ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಮೈಸೂರು ನಗರದ ವಿವಿಧ ಭಾಗಗಳಲ್ಲಿ ಸಂಚಾರ ನಡೆಸಿದರು. ನಂತರ ಅಗ್ರಹಾರದ ಪ್ರಸಿದ್ಧ ಮೈಲಾರಿ ಹೋಟೆಲ್ ನಲ್ಲಿ ಬೆಣ್ಣೆ ಮಸಾಲೆ ದೋಸೆಯನ್ನು ಸವಿದರು. ಮುಂಜಾನೆ ಬೆಂಗಾವಲು ಪಡೆಯನ್ನು ಬಿಟ್ಟು ಖಾಸಗಿ ವಾಹನದಲ್ಲಿ ಹೊರಗೆ ತೆರಳಿ ಅಚ್ಚರಿ ಮೂಡಿಸಿದ ಅವರು ಕೆಲವು ಸಮಯದ ಬಳಿಕ ಟಿ.ಕೆ. ಬಡಾವಣೆಯಲ್ಲಿನ ತಮ್ಮ ನಿವಾಸಕ್ಕೆ ಮರಳಿದರು. ನಂತರ ಮನೆಯ ಆವರಣದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ತಮ್ಮ ಆತ್ಮೀಯ ಸ್ನೇಹಿತ ಶ್ರೀನಿವಾಸನ್ ನಿವಾಸಕ್ಕೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದರು.
ಅಗ್ರಹಾರದ ಮೈಲಾರಿ ದೋಸೆ ಹೋಟೆಲ್ ಗೆ ಬಂದ ಸಿದ್ದರಾಮಯ್ಯರನ್ನು ಅಭಿಮಾನಿಗಳು ಮುತ್ತಿಕೊಂಡರು. ಅಲ್ಲಿ ಅವರು ಪುತ್ರ, ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಹಾಗೂ ಶಾಸಕ ಎ.ಆರ್. ಕೃಷ್ಣಮೂರ್ತಿ, ವಿಧಾನ ಪರಿಷತ್ ಸದಸ್ಯ ಡಿ. ತಿಮ್ಮಯ್ಯ, ಸಂದೇಶ್ ನಾಗರಾಜು ಜೊತೆಗೂಡಿ ದೋಸೆ ತಿಂದರು.