ಇನ್ವೆಸ್ಟ್ ಕರ್ನಾಟಕದ ಬಹುಪಾಲು ಲಾಭ ಕನ್ನಡಿಗರಿಗೆ ದೊರೆಯಬೇಕು. ಕರವೇ ಅಧ್ಯಕ್ಷ ನಾರಾಯಣಗೌಡ ಸಲಹೆ

Most read

ಬೆಂಗಳೂರು: ಇಂದಿನಿಂದ ವಿಶ್ವ ಹೂಡಿಕೆದಾರರ ಸಮಾವೇಶ, ಇನ್ವೆಸ್ಟ್ ಕರ್ನಾಟಕ ಆರಂಭಗೊಳ್ಳುತ್ತಿದೆ. ರೂ. 10 ಲಕ್ಷ ಕೋಟಿ ಹೂಡಿಕೆಯನ್ನು ರಾಜ್ಯ ಸರ್ಕಾರ ನಿರೀಕ್ಷಿಸಿದೆ.  ಕರ್ನಾಟಕದಲ್ಲಿ ಬಂಡವಾಳ ಹೂಡಿಕೆಗೆ ಉತ್ತೇಜನ ನೀಡುವುದು ಸರಿಯಾದ ಕ್ರಮ. ಇದನ್ನು ಸ್ವಾಗತಿಸುತ್ತೇನೆ. ಆದರೆ ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ ಮತ್ತು ಹೂಡಿಕೆದಾರರಿಗೆ ಇರಬೇಕಾದ ಸಾಮಾಜಿಕ ಜವಾಬ್ದಾರಿಗಳನ್ನು ಮರೆಯಬಾರದು ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ  ಟಿ.ಎ. ನಾರಾಯಣಗೌಡ ಎಚ್ಚರಿಸಿದ್ದಾರೆ.

ಬಂಡವಾಳ ಹೂಡಿಕೆ, ಉದ್ಯಮಶೀಲತೆಗೆ ಪ್ರೋತ್ಸಾಹ ಎಲ್ಲವೂ ಸರಿಯೇ. ಆದರೆ ಅದು ಈ ನಾಡಿನ ಜನರನ್ನು ಒಳಗೊಳ್ಳದಿದ್ದರೆ ಅದಕ್ಕೆ ಅರ್ಥವಿಲ್ಲ. ಇನ್ವೆಸ್ಟ್ ಕರ್ನಾಟಕದ ಬಹುಪಾಲು ಲಾಭ ಕನ್ನಡಿಗರಿಗೆ ದೊರೆಯುವಂತಾಗಬೇಕು. ಇಲ್ಲವಾದಲ್ಲಿ ಉದ್ಯಮಿಗಳಿಗೆ ರತ್ನಗಂಬಳಿ ಹಾಸಿ ಕರೆಯುವುದರಲ್ಲಿ ಯಾವುದೇ ಪ್ರಯೋಜನವೂ ಇರುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇನ್ವೆಸ್ಟ್ ಕರ್ನಾಟಕದ ಮೂಲಕ ರಾಜ್ಯ, ಹೊರ ರಾಜ್ಯಗಳಲ್ಲಿ ಇರುವ ಕನ್ನಡಿಗ ಉದ್ಯಮಿಗಳಿಗೆ ಹೆಚ್ಚಿನ ಆದ್ಯತೆ ದೊರೆಯುವಂತಾಗಬೇಕು. ಯಾವುದೇ ಉದ್ಯಮ ಕರ್ನಾಟಕಕ್ಕೆ ಬಂದರೂ ಸಿ ಮತ್ತು ಡಿ ದರ್ಜೆಯ ಎಲ್ಲ ಹುದ್ದೆಗಳು ಕನ್ನಡದ ಮಕ್ಕಳಿಗೆ ದೊರೆಯುವಂತಾಗಬೇಕು. ಇತರ ಹುದ್ದೆಗಳಲ್ಲಿ ಶೇ. 60ರಷ್ಟು ಕನ್ನಡಿಗರಿಗೇ ದೊರೆಯಬೇಕು. ಆಗ ಇಂಥ ಸಮಾವೇಶ ನಿಜವಾದ ಅರ್ಥದಲ್ಲಿ ಯಶಸ್ವಿಯಾಗುತ್ತದೆ. ಕರ್ನಾಟಕ ಎಂದರೆ ಕೇವಲ ಒಂದು ಭೂಭಾಗವಲ್ಲ, ಕರ್ನಾಟಕವೆಂದರೆ ಇಲ್ಲಿನ ಜನರು, ಅವರ ಬದುಕು. ಅದನ್ನು ಸರ್ಕಾರ, ಉದ್ಯಮಿಗಳು ಮರೆಯಬಾರದು ಎಂದಿದ್ದಾರೆ.

ಹಿಂದೆ ಕರ್ನಾಟಕದಲ್ಲಿ ಬಂಡವಾಳ ಹೂಡಿದವರು ಸರ್ಕಾರ ನೀಡಿದ ಎಲ್ಲ ಸಹಾಯವನ್ನು ಪಡೆದು, ರಿಯಾಯಿತಿ ದರದಲ್ಲಿ ಭೂಮಿ, ತೆರಿಗೆ ರಜೆ, ಕಡಿಮೆ ದರದಲ್ಲಿ ವಿದ್ಯುತ್, ನೀರಿನ ಸೌಲಭ್ಯ ಇತ್ಯಾದಿಗಳನ್ನು ಪಡೆದು ಹೆಮ್ಮರವಾಗಿ ಬೆಳೆದು ನಿಂತವು. ಆದರೆ ಕನ್ನಡಿಗರಿಗೆ ಉದ್ಯೋಗ ಕೊಡಿ ಎಂದು ಕೇಳಿದಾಗ “ನಾವು ಅರ್ಹತೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳುತ್ತೇವೆ” ಎಂಬ ಅಹಂಕಾರದ ಹೇಳಿಕೆಗಳನ್ನು ನೀಡಿದವು. ಇದು ಕೃತಘ್ನತೆಯ ಪರಮಾವಧಿ ಮಾತ್ರವಲ್ಲ, ಹತ್ತಿದ ಏಣಿಯನ್ನು ಒದೆಯುವ ದುರಹಂಕಾರ. ಸ್ಥಳೀಯರಿಗೆ ಉದ್ಯೋಗ ನೀಡುತ್ತೇವೆ ಎಂದು ಲಿಖಿತ ಒಪ್ಪಂದ ಮಾಡಿಕೊಂಡ ಉದ್ಯಮಿಗಳೂ ಕೂಡ ಅದನ್ನು ಪಾಲಿಸಲಿಲ್ಲ ಎನ್ನುವುದು ಆತಂಕದ ವಿಷಯವಾಗಿದೆ ಎಂದು ಹೇಳಿದ್ದಾರೆ.

ಕರ್ನಾಟಕದಲ್ಲಿ ಹೊರರಾಜ್ಯದ ವಲಸೆ ಪ್ರಮಾಣ ಮಿತಿಮೀರಿ ಹೋಗಿರುವ ಈ ಸಂದರ್ಭದಲ್ಲಿ ಹೊಸ ಉದ್ಯಮಗಳಲ್ಲೂ ಹೊರರಾಜ್ಯದವರನ್ನೇ ತುಂಬಿದರೆ ಕರ್ನಾಟಕದ ಚಹರೆಯೇ ಬದಲಾಗುವ ಅಪಾಯವಿದೆ. ಈ ಹಿನ್ನೆಲೆಯಲ್ಲಿ ಹೊಸ ಉದ್ಯಮಿಗಳ ಜೊತೆಯಲ್ಲಿ ಬರುವ ಹೊಸ ವಲಸಿಗರ ಸಮಸ್ಯೆಯನ್ನು ನಾವು ಎದುರಿಸಬೇಕಾಗುತ್ತದೆ. ಉದ್ಯಮಗಳು ಬರಲಿ, ಅದಕ್ಕೆ ನಮ್ಮ ಆಕ್ಷೇಪಣೆಯಿಲ್ಲ. ಆದರೆ ಕರ್ನಾಟಕದ ಸುಂದರ ಪರಿಸರದಲ್ಲಿ, ಎಲ್ಲ ಸವಲತ್ತುಗಳನ್ನು ಪಡೆದು ಉದ್ಯಮ ಕಟ್ಟುವವರು ಕನ್ನಡಿಗರಿಗೇ ಉದ್ಯೋಗ ನೀಡಬೇಕೆಂಬ ಸಾಮಾಜಿಕ ಜವಾಬ್ದಾರಿ ಹೊಂದಿರಬೇಕು. ಈ ಜವಾಬ್ದಾರಿಯನ್ನು ಕಾನೂನುಬದ್ಧವಾಗಿ ಸರ್ಕಾರ ಜಾರಿಗೆ ತರಬೇಕು. ಕರ್ನಾಟಕದ ಅಭಿವೃದ್ಧಿ ಎಂದರೆ ಕನ್ನಡಿಗರ ಅಭಿವೃದ್ಧಿ ಎಂಬುದನ್ನು ಯಾರೂ ಮರೆಯಬಾರದು.

ಕನ್ನಡ, ಕರ್ನಾಟಕ, ಕನ್ನಡಿಗರ ಕುರಿತಾಗಿ ಅಪಾರ ಕಾಳಜಿ ಹೊಂದಿರುವ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರು ಈ ಸೂಕ್ಷ್ಮಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂಬುದು ನನ್ನ ನಂಬಿಕೆ. ಕನ್ನಡಿಗರ ಪಾಲಿಗೆ ‘ಇನ್ವೆಸ್ಟ್ ಕರ್ನಾಟಕ’ ಭಾಗ್ಯದ ಬಾಗಿಲು ತೆರೆಯಬೇಕೇ ಹೊರತು ಕನ್ನಡಿಗರನ್ನು ಕರ್ನಾಟಕದಲ್ಲಿ ಅತಂತ್ರರನ್ನಾಗಿ ಮಾಡಬಾರದು ಎಂದು ನಾರಾಯಣಗೌಡ ಅವರು ಮನವಿ ಮಾಡಿದ್ದಾರೆ.

More articles

Latest article