ಕುಂಭಮೇಳದಲ್ಲಿ ಉಂಟಾದ ಸಾವಿಗೆ ಹೊಣೆ ಯಾರು?

Most read

ಕುಂಭಮೇಳಕ್ಕೆ  ಬದುಕಿನ ಪಾಪವನ್ನು ತೊಳೆದುಕೊಂಡು ಬರಲು ಹೋಗಿದ್ದ ನಮ್ಮವರೇ ಇಂದು ಹೆಣವಾಗಿ ನಮ್ಮೂರುಗಳಿಗೆ ತೆರಳುತ್ತಿದ್ದಾರೆ ಅಂದರೆ ಮನುಷ್ಯನ ಜೀವಕ್ಕೆ ಬೆಲೆ ಇಲ್ಲವೇ?. ಇದಕ್ಕೆ ಯಾರು ಉತ್ತರಿಸಬೇಕು.

2025 ಜನವರಿ 13 ರಿಂದ ಫೆಬ್ರವರಿ 26ರ ತನಕ ಅಂದರೆ ಶಿವರಾತ್ರಿಯ ದಿನದವರೆಗೂ ಉತ್ತರ ಪ್ರದೇಶದ ಪ್ರಯಾಗ್‌ ರಾಜ್‌ನಲ್ಲಿ ಮಹಾ ಕುಂಭಮೇಳ ನಡೆಯುತ್ತಿದೆ. ಈಗಾಗಲೇ ಕೋಟ್ಯಂತರ ಭಕ್ತಾದಿಗಳು ಕುಂಭಮೇಳಕ್ಕೆ ಹೋಗಿ ಅಲ್ಲಿನ ಪವಿತ್ರ ನದಿಗಳೆಂದು ಕರೆಸಿಕೊಳ್ಳುವ ಗಂಗಾ, ಯಮುನಾ ಮತ್ತು ಸರಸ್ವತಿ ನದಿಯ ಸಂಗಮದಲ್ಲಿ ಮಿಂದೆದ್ದು ಬರುತ್ತಿದ್ದಾರೆ. ಅದರಲ್ಲಿ ರಾಜಕಾರಣಿಗಳು, ಸಿನಿಮಾ ಕಲಾವಿದರು, ಉದ್ಯಮಿಗಳು ಹೀಗೆ ಹಲವಾರು ಗಣ್ಯರು ಸಹ ಪ್ರಯಾಗ್‌ ರಾಜ್‌ನಲ್ಲಿ ಸಂಗಮವಾಗುವ ನದಿಯಲ್ಲಿ ಮಿಂದೆದ್ದ ಚಿತ್ರಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ದಿನಾಂಕ 29 ಜನವರಿ ಅಂದರೆ, ʼಮೌನಿ ಅಮಾವಾಸ್ಯೆಯʼ ದಿನ ಕೋಟ್ಯಂತರ ಭಕ್ತಾದಿಗಳು ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಲೆಂದು ಒಂದೇ ಸಮಯದಲ್ಲಿ ಹೋದ ಪರಿಣಾಮ ನೂಕುನುಗ್ಗಲಿನಿಂದ ಕಾಲ್ತುಳಿತ ಉಂಟಾಗಿ ಮಹಿಳೆಯರು ಸೇರಿ ಸುಮಾರು 30 ಮಂದಿ ಮೃತಪಟ್ಟಿದ್ದಾರೆ. ಹಾಗು 60ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ನೂಕು ನುಗ್ಗಲು ಶುರುವಾಗಿದ್ದೆ ತಡ ರಾತ್ರಿ 2 ಗಂಟೆಗೆ. ಇವರಲ್ಲಿ ಕರ್ನಾಟಕದ ಮೇಘಾ, ಜ್ಯೋತಿ, ಅರುಣ ಮತ್ತು ಮಹಾದೇವಿ ಎಂಬ ನಾಲ್ಕು ಜನರು ಇದ್ದರು.

ಈ ಹೊಣೆಯನ್ನು ಯಾರು ತೆಗೆದುಕೊಳ್ಳಬೇಕು?. ಈ ರೀತಿಯಲ್ಲಿ ಕಾಲ್ತುಳಿತಕ್ಕೆ ಸಿಲುಕಿ ಸತ್ತವರಲ್ಲಿ ನಮ್ಮ ಸಂಬಂಧಿಗಳು ಇದ್ದಿದ್ದರೆ!, ಯಾರನ್ನು ಕೇಳಬೇಕಿತ್ತು?. ಕುಂಭಮೇಳಕ್ಕೆ ಹೋಗಿ ಬದುಕಿನ ಪಾಪವನ್ನು ತೊಳೆದುಕೊಂಡು ಬರಲು ಹೋಗಿದ್ದ ನಮ್ಮವರೇ ಇಂದು ಹೆಣವಾಗಿ ನಮ್ಮೂರುಗಳಿಗೆ ತೆರಳುತ್ತಿದ್ದಾರೆ ಅಂದರೆ ಮನುಷ್ಯನ ಜೀವಕ್ಕೆ ಬೆಲೆ ಇಲ್ಲವೇ?. ಇದಕ್ಕೆ ಸರ್ಕಾರಗಳು ಉತ್ತರಿಸಬೇಕು.

ಈ ಘಟನೆ ಆದ ತಕ್ಷಣ ಕೇಂದ್ರ ಸರ್ಕಾರದಿಂದ ಹಿಡಿದು ರಾಜ್ಯ ಸರ್ಕಾರಗಳು ನಾಲ್ಕು ಸಾಂತ್ವನದ ಮಾತುಗಳು ಹೇಳಿದವು. ಕರ್ನಾಟಕ ಸರ್ಕಾರ ಕುಂಭಮೇಳದಲ್ಲಿ ಸಿಲುಕಿದ ಕನ್ನಡಿಗರ ಸುರಕ್ಷತೆಗಾಗಿ ಸಹಾಯವಾಣಿ ಸಂಖ್ಯೆಯನ್ನೂ(080-22340676) ಕೊಟ್ಟಿತು. ಆದರೆ ಈ ಘಟನೆ ಆಗುವುದನ್ನು ಯಾಕೆ ಯಾರಿಂದಲೂ ತಡೆಯಲು ಆಗಲಿಲ್ಲ ಎಂಬ ಪ್ರಶ್ನೆ ಸಾಮಾನ್ಯವಾಗಿ ಬರಬೇಕು. ಈ ಪ್ರಶ್ನೆ ಬರದೆ ಇದ್ದರೆ ಈ ರೀತಿಯ ಘಟನೆಗಳು ಸಾಮಾನ್ಯ ಎನಿಸಿ ಬಿಡುತ್ತವೆ. ಈ ಹಿಂದೆ ಉತ್ತರ ಪ್ರದೇಶ ಸರ್ಕಾರ ಮಹಾ ಕುಂಭಮೇಳಕ್ಕೆ ಬರುವವರ ಅನುಕೂಲ ಮತ್ತು ಸುರಕ್ಷತೆಗಾಗಿ ಎಲ್ಲ ರೀತಿಯ ಸಿದ್ದತೆಗಳು ನಡೆದಿವೆ ಎಂದು ಮೊದಲೇ ಹೇಳಿತ್ತು. ಪುಣ್ಯಸ್ನಾನಕ್ಕೆ ಬರುವ ಭಕ್ತರು ಕಳೆದೆಲ್ಲಾ ಬಾರಿಗಿಂತ ಈ ಸಲ ಹೆಚ್ಚು ಬರುವ ನಿರೀಕ್ಷೆಯೊಂದಿಗೆ ಅಲ್ಲಲ್ಲಿ ಸಿಸಿ ಟಿವಿ ಕ್ಯಾಮೆರಾ, ಸಂಚಾರ ದಟ್ಟಣೆ ನಿಯಂತ್ರಣ ಹಾಗೂ ಕೃತಕ ಬುದ್ಧಿಮತ್ತೆಯ ನೆರವು ಪಡೆಯಲಾಗುತ್ತಿದೆ ಎಂದು ಉತ್ತರ ಪ್ರದೇಶ ಸರ್ಕಾರ ಹೇಳಿತ್ತು. ಆದರೆ ಆದ್ಯಾವುದು ಸಮರ್ಪಕವಾಗಿ ನಡೆಯಲಿಲ್ಲ ಎಂಬುದು ಈ ಘಟನೆಯ ನಂತರ ಸ್ಪಷ್ಟವಾಗಿ ತಿಳಿಯುತ್ತಿದ್ದೆ.

ಕುಂಭಮೇಳದ ಇತಿಹಾಸವನ್ನು ನೋಡುವುದಾದರೆ, ಕುಂಭಮೇಳವು ಸುಮಾರು 2,000 ವರ್ಷಗಳ ಹಿಂದೆಯೇ ಆರಂಭ ಆಗಿದ್ದು ಎಂದು ಹೇಳುತ್ತಾರೆ. ಕುಂಭಮೇಳವು ನಾಲ್ಕು ಪ್ರದೇಶಗಳಾದ ಹರಿದ್ವಾರ, ಅಲಹಾಬಾದ್/ಪ್ರಯಾಗ್, ನಾಸಿಕ್ ಮತ್ತು ಉಜ್ಜಯಿನಿಯಲ್ಲಿ ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ನಡೆಯುತ್ತದೆ. ಆದರೆ ನಿಯತಕಾಲಿಕವಾಗಿ ಪ್ರತಿ ಮೇಳವು ಚಕ್ರದ ಕ್ರಮದಲ್ಲಿ ವಿಭಿನ್ನ ಸ್ಥಳಗಳಲಿ ನಡೆಯುತ್ತದೆ. ತಾವು ಮಾಡಿರುವ ಪಾಪಗಳನ್ನು ತೊಡೆದುಹಾಕಲು ಸ್ನಾನ ಮಾಡಲು ಪವಿತ್ರ ನದಿಗಳಿಗೆ ಭಕ್ತಾದಿಗಳು ಬರುತ್ತಾರೆ ಎಂಬ ನಂಬಿಕೆ ಇದೆ. ಅದರಲ್ಲೂ ಮಹಾಕುಂಭಮೇಳ ಮತ್ತು ಅರ್ಧ ಕುಂಭಮೇಳ ಅತ್ಯಂತ ವಿಶೇಷವಾದವು.

ಎಷ್ಟೋ ವರ್ಷಗಳಿಂದ ಸ್ನಾನ ಮಾಡದೆ, ಮೈತುಂಬ ಬೂದಿಯನ್ನು ಬಳಿದುಕೊಂಡು, ಉದ್ದನೆಯ ಜಡೆಯನ್ನು ಬಿಟ್ಟುಕೊಂಡು, ಮೈಮೇಲೆ ಸ್ವಲ್ಪವೂ ಬಟ್ಟೆ ತೊಡದೆ ಕುಂಭಮೇಳಕ್ಕೆ ಬರುವ ಸಾಧುಗಳೇ ಇಲ್ಲಿನ ವಿಶೇಷ. ಅವರು ಕುಂಭಮೇಳ ಹೊರತುಪಡಿಸಿ ಬೇರೆ ಕಡೆ ಕಾಣಸಿಗುವುದು ಕಡಿಮೆ. ಅದರಲ್ಲೂ ಸಹ ನಾಗಾಸಾಧು, ಕಲ್ಪವಾಸಿ ಸಾಧುಗಳು, ಊರ್ಧ್ವವಾಹರುಗಳು ಹೀಗೆ ಹಲವಾರು ರೀತಿಯ ಸಾಧುಗಳು ಬರುತ್ತಾರೆ.

2025 ಜನವರಿ ಅಂದರೆ, ಈ ಸಲ ನಡೆಯುತ್ತಿರುವ ಕುಂಭಮೇಳದ ಸಂದರ್ಭದಲ್ಲಿ ʼಮೌನಿ ಅಮಾವಾಸ್ಯೆʼ ಬಂದಿತು. ಈ ʼಮೌನಿ ಅಮಾವಾಸ್ಯೆʼಯ ದಿನ ಕೋಟ್ಯಂತರ ಜನರು ಸೇರುತ್ತಾರೆ ಎಂದು ಗೊತ್ತಿತ್ತು. ಆ ದಿನ ಬಾಕಿ ದಿನಗಳಿಗಿಂತ ಹೆಚ್ಚಿನ ಎಚ್ಚರ ವಹಿಸಬೇಕು. ಮುಖ್ಯವಾಗಿ ಭದ್ರತೆಯ ವಿಷಯದಲ್ಲಿ ಇನ್ನಷ್ಟು ಜವಾಬ್ದಾರಿಗಳ ನಡೆಯನ್ನು ತೆಗೆದುಕೊಳ್ಳಬೇಕು ಎಂಬುದು ಸಾಮಾನ್ಯ ಸಂಗತಿ. ಆದರೆ ಆಡಳಿತ ನಡೆಸುವ ಸರ್ಕಾರವು, ತನ್ನೆಲ್ಲ ಗಮನವನ್ನು ಮೇಳಕ್ಕೆ ಬರುವ ಗಣ್ಯರು, ಅತೀಗಣ್ಯರ ಕಡೆಗೆ ಇಟ್ಟಿದ್ದು ಮತ್ತು ಕುಂಭಮೇಳವನ್ನು ರಾಜಕೀಯವಾಗಿ ಬಳಸಿಕೊಂಡಿದ್ದೆ, ಇಷ್ಟು ಜನರ ಸಾವು-ನೋವಿಗೆ ಕಾರಣವಾಗಿದೆ ಎಂಬುದು ಸ್ಪಷ್ಟವಾಗಿದೆ.

ಅಲ್ಲಿ ಸತ್ತವರೂ ನಮ್ಮವರೇ ಅಲ್ಲವೇ?. ಇದೆಲ್ಲದರ ಹೊಣೆ ಯಾರದ್ದು ಎಂದು ನೀವೇ ತೀರ್ಮಾನಿಸಿ.

ಈ ವರ್ಷದ ಕುಂಭಮೇಳವನ್ನು ರಾಜಕೀಯವಾಗಿ ಬಳಸಿಕೊಳ್ಳಲು ಉತ್ತರ ಪ್ರದೇಶ ಸರ್ಕಾರ ಮತ್ತು ಕೇಂದ್ರ ಬಿಜೆಪಿ ಸರ್ಕಾರ ತೀರ್ಮಾನ ಮಾಡಿದಂತೆ ಕಾಣುತ್ತದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ರಿಂದ ಹಿಡಿದು ಹಲವು ನಾಯಕರು ತ್ರಿವೇಣಿ ಸಂಗಮದಲ್ಲಿ ಮಿಂದೇಳುತ್ತಿದ್ದಾರೆ. ವಿರೋಧ ಪಕ್ಷಗಳು ಸಹ ಈ ವಿಚಾರವಾಗಿ ಟೀಕೆಗಳನ್ನು ಮಾಡುತ್ತಿವೆ. ಈ ರೀತಿಯ ಮೇಳ, ಹಬ್ಬ, ಜಾತ್ರೆಗಳಲ್ಲಿ ಟೀಕೆಗಳು ಮತ್ತು ಪ್ರಚಾರಗಳಿಗಿಂತ ಜನರ ಪ್ರಾಣ ಮುಖ್ಯವಾಗಿರುತ್ತದೆ.

ಈ ಕಾಲ್ತುಳಿತದ ಘಟನೆಗೆ ಸಂಬಂಧ ಪಟ್ಟಂತೆ “ಕುಂಭಮೇಳದಲ್ಲಿ ಭಕ್ತರು ಸತ್ತಿದ್ದು ಸರ್ಕಾರದ ನಿರ್ಲಕ್ಷ್ಯದಿಂದಲ್ಲ, ಅದು ದೇವರ ಇಚ್ಛೆಯಾಗಿತ್ತು. ನಮ್ಮ ದೇವರುಗಳೇ ತನ್ನ ಭಕ್ತರನ್ನು ತನ್ನ ಬಳಿಗೆ ಕರೆಸಿಕೊಂಡಿದ್ದಾನೆ” ಅಂತ ವಿಶ್ವ ಹಿಂದು ಪರಿಷತ್ತಿನ ಅಧ್ಯಕ್ಷ ಅಲೋಕ ಕುಮಾರ್ ಹೇಳಿದ್ರು. ಇವರಿಗೆ ನಾವು ಒಂದು ಪ್ರಶ್ನೆ ಕೇಳಬೇಕು. ಈ ಘಟನೆಯಲ್ಲಿ ನಿಮ್ಮ ಮನೆಯವರು ಯಾರಾದರೂ ಇದ್ದಿದ್ರೆ ಇದೆ ಮಾತನ್ನು ಹೇಳ್ತಿದ್ರಾ ಮಿಸ್ಟರ್ ಅಲೋಕ್ ಕುಮಾರ್ ಅವರೇ? ಅಂತ. ಈ ರೀತಿಯ ಮಾತನ್ನು ಹೇಳಿದ್ದು ಯಾರೋ ಸಾಮಾನ್ಯ ವ್ಯಕ್ತಿಗಳಲ್ಲ ಅನ್ನುವುದನ್ನು ನಾವು ಇಲ್ಲಿ ಗಮನಿಸಬೇಕು.

ಈ ರೀತಿಯ ಕಾಲ್ತುಳಿದ ಘಟನೆಗಳು ಹಲವು ಸಲ ನಡೆದಿವೆ. ಅದರಲ್ಲಿ ಕೆಲವೊಂದು ಪ್ರಮುಖ ಘಟನೆಗಳೆಂದರೆ,

ಸೆಪ್ಟೆಂಬರ್ 2008 ರಲ್ಲಿ ರಾಜಸ್ಥಾನದ ಚಾಮುಂಡಾ ದೇವಿ ದೇವಸ್ಥಾನದಲ್ಲಿ ನವರಾತ್ರಿ ಆಚರಣೆ ವೇಳೆ ಕಾಲ್ತುಳಿತ ಉಂಟಾಗಿ 250 ಮಂದಿ ಮೃತಪಟ್ಟಿದ್ದಾರೆ.

ಜನವರಿ 2022 ರಲ್ಲಿ ಜಮ್ಮು-ಕಾಶ್ಮೀರದ ವೈಷ್ಣೋದೇವಿ ದೇಗುಲ ಪ್ರವೇಶದ ಸಂದರ್ಭದಲ್ಲಿ ಕಾಲ್ತುಳಿತ ಉಂಟಾಗಿ 12 ಜನರು ಸಾವನ್ನಪ್ಪಿದ್ದರು.

ಜುಲೈ 2024 ರಲ್ಲಿ ಉತ್ತರ ಪ್ರದೇಶದ ಹಾಥರಸ್‌ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂತರೊಬ್ಬರ ಪಾದದ ಧೂಳಿಗಾಗಿ ಒಂದೇ ಸಲ ಜನರು ನುಗ್ಗಿದ್ದರಿಂದ ಕಾಲ್ತುಳಿತ ಸಂಭವಿಸಿ ಸುಮಾರು 121 ಜನರು ಮೃತಪಟ್ಟಿದ್ದರು.

ಜನವರಿ 2025 ರ ಅಂದರೆ, ಆಂಧ್ರಪ್ರದೇಶದ ತಿರುಪತಿಯ ವೆಂಕಟೇಶ್ವರ ದೇವಸ್ಥಾನದಲ್ಲಿ ವೈಕುಂಠ ಏಕಾದಶಿಯ ಪ್ರಯುಕ್ತ ವಿತರಿಸಲಾಗುತ್ತಿದ್ದ ಉಚಿತ ಪಾಸ್ ಪಡೆಯುವ ವೇಳೆ ಕಾಲ್ತುಳಿತಕ್ಕೆ ಒಳಪಟ್ಟು 6 ಮಂದಿ ಸಾವನ್ನಪ್ಪಿದ್ದಾರೆ ಹಾಗೂ 35ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿದ್ದವು.

ಈಗ ಪ್ರಯಾಗ್‌ರಾಜ್‌ನಲ್ಲಿನ ಕುಂಭಮೇಳದ ಘಟನೆ. ಈ ರೀತಿಯ ಘಟನೆಗಳು ಬಹುತೇಕ ನಡೆದದ್ದು ಧಾರ್ಮಿಕ ಕಾರ್ಯಕ್ರಮಗಳಲ್ಲಿಯೇ ಎಂಬುದನ್ನು ನಾವು ಗಮನಿಸಬೇಕು. ಇವುಗಳನ್ನು ರಾಜಕೀವಾಗಿ ಬಳಸಿಕೊಳ್ಳುವ ಮೊದಲು ಅಲ್ಲಿ ಸತ್ತವರು ನಮ್ಮಂತೆಯೇ ಮನುಷ್ಯರು ಎಂಬ ಅರಿವನ್ನು ಎಲ್ಲರೂ ಹೊಂದಿರಬೇಕು. ಕುಂಭಮೇಳದಲ್ಲಿ ಭಕ್ತಿಯ ಹೆಸರಿನಲ್ಲಿ ತ್ರಿವೇಣಿ ಸಂಗಮದಲ್ಲಿ ಮಿಂದೇಳುವವರಿಗೆ, ನಿಮಗೆ ನಿಮ್ಮೂರಿನ ನೀರು ಶ್ರೇಷ್ಠ ಎನಿಸಿದರೆ ಮಾತ್ರ ಗಂಗಾ, ಯಮುನಾ ಮತ್ತು ಸರಸ್ವತಿಯೂ ಶ್ರೇಷ್ಠವಾಗುತ್ತಾರೆ ಎಂಬ ಅರಿವು ಬೇಕಾಗುತ್ತದೆ. ಕಾಲ್ತುಳಿದಿಂದ ಸಂಭವಿಸಿದ ಘಟನೆಯಿಂದ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರ, ಪ್ರಯಾಗ್‌ ರಾಜ್‌ನ ಜಿಲ್ಲಾಡಳಿತ ಹಾಗೂ ಕೇಂದ್ರ ಸರ್ಕಾರವೂ ಸಹ ಇದರ ಪಾಪದಿಂದ ತಪ್ಪಿಸಿಕೊಳ್ಳಲು ಆಗದು.

ಮನೋಜ್ ಆರ್ ಕಂಬಳಿ
ಯುವ ಪತ್ರಕರ್ತ

More articles

Latest article