ಹೈದರಾಬಾದ್: ನಿವೃತ್ತ ಸೈನಿಕನೊಬ್ಬ ತನ್ನ ಪತ್ನಿಯನ್ನು ಹತ್ಯೆ ಮಾಡಿ ಆಕೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಕುಕ್ಕರ್ನಲ್ಲಿ ಬೇಯಿಸಿದ ಹೃದಯ ವಿದ್ರಾವಕ ಘಟನೆ ಹೈದರಾಬಾದ್ನ ಹೊರವಲಯದಲ್ಲಿರುವ ರಂಗಾರೆಡ್ಡಿ ಜಿಲ್ಲೆಯ ಮೀರ್ಪೇಟ್ನಲ್ಲಿ ನಡೆದಿದೆ. ನಿವೃತ್ತ ಸೈನಿಕ ಗುರುಮೂರ್ತಿ ಎಂಬಾತ ತನ್ನ ಪತ್ನಿ ವೆಂಕಟ ಮಾಧವಿ ಕಾಣೆಯಾಗಿದ್ದಾರೆ ಎಂದು ಜನವರಿ 18ರಂದು ಮೀರಪೇಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದ. ತನಿಖಾಧಿಕಾರಿಗಳು ಆತನನ್ನು ವಿಚಾರಣೆಗೊಳಪಡಿಸಿದಾಗ ಈ ಆಘಾತಕಾರಿ ಬೆಳವಣಿಗೆ ಬಹಿರಂಗಗೊಂಡಿದೆ.
ಪತ್ನಿಯನ್ನು ಕೊಲೆ ಮಾಡಿ ಬಳಿಕ ಶವವನ್ನು ತುಂಡು ತುಂಡಾಗಿ ಕತ್ತರಿಸಿ ಕುಕ್ಕರ್ ಹಾಕಿ ಬೇಯಿಸಿದ್ದಾಗಿ ಆತ ಪೊಲೀಸರಿಗೆ ತಿಳಿಸಿದ್ದಾನೆ. ನಂತರ ಬೇಯಿಸಿದ ದೇಹದ ಭಾಗಗಳನ್ನು ಜಿಲ್ಲೆಲಗುಡಾದ ಕೆರೆಗೆ ಎಸೆದಿದ್ದೇನೆ ಎಂದೂ ತಿಳಿಸಿದ್ದಾನೆ. ಆತನ ಹೇಳಿಕೆಯನ್ನು ದಾಖಲಿಸಿಕೊಂಡಿರುವ ಪೊಲೀಸರು, ಸಾಕ್ಷ್ಯ ಸಂಗ್ರಹಿಸಲು ಮುಂದಾಗಿದ್ದಾರೆ. ಕೆರೆಯಲ್ಲಿ ದೇಹದ ಭಾಗಗಳಿಗಾಗಿ ಹುಡುಕಾಟ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗುರುಮೂರ್ತಿ ಸೇನೆಯಲ್ಲಿ ಸೇವೆ ಸಲ್ಲಿಸಿದ್ದು, ನಿವೃತ್ತರಾಗಿದ್ದರು. ನಿವೃತ್ತಿ ನಂತರ ಕಾಂಚನ್ ಬಾಗ್ನಲ್ಲಿರುವ ಡಿಆರ್ಡಿಒದಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಭದ್ರತಾ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸುಮಾರು 13 ವರ್ಷಗಳ ಹಿಂದೆ ಮಾಧವಿ ಅವರನ್ನು ವಿವಾಹವಾಗಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಪತ್ನಿಯನ್ನು ಕೊಂದ ಬಳಿಕ ಆರೋಪಿಯು ತನ್ನ ಮೇಲೆ ಅನುಮಾನ ಬರಬಾರದೆಂದು ತನ್ನ ಪೋಷಕರೊಂದಿಗೆ ತೆರಳಿ ಮೀರ್ಪೇಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಕೊಲೆಗೆ ಕಾರಣ ಏನು ಎನ್ನುವುದು ತಿಳಿದು ಬಂದಿಲ್ಲ. ಸದ್ಯ ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.