ಬೆಂಗಳೂರು: ನಮ್ಮ ಮೆಟ್ರೊ ಹಸಿರು ಮಾರ್ಗದಲ್ಲಿ ಜಾಲಹಳ್ಳಿ ನಿಲ್ದಾಣದಲ್ಲಿ ಸೋಮವಾರ ಬಿಹಾರ ಮೂಲದ ವ್ಯಕ್ತಿಯೊಬ್ಬರು ಹಳಿಗೆ ಹಾರಿದ್ದು, ಅವರನ್ನು ಮೆಟ್ರೊ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಇದರಿಂದ 25 ನಿಮಿಷ ಮೆಟ್ರೊ ಸಂಚಾರಕ್ಕೆ ವ್ಯತ್ಯಯ ಉಂಟಾಯಿತು. ಇದರಿಂದ ಪ್ರಯಾಣಿಕರು ಪರದಾಡುವಂತಾಯಿತು.
ಅನಿಲ್ ಕುಮಾರ್ ಪಾಂಡೆ (49) ಹಳಿಗೆ ಹಾರಿದವರು. ಇಂದು ಬೆಳಿಗ್ಗೆ 10.25ಕ್ಕೆ ಮೆಟ್ರೊ ರೈಲು ಜಾಲಹಳ್ಳಿ ನಿಲ್ದಾಣಕ್ಕೆ ಬರುವ ಸಮಯಕ್ಕೆ ಸರಿಯಾಗಿ ಪಾಂಡೆ ಹಳಿ ಮೇಲೆ ಹಾರಿದ್ದರು. ಕೂಡಲೇ ಸಿಬ್ಬಂದಿ ಇಟಿಎಸ್ (ಎಮರ್ಜನ್ಸಿ ಟ್ರಿಪ್ ಸಿಸ್ಟಮ್) ಸ್ಥಗಿತಗೊಳಿಸಿ ಮೆಟ್ರೊ ಸಂಚಾರವನ್ನು ನಿಲ್ಲಿಸಿದ್ದರು. ಸಿಬ್ಬಂದಿಯು ಪಾಂಡೆ ಅವರನ್ನು ಮೇಲಕ್ಕೆ ಎತ್ತಿ ಆಸ್ಪತ್ರೆಗೆ ದಾಖಲಿಸಿದರು. ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾರೆ. ಈ ಘಟನೆಯಿಂದ 10.25ರಿಂದ ಮೆಟ್ರೊ 10.50ರ ವರೆಗೆ ಸಂಚಾರ ವ್ಯತ್ಯಯ ಆಯಿತು. ಹಳಿಗೆ ಹಾರಲು ಕಾರಣ ಏನು ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಬಿಎಂ ಆರ್ ಸಿ ಎಲ್ ಅಧಿಕಾರಿಗಳು ತಿಳಿಸಿದ್ದಾರೆ.