ಬೆಂಗಳೂರು: ರಾಜ್ಯದಲ್ಲಿ ಯುವ ಸಮೂಹಕ್ಕೆ ಕೌಶಲ್ಯ ತರಬೇತಿ ನೀಡುವ ಮೂಲಕ ಉದ್ಯೋಗ ಯೋಗ್ಯರನ್ನಾಗಿ ಮಾಡಲು ನಮ್ಮ ಸರ್ಕಾರ ಬದ್ಧವಾಗಿದೆ. ಸ್ಥಳೀಯ ಕೌಶಲ್ಯ, ಜಾಗತಿಕವಾಗಿ ಕೆಲಸ ಮಾಡಲು ನಮ್ಮ ಯುವಕರನ್ನು ಸಜ್ಜು ಮಾಡುವುದೇ ನಮ್ಮ ಮುಖ್ಯ ಗುರಿ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.
ಕೌಶಲ್ಯಾಭಿವೃದ್ಧಿ ನಿಗಮದಲ್ಲಿ ವಿವಿಧ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಕೈಗಾರಿಕೋದ್ಯಮಿಗಳ ಜೊತೆ ನಡೆಸಿದ ಸಂವಾದದಲ್ಲಿ ಸಚಿವರು ಈ ವಿಷಯ ತಿಳಿಸಿದರು.
ನಮ್ಮ ಯುವಕರು, ಯುವತಿಯರು ಶಿಕ್ಷಣ ಪಡೆದಿರುತ್ತಾರೆ. ಅವರಿಗೆ ಪ್ರಾಯೋಗಿಕವಾಗಿ ತರಬೇತಿ ನೀಡುವ ಕುರಿತು ಕ್ರಮ ಕೈಗೊಳ್ಳುತ್ತಿದ್ದೇವೆ. ಇದರಿಂದ ಕೆಲಸಕ್ಕೆ ಅಗತ್ಯವಿರುವಂತಹ ಕೌಶಲ್ಯ ತರಬೇತಿ ನೀಡುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ಸಚಿವರು ತಿಳಿಸಿದರು. ಒಂದು ವೇಳೆ ಅಗತ್ಯವಿರುವಂತಹ ಯುವ ಸಮೂಹಕ್ಕೆ ಕೌಶಲ್ಯ ತರಬೇತಿಯನ್ನು ಉದ್ದಿಮೆಗಳು ನೀಡಿದರೆ ಇದಕ್ಕೆ ಅಗತ್ಯವಿರುವ ಅನುದಾನವನ್ನು ಸರ್ಕಾರವೇ ಭರಿಸುವ ಚಿಂತನೆ ಇದೆ. ಈ ನಿಟ್ಟಿನಲ್ಲಿ ಉದ್ದಿಮೆಗಳಿಂದ, ಉದ್ಯಮಿಗಳು ಅಗತ್ಯವಿದ್ದರೆ ತರಬೇತಿ ಪಡೆದವರಿಗೆ ಉದ್ಯೋಗ ನೀಡುವ ಬದ್ಧತೆ ತೋರಬೇಕು ಎಂದು ತಿಳಿಸಿದರು.
ಜಾಗತಿಕ ಮಟ್ಟದಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಪೂರಕವಾಗಿರುವಂತೆ ಕೌಶಲ್ಯ ತರಬೇತಿಯನ್ನು ನೀಡಬೇಕು. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಈಗಾಗಲೇ ಕಲಬುರಗಿ, ಕೊಪ್ಪಳದ ತಳಕಲ್ ಮತ್ತು ಮೈಸೂರಿನ ವರುಣಾದಲ್ಲಿ ಬಹುಕೌಶಲ್ಯ ತರಬೇತಿ ಕೇಂದ್ರಗಳನ್ನು ಆರಂಭಿಸಲು ಮುಂದಾಗಿದೆ. ಸ್ಕಿಲ್ ಲೋಕಲಿ, ವರ್ಕ್ ಗ್ಲೋಬಲಿ ಎಂಬುದು ನಮ್ಮ ಮೂಲಮಂತ್ರವಾಗಿದೆ ಎಂದು ಶರಣ್ ಪ್ರಕಾಶ್ ತಿಳಿಸಿದರು.
ಶಾಲಾ-ಕಾಲೇಜುಗಳಲ್ಲಿ ಶಿಕ್ಷಣ ಕಲಿಯುವುದು ಅಡಿಪಾಯವಾಗುತ್ತದೆ, ಆದರೆ ಜಾಗತಿಕಮಟ್ಟದಲ್ಲಿ ಉದ್ಯೋಗ ಪಡೆದು ಉನ್ನತಿಗೆ ಏರಬೇಕಾದರೆ ಹೆಚ್ಚಿನ ಕೌಶಲ್ಯ ಅಗತ್ಯವಿರುತ್ತದೆ. ಇದನ್ನು ನಮ್ಮ ಸರ್ಕಾರ ನೀಡುತ್ತದೆ. ಯುವ ನಿಧಿ ಮೂಲಕ ಆರ್ಥಿಕ ನೆರವು ಒದಗಿಸುತ್ತಿರುವುದು ಇದೇ ಕಾರಣಕ್ಕೆ. ಕೇವಲ ಹಣ ನೀಡಿ ಯುವಕರನ್ನು ಕೈಬಿಡುತ್ತಿಲ್ಲ. ಹೆಚ್ಚಿನ ಕೌಶಲ್ಯ ಕೂಡ ನೀಡಿ ಉದ್ಯೋಗ ಕೊಡಿಸುತ್ತೇವೆ ಎಂದು ಸಚಿವರು ತಿಳಿಸಿದರು.
ಇದೇ ವೇಳೆ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಕಾಂತಾ ನಾಯ್ಕ್ ಅವರ ಕಚೇರಿಯನ್ನು ಸಚಿವ ಶರಣ್ ಪ್ರಕಾಶ್ ಪಾಟೀಲ್ ಉದ್ಘಾಟಿಸಿ ಇಲಾಖೆ ವತಿಯಿಂದ ಹೊರತರಲಾಗಿರುವ “ನನ್ನ ವೃತ್ತಿ ನನ್ನ ಆಯ್ಕೆ” ಎಂಬ ಪುಸ್ತಕವನ್ನೂ ಬಿಡುಗಡೆ ಮಾಡಿದರು.
ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಮಾತನಾಡಿ, ದೇಶದಲ್ಲಿ ನಿರುದ್ಯೋಗ ಸಮಸ್ಯೆ ಇದೆ. ಆದರೆ ಕರ್ನಾಟಕದಲ್ಲಿ ನಮ್ಮ ಸರ್ಕಾರ ಹೆಚ್ಚಿನ ಉದ್ಯೋಗ ಅವಕಾಶ ಸೃಷ್ಟಿಸಲು ಮುಂದಾಗಿದೆ. ಯುವಕರಿಗೆ ಉದ್ಯೋಗ ಕೊಡಿಸುವುದೇ ನಮ್ಮ ಧ್ಯೇಯ ಎಂದು ತಿಳಿಸಿದರು.
ಈ ಸಮಾರಂಭದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಉಪಸಭಾಪತಿ ರುದ್ರಪ್ಪ ಲಮಾಣಿ, ಕರ್ನಾಟಕ ಸ್ಕಿಲ್ ಡೆವಲಪ್ಮೆಂಟ್ ಅಥಾರಿಟಿ ಅಧ್ಯಕ್ಷದ ರಮಣರೆಡ್ಡಿ, ಹಿರಿಯ ಅಧಿಕಾರಿಗಳಾದ ಏಕರೂಪ್ ಕೌರ್, ದಿನೇಶ್ ಕುಮಾರ್, ರಾಗಪ್ರಿಯಾ, ವಿಧಾನ ಪರಿಷತ್ ಮಾಜಿ ಸದಸ್ಯ ಪ್ರಕಾಶ್ ರಾಥೋಡ್ ಹಾಗೂ ಇತರರು ಉಪಸ್ಥಿತರಿದ್ದರು.