ಬೆಂಗಳೂರು: ಏರ್ ಶೋ ಉದ್ಘಾಟನೆಗೆ ಬೆಂಗಳೂರಿಗೆ ಆಗಮಿಸಿದ್ದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಒದಗಿಸಿದ್ದ ಬೆಂಗಾವಲು ಪಡೆ ಸಾಗುವಾಗ ಹೆಡ್ ಕಾನ್ಸ್ಟೆಬಲ್ ಮೇಲೆ ಬೈಕ್ ಹತ್ತಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಹಮದ್ ದಿಲ್ವಾರ್ ಹುಸೇನ್ ಬಂಧಿತ ಆರೋಪಿ. ಫೆ.9ರಂದು ರಾಜನಾಥ್ ಸಿಂಗ್ ಅವರು ನಗರಕ್ಕೆ ಭೇಟಿ ನೀಡಿದ್ದರು. ಅವರು ತೆರಳುತ್ತಿದ್ದ ಮಾರ್ಗದಲ್ಲಿ ಬಂದೋಬಸ್ತ್ ಕಲ್ಪಿಸಲಾಗಿತ್ತು. ಅಂದು ಮಧ್ಯಾಹ್ನ 1:50 ಕ್ಕೆ ಅನಿಲ್ ಕುಂಬ್ಳೆ ಸರ್ಕಲ್ ಬಳಿ ರಾಜನಾಥ್ ಸಿಂಗ್ ಮತ್ತು ಅವರ ಬೆಂಗಾವಲು ಪಡೆ ಹೋಗುತ್ತಿದ್ದರು. ಆ ಸಂದರ್ಭದಲ್ಲಿ ಬೆಂಗಾವಲು ಪಡೆಗೆ ಆರೋಪಿ ಅಡ್ಡ ಬಂದಿದ್ದ. ಆತನನ್ನು ತಡೆಯಲು ಯತ್ನಿಸಿದ್ದ ಹೆಡ್ ಕಾನ್ಸ್ಟೆಬಲ್ ದಿನೇಶ್ ಅವರ ಮೇಲೆ ಬೈಕ್ ಹತ್ತಿಸಿದ್ದ. ಅವರು ಗಾಯಗೊಂಡಿದ್ದರು. ದಿನೇಶ್ ನೀಡಿದ ದೂರು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ. ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.