ಜಾತಿ ದೌರ್ಜನ್ಯ ಪ್ರಕರಣಗಳ ಶಿಕ್ಷೆಯ ಪ್ರಮಾಣ ಹೆಚ್ಚಿಸಲು ಸಿಎಂ ಸಿದ್ದರಾಮಯ್ಯ ಸೂಚನೆ

Most read

ಬೆಂಗಳೂರು: ಜಾತಿ ದೌರ್ಜನ್ಯ ಪ್ರಕರಣಗಳ ಶಿಕ್ಷೆಯ ಪ್ರಮಾಣ ಶೇ. 10 ಕ್ಕೂ ಮೀರುವಂತೆ ಸೂಚನೆ ನೀಡಿರುವುದಾಗಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಅನುಸಸೂಚಿತ ಜಾತಿಗಳ ಮತ್ತು ಅನುಸೂಚಿತ ಬುಡಕಟ್ಟುಗಳ  ರಾಜ್ಯಮಟ್ಟದ ಜಾಗೃತ ಮತ್ತು ಉಸ್ತುವಾರಿ ಮೇಲ್ವಿಚಾರಣಾ ಸಮಿತಿ ಸಭೆ ನಡೆಸಲಾಗಿದೆ.  ಜಾತಿ ದೌರ್ಜನ್ಯ ಪ್ರಕರಣಗಳ ಶಿಕ್ಷೆಯ ಪ್ರಮಾಣ 2020ರಲ್ಲಿ ಶೇ. 10 ರಷ್ಟಿದ್ದು , ಪ್ರಸ್ತುತ ಶೇ. 7ಕ್ಕೆ ಇಳಿದಿದೆ. ಶಿಕ್ಷೆಯ ಪ್ರಮಾಣವನ್ನು ಶೇ. 10 ಕ್ಕೂ ಹೆಚ್ಚಿಸುವಂತೆ ಸೂಚಿಸಲಾಗಿದ್ದು, ಈ ಬಗ್ಗೆ ಸರ್ಕಾರಿ ಪ್ರಾಸಿಕ್ಯೂಟರ್ ಗಳು ಹಾಗೂ ಪೊಲೀಸ್ ಇಲಾಖೆಯವರು ಪರಿಶೀಲನಾ ಸಭೆ ನಡೆಸಬೇಕು. ಜಾತಿ ದೌರ್ಜನ್ಯ ಪ್ರಕರಣಗಳ ಶಿಕ್ಷೆಯ ಪ್ರಮಾಣ ಹೆಚ್ಚಿಸುವ ಬಗ್ಗೆ ಜಿಲ್ಲಾಧಿಕಾರಿಗಳು ಮೂರು ತಿಂಗಳಿಗೊಮ್ಮೆ ತಪ್ಪದೇ ಪ್ರಗತಿ ಪರಿಶೀಲನಾ ಸಭೆ ನಡೆಸಲು, ಈ ಬಗ್ಗೆ ವಿಳಂಬ ನೀತಿ ಅನುಸರಿಸುವ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಲಾಗಿದೆ ಎಂದರು.

ಬ್ಯಾಕ್ ಲಾಗ್ ಹಾಗೂ ಬಡ್ತಿ ವಿಚಾರದಲ್ಲಿ ಅನ್ಯಾಯವಾಗುತ್ತಿರುವ ಬಗ್ಗೆ ಸಭೆಯಲ್ಲಿ ಸಮಿತಿ ಸದಸ್ಯರು ಚರ್ಚಿಸಿದ್ದು,  ಬ್ಯಾಕ್ ಲಾಗ್ ಹಾಗೂ ಇಲಾಖಾವಾರು ಮುಂಬಡ್ತಿಯಲ್ಲಿ ಆಗಿರುವ ಅನ್ಯಾಯಗಳ ಬಗ್ಗೆ ಪರಿಶೀಲಿಸಲು ಪರಿಶೀಲನಾ ಸಭೆ ನಡೆಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಲಾಗಿದೆ ಎಂದರು.

ಇ. ಡಿ ನೋಟಿಸ್ ಜಾರಿ ಮಾಡಿದ್ದು, ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ತನಿಖೆ ನಡೆಯುತ್ತಿದ್ದು, ಸಿಬಿಐ ಗೆ ಪ್ರಕರಣವನ್ನು ವಹಿಸುವ ಬಗ್ಗೆ ಚರ್ಚೆ ನಡೆಯುತ್ತಿದ್ದು ವಾದ ನಡೆಯುವ ಹಂತದಲ್ಲಿದೆ. ಈ ಹಂತದಲ್ಲಿ  ಆತುರ ಮಾಡುವುದು ಸರಿಯಲ್ಲ ಎಂದು  ನ್ಯಾಯಮೂರ್ತಿಗಳು ಹೇಳಿದ್ದಾರೆ. ಇ.ಡಿ ನೋಟೀಸು ರಾಜಕೀಯ ಪ್ರೇರಿತವೇ  ಎಂಬ ಪ್ರಶ್ನೆಗೆ  ಉತ್ತರಿಸಿದ ಮುಖ್ಯಮಂತ್ರಿಗಳು, ಮುಡಾ ಪ್ರಕರಣವೇ ರಾಜಕೀಯ ಪ್ರೇರಿತ. ಪ್ರಕರಣವನ್ನು  ಸಿಬಿಐ ಗೆ ವಹಿಸಬಹುದೆಂಬ ಆತಂಕ ನನಗಿಲ್ಲ. ನಮಗೆ ನ್ಯಾಯ ಸಿಗುತ್ತದೆ ಎಂಬ ಭರವಸೆ  ನಮಗಿದೆ ಎಂದರು. ಮೈಕ್ರೋ ಫೈನಾನ್ಸ್ ಹಾವಳಿ ತಡೆಗಟ್ಟಲು ಸುಗ್ರೀವಾಜ್ಞೆ  ಹೊರಡಿಸುವ ಬಗ್ಗೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜು ಖರ್ಗೆಯವರು ಕುಂಭ ಮೇಳದಲ್ಲಿ ಮಿಂದೆದ್ದರೆ  ಬಡತನ ಹೋಗುವುದಿಲ್ಲ ಎಂದು ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು, ಗಂಗೆಯಲ್ಲಿ ಸ್ನಾನ ಮಾಡಿದರೆ ಪಾಪ ಪರಿಹಾರವಾಗುತ್ತದೆ ಎಂಬ ನಂಬಿಕೆ ಇದೆ. ನಾವು ಬಸವಣ್ಣನವರ ಅನುಯಾಯಿಗಳು, ‘ಅಯ್ಯಾ ಎಂದರೆ ಸ್ವರ್ಗ, ಎಲವೋ ಎಂದರೆ ನರಕ’ ಎಂಬ ಬಸವಣ್ಣನವರ ಮಾತಿನಲ್ಲಿ ನಮಗೆ ನಂಬಿಕೆ ಇದೆ ಎಂದರು.

More articles

Latest article