ಬೆಂಗಳೂರು: ಹೊರವಲಯದ ಚಿಕ್ಕಜಾಲ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಗಂಟೆಗಾನಹಳ್ಳಿಯ ರಸ್ತೆ ಬದಿಯಲ್ಲಿ ನಿಲುಗಡೆ ಮಾಡಿದ್ದ ಲಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟಿದ್ದಾರೆ. ಮೃತರನ್ನು 20 ವರ್ಷದ ನೀರಜ್‌ಕುಮಾರ್ ಎಂದು ಗುರುತಿಸಲಾಗಿದೆ.
ಉತ್ತರ ಪ್ರದೇಶ ಮೂಲದ ನೀರಜ್ ಕುಮಾರ್ ಹಾರೋಹಳ್ಳಿಯಲ್ಲಿ ನೆಲಸಿದ್ದರು. ಗಂಟೆಗಾನಹಳ್ಳಿ ರಸ್ತೆಯ ಸಾಯಿಗ್ರೀನ್ ಪಾರ್ಕ್ ಲೇಔಟ್‌ನಲ್ಲಿ ವಿದ್ಯುತ್ ಕಂಬ ಅಳವಡಿಸಲು ಲಾರಿಯನ್ನು ನಿಲುಗಡೆ ಮಾಡಲಾಗಿತ್ತು. ಲಾರಿಯ ಪಾರ್ಕಿಂಗ್ ಲೈಟ್ ಹಾಕಿರಲಿಲ್ಲ. ರಾತ್ರಿ 11.30ರ ಸುಮಾರಿಗೆ ಅದೇ ಮಾರ್ಗದಲ್ಲಿ ನೀರಜ್‌ಕುಮಾರ್ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದರು. ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ಕೆಳಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಅದೇ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದ ಇತರರು ನೀರಜ್ ಅವರನ್ನು ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದರು. ಅವರು ಬೆಳಿಗ್ಗೆ ಮೃತಪಟ್ಟಿದ್ದಾರೆ ಎಂದು ಸಂಚಾರ ಪೊಲೀಸರು ಹೇಳಿದ್ದಾರೆ. ಚಿಕ್ಕಜಾಲ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.