ಬೆಂಗಳೂರು: ಪೈಲ್ವಾನ್ ಚಿತ್ರದ ನಟನೆಗಾಗಿ ಘೋಷಿಸಲಾಗಿದ್ದ ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿಯನ್ನು ನಟ ಸುದೀಪ್ ವಿನಮ್ರವಾಗಿ ತಿರಸ್ಕರಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ಈ ವಿಷಯ ತಿಳಿಸಿದ್ದಾರೆ. ಈಗಾಗಲೇ ನಾನು ಪ್ರಶಸ್ತಿಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿದ್ದೇನೆ. ನನ್ನನ್ನು ಆಯ್ಕೆ ಮಾಡಿದ ತೀರ್ಪುಗಾರರಿಗೆ ಹೃತ್ಪೂರ್ವಕ ಧನ್ಯವಾದ ಎಂದು ಹೇಳಿದ್ದಾರೆ.
2019ನೇ ಸಾಲಿನ ರಾಜ್ಯ ಪ್ರಶಸ್ತಿ ಘೊಷಣೆಯಾಗಿದ್ದು, ಪೈಲ್ವಾನ್ ಸಿನಿಮಾ ನಟನೆಗೆ ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿಗೆ ಸುದೀಪ್ ಆಯ್ಕೆಯಾಗಿದ್ದರು. ಅತ್ಯುತ್ತಮ ನಟ ವಿಭಾಗದಲ್ಲಿ ರಾಜ್ಯ ಪ್ರಶಸ್ತಿಯನ್ನು ಪಡೆದಿರುವುದು ನಿಜಕ್ಕೂ ಒಂದು ಸೌಭಾಗ್ಯ. ಈ ಗೌರವಕ್ಕಾಗಿ ಗೌರವಾನ್ವಿತ ತೀರ್ಪುಗಾರರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಸುದೀಪ್ ಬರೆದು ಕೊಂಡಿದ್ದಾರೆ.
ನಾನು ಹಲವಾರು ವರ್ಷಗಳಿಂದ ಪ್ರಶಸ್ತಿಗಳನ್ನು ಪಡೆಯುವುದನ್ನು ನಿಲ್ಲಿಸಿದ್ದೇನೆ. ಈ ನಿರ್ಧಾರದ ಹಿಂದೆ ವಿವಿಧ ವೈಯಕ್ತಿಕ ಕಾರಣಗಳಿವೆ. ನಟನೆಯಲ್ಲಿ ಸಾಧನೆ ಮಾಡಿರುವ ಅನೇಕ ಅರ್ಹ ನಟರಿದ್ದಾರೆ. ನಾನು ಮಾಡಿರುವ ಸಾಧನೆಗಿಂತ ಹೆಚ್ಚಿನ ಸಾಧನೆ ಮಾಡಿದವರಿದ್ದಾರೆ. ಅವರಲ್ಲಿ ಒಬ್ಬರು ಈ ಪ್ರಶಸ್ತಿಯನ್ನು ಸ್ವೀಕರಿಸುವುದನ್ನು ನೋಡುವುದು ನನಗೆ ಸಂತೋಷ ನೀಡುತ್ತದೆ ಎಂದು ಸುದೀಪ್ ಹೇಳಿದ್ದಾರೆ.