ಬೆಂಗಳೂರು: ಜನಸಾಮಾನ್ಯರ ಕವಿಯಾದ ವೇಮನರು ಸಾಮಾಜಿಕ ಪಿಡುಗುಗಳಾದ ಜಾತೀಯತೆ, ಅಂಧಶ್ರದ್ಧೆ, ಮೇಲು ಕೀಳುಗಳನ್ನು ತಮ್ಮ ಕಾವ್ಯದ ಮೂಲಕ ಧಿಕ್ಕರಿಸಿದ ಒಬ್ಬ ಅಪರೂಪದ ಸಮಾಜ ಸುಧಾರಕ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ಎಸ್.ತಂಗಡಗಿ ಅವರು ಅಭಿಪ್ರಾಯಪಟ್ಟರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಶ್ರೀ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಕನ್ನಡದ ಸರ್ವಜ್ಞ ಯಾರಿಗೆ ತಾನೇ ತಿಳಿದಿಲ್ಲ, ಅಂತೆಯೇ ತಮಿಳಿನ ತಿರುವಳ್ಳವರ್ ಅವರನ್ನು ಅರಿಯದವರು ಯಾರಿದ್ದಾರೆ? ಇವರಿಬ್ಬರಂತೆಯೇ ಜನಸಾಮಾನ್ಯರ ಕವಿ ಎನಿಸಿದವರು ತೆಲುಗಿನ ವೇಮನರು. ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಕೊಂಡವೀಡು ಗ್ರಾಮದಲ್ಲಿ ಜನಿಸಿದ ವೇಮನರು ಆ ಪ್ರಾಂತ್ಯದ ಆಳರಸರ ಸುಕುಮಾರ. ಅಹಮಿಕೆಯನ್ನು ತಲೆಗೇರಿಸಿಕೊಳ್ಳದೆ, ತನ್ನ ಎಲ್ಲ ಸುಖ ಸಂಪತ್ತನ್ನು ತ್ಯಜಿಸಿ ಸಮಾಜ ಸೇವೆಗೆ ಧಾವಿಸಿದ ಮಹಾನ್ ವ್ಯಕ್ತಿ ಎಂದು ಇತಿಹಾಸವನ್ನು ಮೆಲುಕು ಹಾಕಿದರು.
ಇಂತಹ ಜನಸಾಮಾನ್ಯರಂತೆ ಬಾಳಿದ ನಿಜವಾದ ಜನಪರ ಮತ್ತು ಶ್ರೇಷ್ಠ ವ್ಯಕ್ತಿಯ ಜಯಂತಿಯನ್ನು ನಾವು ಸರ್ಕಾರದ ವತಿಯಿಂದ ಆಚರಣೆ ಮಾಡುತ್ತಿರುವುದು ನಮ್ಮ ಹೆಮ್ಮೆ ಎಂದರು. ವೇಮನರು ತಮ್ಮ ಕಣ್ಣಿಗೆ ಕಂಡದ್ದನ್ನೆಲ್ಲಾ ಪದ್ಯಗಳನ್ನಾಗಿ ರಚಿಸಿ ಹಾಡುತ್ತಾ ಸಾಗಿ ಮಹಾ ದಾರ್ಶನಿಕರಾದರು. ಸಮಾಜದಲ್ಲಿನ ಅಂಕುಡೊಂಕುಗಳನ್ನು ಕಂಡು ಮರುಗುತ್ತಾ, ಅಲ್ಲಲ್ಲೇ ಮೊನಚು ಮಾತುಗಳಿಂದ ಅವುಗಳನ್ನು ತಿದ್ದುತ್ತಾ ತಮ್ಮ ಸಂದೇಶಗಳನ್ನು ಹೇಳುತ್ತಾ ನಿಂತಲ್ಲಿ ನಿಲ್ಲದೇ, ಪರ್ಯಾಟನೆ ಮಾಡುತ್ತಿದ್ದರು. ಇನ್ನು ತಮ್ಮ ಗುರುಗಳ ನೆನಪಿಗಾಗಿ ವಿಶ್ವದಾಭಿರಾಮ ಕೇಳು ವೇಮ ಎಂವ ಅಂಕಿತದಲ್ಲೇ ಪದ್ಯರಚನೆ ಮಾಡಿದರು ಮಹಾನ್ ಪುರುಷರು ಎಂದು ತಿಳಿಸಿದರು.
ಬ್ರಿಟಿಷ್ ಅಧಿಕಾರಿ ಸಿ.ಪಿ.ಬ್ರೌನ್ ಅವರು ಕನ್ನಡದ ಕಿಟೆಲ್ ತೆಲುಗಿನ ವೇಮನ ಪದ್ಯಗಳನ್ನು ಇಂಗ್ಲಿಷ್ ಗೆ ಭಾಷಾಂತರಿಸಿ, ವೇಮನರನ್ನು ಜಗತ್ತಿಗೆ ಪರಿಚಯಿಸಿದರು. ಇವರ ಅನುವಾದಗಳ ಮೂಲಕ ವೇಮನ ಪದ್ಯಗಳು ಜಗತ್ತಿನಾದ್ಯಂತ ಪ್ರಖ್ಯಾತವಾದವು ಎಂದರು.
ನನಗೆ ಚಿಕ್ಕವಯಸ್ಸಿನಿಂದ ರೆಡ್ಡಿ ಸಮುದಾಯದ ಜತೆ ಆತ್ಮೀಯವಾದ ಒಡನಾಟವಿದೆ. ನನ್ನ ಕ್ಷೇತ್ರದಲ್ಲಿ ಹೆಚ್ಚಿನ ಸ್ನೇಹಿತರು ರೆಡ್ಡಿ ಸಮುದಾಯದವರಿದ್ದಾರೆ. ರೆಡ್ಡಿ ಎಂದರೇ ಹೆಚ್ಚು ಉದಾರತೆ ಇರುವ ಸಮುದಾಯ. ಕಷ್ಟ ಎಂದು ಹೇಳಿಕೊಂಡು ಯಾರಾದರೂ ರೆಡ್ಡಿ ಸಮುದಾಯದ ಬಳಿ ಹೋದರೆ ಅವರನ್ನು ಹಾಗೆಯೇ ಕಳುಹಿಸುವುದಿಲ್ಲ ಎಂದು ರೆಡ್ಡಿ ಸಮುದಾಯದ ಉದಾರತೆಯ ಬಗ್ಗೆ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಮುದಾಯಕ್ಕೆ ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ಶಕ್ತಿ ಇದೆ ಎಂದರು.
ಮಹಾನ್ ಪುರುಷರ ಇತಿಹಾಸ ತಿಳಿಯಬೇಕಿದ್ದು, ಈ ಹಿನ್ನೆಲೆಯಲ್ಲಿ ಇಂತಹ ಜಯಂತಿ ಕಾರ್ಯಕ್ರಮವನ್ನು ಆಚರಣೆ ಮಾಡಲಾಗುತ್ತಿದೆ. ಜಯಂತಿ ಆಚರಣೆಯಿಂದ ಮಹಾನ್ ಪುರುಷರ ಇತಿಹಾಸವನ್ನು ಮೆಲುಕು ಹಾಕುವ ಕೆಲಸ ಆಗುತ್ತಿದೆ. ಈ ಮಹನೀಯರು ಯಾವುದೇ ಒಂದು ಸಮಾಜಕ್ಕೆ ಸೇರಿದವರಲ್ಲ. ಪ್ರತಿಯೊಂದು ಸಮುದಾಯಕ್ಕೆ ಸೇರಿದವರು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಶ್ರೀ ವೇಮನಾಂದ ಮಹಾಸ್ವಾಮೀಜಿ , ರಾಜ್ಯಸಭಾ ಮಾಜಿ ಸದಸ್ಯ ಕೆ.ಸಿ.ರಾಮಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಡಾ. ಧರಣಿ ದೇವಿ ಮಾಲಗತ್ತಿ, ಜಂಟಿ ನಿರ್ದೇಶಕ ಬಲವಂತರಾಯ ಪಾಟೀಲ್, ಸಮುದಾಯದ ಅಧ್ಯಕ್ಷ ಜಯರಾಮ ರೆಡ್ಡಿ, ಎನ್.ಶೇಖರ್ ರೆಡ್ಡಿ, ಕಂಚೀವರದಯ್ಯ ಹಾಗೂ ಇನ್ನಿತರರು ಉಪಸ್ಥಿತರಿದ್ದರು.