ಯಮಗಳಲ್ಲಿ ಪ್ರಮುಖ ಹುದ್ದೆಗಳಲ್ಲಿರುವ ಪತ್ರಕರ್ತರು ಯಾವುದೇ ಹೇಳಿಕೆ, ಅಭಿಪ್ರಾಯ ಅಥವಾ ಸುದ್ದಿಯನ್ನುಪ್ರಕಟಿಸುವ ಮುನ್ನ ಅತ್ಯಂತ ಎಚ್ಚರಿಕೆ ಮತ್ತು ಜವಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸುವಲ್ಲಿ ಮಾಧ್ಯಮದ ಶಕ್ತಿ ಮಹತ್ವದ್ದಾಗಿದೆ. ಸಾರ್ವಜನಿಕ ಭಾವನೆಗಳನ್ನು ಪ್ರಭಾವಿಸುವ ಮತ್ತು ಗಮನಾರ್ಹ ವೇಗದಲ್ಲಿ ಗ್ರಹಿಕೆಗಳನ್ನು ಬದಲಾಯಿಸುವ ಸಾಮರ್ಥ್ಯವನ್ನು ಮಾಧ್ಯಮಗಳು ಹೊಂದಿವೆ ಎಂದು ನ್ಯಾಯಮೂರ್ತಿಗಳಾದ ಜೆ.ಬಿ.ಪರ್ದಿವಾಲಾ ಮತ್ತು ಆರ್. ಮಹದೇವನ್ ಅವರ ಪೀಠ ಅಭಿಪ್ರಾಯಪಟ್ಟಿದೆ.
ಬಿಡ್ ಮತ್ತು ಹ್ಯಾಮರ್ ಹರಾಜಿಗಿಡಲಿರುವ ಕೆಲವು ವರ್ಣಚಿತ್ರಗಳ ದೃಢೀಕರಣದ ಮೇಲೆ ಮಾನನಷ್ಟ ಸಂಬಂಧಿತ ಸುದ್ದಿಯನ್ನು ಪ್ರಕಟಿಸಲಾಗಿದೆ ಎಂದು ಆರೋಪಿಸಿ ಇಂಗ್ಲೀಷ್ ಪತ್ರಿಕೆ ಟೈಮ್ಸ್ ಆಫ್ ಇಂಡಿಯಾದ ಸಂಪಾದಕೀಯ ನಿರ್ದೇಶಕರು ಮತ್ತು ಇತರ ಪತ್ರಕರ್ತರ ವಿರುದ್ಧ ದಾಖಲಿಸಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು ರದ್ದುಗೊಳಿಸುವ ಸಂದರ್ಭದಲ್ಲಿ ಪೀಠ ಈ ಮಾತುಗಳನ್ನು ಹೇಳಿದೆ. ಭಾರತದ ಸಂವಿಧಾನದ 19 (1) (ಎ) ಅಡಿಯಲ್ಲಿ ಖಾತರಿಪಡಿಸಿರುವ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ಅತ್ಯುನ್ನತವಾಗಿದೆ ಎಂದು ನಾವು ಒತ್ತಿಹೇಳುವುದು ಅಗತ್ಯವಾಗಿದೆ. ಅದೇ ಸಮಯದಲ್ಲಿ, ಮಾಧ್ಯಮದಲ್ಲಿ ಕೆಲಸ ಮಾಡುವವರು, ವಿಶೇಷವಾಗಿ ಪ್ರಮುಖ ಸ್ಥಾನದಲ್ಲಿರುವ ವ್ಯಕ್ತಿಗಳು, ಲೇಖಕರು ಮುಂತಾದವರು ಯಾವುದೇ ಹೇಳಿಕೆಗಳನ್ನು ಪ್ರಕಟಿಸುವ ಮೊದಲು ಅತ್ಯಂತ ಎಚ್ಚರಿಕೆ ಮತ್ತು ಜವಾಬ್ದಾರಿಯನ್ನು ವಹಿಸಬೇಕು ಎಂದು ಪೀಠ ಒತ್ತಿ ಹೇಳಿದೆ.
ಕತ್ತಿಗಿಂತ ಲೇಖನಿ ಹರಿತವಾದುದು ಎಂಬ ಆಂಗ್ಲ ಲೇಖಕ ಬುಲ್ಡರ್ ಲಿಟ್ಟನ್ ಮಾತುಗಳನ್ನು ನ್ಯಾಯಾಲಯವು ಈ ಸಂದರ್ಭ ಉಲ್ಲೇಖಿಸಿದೆ. ಒಂದು ಲೇಖನ ಅಥವಾ ವರದಿಯು ಲಕ್ಷಾಂತರ ಜನರೊಂದಿಗೆ ಅನುರಣಿಸುತ್ತದೆ. ಅವರ ನಂಬಿಕೆ ಬದಲಿಸುತ್ತದೆ ಮತ್ತು ಅಭಿಪ್ರಾಯಗಳನ್ನು ರೂಪಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಮಾಧ್ಯಮ ವರದಿಯಲ್ಲಿ ನಿಖರತೆ ಮತ್ತು ನ್ಯಾಯಸಮ್ಮತತೆಯ ನಿರ್ಣಾಯಕ ಅಗತ್ಯವನ್ನು ಈ ವಾಕ್ಯ ಎತ್ತಿ ತೋರಿಸುತ್ತದೆ. ವಿಶೇಷವಾಗಿ, ವ್ಯಕ್ತಿಗಳು ಅಥವಾ ಸಂಸ್ಥೆಗಳ ಸಮಗ್ರತೆಯ ಮೇಲೆ ಪರಿಣಾಮ ಬೀರುವ ಸಾಮರ್ಥ್ಯವನ್ನು ಹೊಂದಿರುವ ಸುದ್ದಿ ಅಥವಾ ಲೇಖನಗಳನ್ನು ಪ್ರಕಟಿಸುವಾಗ ಈ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಸಾರ್ವಜನಿಕ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಸುದ್ದಿ ಪ್ರಕಟಿಸಬೇಕು ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ. ಮಾನನಷ್ಟ ಮೊಕದ್ದಮೆಯಲ್ಲಿ ತಮ್ಮ ಅರ್ಜಿ ತಿರಸ್ಕರಿಸಿ ಕ್ರಿಮಿನಲ್ ವಿಚಾರಣೆ ಆದೇಶಿಸಿ ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಪತ್ರಕರ್ತರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.