ರೌಡಿಯನ್ನು ಗುಂಡಿಟ್ಟುಕೊಂದು ಸುಟ್ಟು ಹಾಕಿದ್ದ ಮತ್ತೊಬ್ಬ ರೌಡಿ ಸೆರೆ

Most read



ಬೆಂಗಳೂರು: ನಕಲಿ ಚಿನ್ನಾಭರಣ ಅಡ ಇಟ್ಟಿದ್ದನ್ನು ಪ್ರಶ್ನಿಸಿದ್ದ ರೌಡಿಯೊಬ್ಬನನ್ನು ಗುಂಡು ಹಾರಿಸಿ ಕೊಲೆ ಮಾಡಿ ಮೃತದೇಹವನ್ನು ಸುಟ್ಟುಹಾಕಿದ್ದ ಆರೋಪದಡಿಯಲ್ಲಿ ಮತ್ತೊಬ್ಬ ರೌಡಿಯನ್ನು ಬೆಂಗಳೂರು ಹೊರವಲಯದ ಬಾಗಲೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ರೌಡಿ  ವರ್ಷದ ಬಾಗಲೂರು ನಿವಾಸಿ ಬ್ರಿಜೇಶ್ (36). ಗುಣಶೇಖರ್‌ (30) ಮೃತ ರೌಡಿ.

ಮೃತದೇಹವನ್ನು ಸಾಗಿಸಿ ಸುಟ್ಟು ಹಾಕಲು ನೆರವು ನೀಡಿದ್ದ ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು ಆತನ ಪತ್ತೆಗಾಗಿ ಹುಡುಕಾಟ ನಡೆದಿದೆ. ಜನವರಿ 10ರಂದು ಬಾಗಲೂರು ಠಾಣೆ ವ್ಯಾಪ್ತಿಯ ಅಪಾರ್ಟ್‌ಮೆಂಟ್‌ಗೆ ಗುಣಶೇಖರ್‌ ನನ್ನು  ಕರೆಯಿಸಿಕೊಂಡು ಬ್ರಿಜೇಶ್‌ ಗುಂಡು ಹಾರಿಸಿ ಕೊಲೆ ಮಾಡಿದ್ದ.

 ತನ್ನ ಪತಿ ಗುಣಶೇಖರ್‌ ನಾಪತ್ತೆ ಆಗಿದ್ದಾರೆ ಎಂದು ಆತನ ಪತ್ನಿ ಜೋಸ್ಪಿನ್‌ ದೂರು ನೀಡಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಗುಣಶೇಖರ್ ನನ್ನು ಕೊಲೆ ಮಾಡಿರುವ ಮಾಹಿತಿ ಸಿಕ್ಕಿತ್ತು. ನಂತರ ನಡೆದ  ತನಿಖೆಯಲ್ಲಿ ತಮಿಳುನಾಡಿನ ಪೆನ್ನಾಗರಂ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಗುಣಶೇಖರನನ್ನು ಸುಟ್ಟು ಹಾಕಿರುವ ಮಾಹಿತಿ ಲಭ್ಯವಾಗಿತ್ತು. ಈ ಸಂಬಂಧ ಪೆನ್ನಾಗರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಅಲ್ಲಿನ ಪೊಲೀಸರ ಜತೆ ಕಾನೂನು ಪ್ರಕ್ರಿಯೆ ನಡೆಸಿ ಮೃತದೇಹವನ್ನು ಗೂಣಶೇಖರ್‌ ಅವರ ಪತ್ನಿಗೆ ಹಸ್ತಾಂತರ ಮಾಡಲಾಗಿತ್ತು.

ಕೊಲೆಯಾದ ಗುಣಶೇಖರ್‌ ಹಾಗೂ ಆರೋಪಿ ಬ್ರಿಜೇಶ್‌ ಪರಸ್ಪರ ಪರಿಚಯಸ್ಥರಾಗಿದ್ದರು. ಬ್ರಿಜೇಶ್‌, ಭಾರತೀನಗರ ಠಾಣೆಯ ರೌಡಿಶೀಟರ್ ಆಗಿದ್ದರೆ ಗುಣಶೇಖರ್‌ ಬಾಗಲೂರು ಠಾಣೆಯ ರೌಡಿಶೀಟರ್ ಆಗಿದ್ದ. ಬ್ರಿಜೇಶ್‌, ಪಂಜಾಬ್‌ನಿಂದ ನಕಲಿ ಚಿನ್ನವನ್ನು ತಂದು ಗುಣಶೇಖರನ ಮೂಲಕ ಬೆಂಗಳೂರಿನ ವಿವಿಧ ಭಾಗಗಳಲ್ಲಿ ಮಾರಾಟ ಮಾಡುತ್ತಿದ್ದ. ಈ ರೀತಿ ತಂದ ನಕಲಿ ಚಿನ್ನವನ್ನು ಒಂದು ಬಾರಿ ಆರೋಪಿ ಬ್ರಿಜೇಶ್, ಗುಣಶೇಖರ್‌ ನ ಸಂಬಂಧಿಯೊಬ್ಬರ ಮೂಲಕ ಖಾಸಗಿ ಫೈನಾನ್ಸ್‌ ಕಂಪನಿಯಲ್ಲಿ ಅಡ ಇರಿಸಿ ಹಣ ಪಡೆದುಕೊಂಡಿದ್ದ. ಸ್ವಲ್ಪ ದಿನಗಳ ನಂತರ ಫೈನಾನ್ಸ್‌ ಕಂಪನಿ ತಪಾಸಣೆ ನಡೆಸಿದಾಗ ಇವರು ಇರಿಸಿದ್ದು ನಕಲಿ ಚಿನ್ನಾಭರಣ ಎನ್ನುವುದು ತಿಳಿದು ಬಂದಿತ್ತು. ಆಗ ಫೈನಾನ್ಸ್‌ ಕಂಪನಿ ಅಧಿಕಾರಿಗಳು ಸಾಲ ಪಡೆದಿರುವ ಅಸಲು ಮತ್ತು ಬಡ್ಡಿಯನ್ನು ಪಾವತಿಸಿ ಚಿನ್ನಾಭರಣ ಬಿಡಿಸಿಕೊಂಡು ಹೋಗಬೇಕು. ಒಂದು ವೇಳೆ  ಚಿನ್ನಾಭರಣ ಬಿಡಿಸಿಕೊಳ್ಳದಿದ್ದರೆ ಪೊಲೀಸರಿಗೆ ದೂರು  ನೀಡುವುದಾಗಿಯೂ ಗುಣಶೇಖರ್‌ ಗೆ ಎಚ್ಚರಿಸಿದ್ದರು ಎಂದು ಪೊಲೀಸರು
ತಿಳಿಸಿದ್ದಾರೆ.

ಗುಣಶೇಖರ್, ಬ್ರಿಜೇಶ್‌ಗೆ ಕರೆ ಮಾಡಿ ಕೂಡಲೇ ಚಿನ್ನಾಭರಣ ಬಿಡಿಸಿಕೊಳ್ಳಬೇಕು ಎಂದು ತಾಕೀತು ಮಾಡಿದ್ದ. ಈ ಮಧ್ಯೆ ಬ್ರಿಜೇಶ್‌ ನಡೆಸುತ್ತಿದ್ದ ನಕಲಿ ಚಿನ್ನಾಭರಣ ಮಾರಾಟ ದಂಧೆ  ಕುರಿತು ಹಲವು ಸ್ನೇಹಿತರ ಬಳಿ ಗುಣಶೇಖರ್‌ ಬಾಯಿಬಿಟ್ಟಿದ್ದ. ಇದರಿಂದ ಕೆರಳಿದ್ದ ಬ್ರಿಜೇಶ್‌, ಗುಣಶೇಖರ್ ನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ ಎನ್ನುವುದು ತನಿಖೆಯಿಂದ ತಿಳಿದು ಬಂದಿದೆ.

ಬ್ರಿಜೇಶ್‌ ಜ.10ರಂದು ಹಣ ಕೊಡುವುದಾಗಿ ಬಾಗಲೂರು ವ್ಯಾಪ್ತಿಯ ಅಪಾರ್ಟ್‌ಮೆಂಟ್‌ಗೆ ಗುಣಶೇಖರನನ್ನು ಕರೆಸಿಕೊಂಡಿದ್ದ. ಅಲ್ಲಿ ಗುಣಶೇಖರ್ ಮೇಲೆ ಬ್ರಿಜೇಶ್ ಎರಡು ಸುತ್ತು ಗುಂಡು ಹಾರಿಸಿ ಕೊಲೆ ಮಾಡಿದ್ದ. ನಂತರ ಮೃತದೇಹವನ್ನು ಸಾಗಿಸಲು ತನ್ನ ಸಹಚರನೊಬ್ಬನನ್ನು ಆರೋಪಿ ಕರೆಸಿಕೊಂಡಿದ್ದ. ಮೃತದೇಹವನ್ನು ಕಾರಿನಲ್ಲಿ ಸಾಗಿಸಿ ತಮಿಳುನಾಡಿನ ಪೆನ್ನಾಗರಂ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಪೆಟ್ರೋಲ್ ಸುರಿದು ಮೃತದೇಹವನ್ನು ಸುಟ್ಟು ಹಾಕಿದ್ದರು. ಈ ಮೃತದೇಹವನ್ನು ಕಂಡ ಸ್ಥಳೀಯರು ಪೊಲೀಸ್‌ ಠಾಣೆಗೆ ತಿಳಿಸಿದ್ದರು. ಈ ಮಾಹಿತಿ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ತಮಿಳುನಾಡು ಪೊಲೀಸರು ಕರ್ನಾಟಕ ಪೊಲೀಸರಿಗೂ ಮಾಹಿತಿ ನೀಡಿದ್ದರು. ಇದರಿಂದ ಪ್ರಕರಣ ಬೆಳಕಿಗೆ ಬಂದಿದೆ ಎಂದು ಮೂಲಗಳು ತಿಳಿಸಿವೆ. ಈ ಕೃತ್ಯದ ಎಸಗಿದ ಬಳಿಕ ಆರೋಪಿ ಪಂಜಾಬ್‌ ಗೆ ತೆರಳಿ ತಲೆಮರೆಸಿಕೊಂಡಿದ್ದ. ಖಚಿತ ಮಾಹಿತಿ ಲಭ್ಯವಾದ ನಂತರ ಪೊಲಿಸರು ಅಮೃತಸರಕ್ಕೆ ತೆರಳಿ ಕಾರ್ಯಾಚರಣೆ ನಡೆಸಿ ಬ್ರಿಜೇಶ್‌ನನ್ನು ಬಂಧಿಸಿ ನಗರಕ್ಕೆ ಕರೆತಂದಿದ್ದಾರೆ.

More articles

Latest article