ಮಾಜಿ ಸಚಿವ ರಮೇಶ್‌ ಕುಮಾರ್‌ ಅರಣ್ಯ ಒತ್ತುವರಿ ಆರೋಪ; ಸಮೀಕ್ಷೆ ಪೂರ್ಣ; ಅರಣ್ಯ, ಕಂದಾಯ ಇಲಾಖೆ ನಡುವೆ ಭಿನ್ನಾಭಿಪ್ರಾಯ

Most read

ಕೋಲಾರ: ಮಾಜಿ ಸಚಿವ ಕೆ.ಆರ್‌.ರಮೇಶ್‌ ಕುಮಾರ್‌ ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಶ್ರೀನಿವಾಸಪುರ ತಾಲ್ಲೂಕಿನ ಹೊಸಹುಡ್ಯ ಗ್ರಾಮದ ಸರ್ವೆ ನಂಬರ್ 1 ಹಾಗೂ  2ರ ಜಮೀನಿನ ಜಂಟಿ ಸಮೀಕ್ಷೆ ಕಾರ್ಯ ಮುಕ್ತಾಯಗೊಂಡಿದೆ. ಪೊಲೀಸರ ಬಿಗಿ ಬಂದೋಬಸ್ತ್‌ ನಡುವೆ ಸಮೀಕ್ಷೆ ನಡೆಸಲಾಗಿದ್ದು, ದಾಖಲೆಗಳ ವಿಚಾರವಾಗಿ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ನಡುವೆ ಭಿನ್ನಾಭಿಪ್ರಾಯ ತಲೆದೋರಿದೆ.

ಕಳೆದ ಎರಡು ದಿನ ಜಿಲ್ಲಾಧಿಕಾರಿ, ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್‌) ಹಾಗೂ ಡಿಡಿಎಲ್‌ಆರ್‌ ಒಳಗೊಂಡ ತಂಡ ನಡೆಸಿದ ಜಂಟಿ ಸರ್ವೇ ಸಂಬಂಧ ವರದಿಯನ್ನು ಅಂತಿಮಗೊಳಿಸಿ ಮೂರು ನಾಲ್ಕು ದಿನಗಳಲ್ಲಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಸರ್ಕಾರವು ಜ.30ರೊಳಗೆ ಹೈಕೋರ್ಟ್‌ಗೆ ಈ ವರದಿ ಸಲ್ಲಿಸಬೇಕಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಸಿಎಫ್‌ ಸರೀನಾ ಸಿಕ್ಕಲಿಗಾರ್‌ ಈ ಎರಡು ಸರ್ವೆ ನಂಬರ್‌ಗಳಲ್ಲಿ ಒತ್ತುವರಿಯಾಗಿದೆ. ನಮ್ಮ ಇಲಾಖೆ ಪ್ರಕಾರ ಒತ್ತುವರಿ ಆಗಿದೆ. ಜಿಲ್ಲಾಧಿಕಾರಿ ಹಾಗೂ ಡಿಡಿಎಲ್‌ಆರ್‌ ನೀಡುವ ಮಾಹಿತಿ ತೃಪ್ತಿ ತರಲಿಲ್ಲವೆಂದರೆ ಜಂಟಿ ಸರ್ವೇ ವರದಿಗೆ ನಾನು ಸಹಿ ಮಾಡುವುದಿಲ್ಲ. ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವ ಮುನ್ನ ಜಂಟಿ ಸಹಿ ಮಾಡಬೇಕಿದೆ.  ಇಲ್ಲವಾದಲ್ಲಿ ಮತ್ತೊಮ್ಮೆ ಜಂಟಿ ಸರ್ವೆ ನಡೆಸಲು ಅಭ್ಯಂತರವೇನಿಲ್ಲ ಎಂದು ಹೇಳಿದ್ದಾರೆ. ಆದರೆ ಜಿಲ್ಲಾಧಿಕಾರಿ ಎಂ.ಆರ್‌.ರವಿ  ಅವರು ವಿವಾದಾಸ್ಪದ ಎನ್ನಲಾದ ಪ್ರದೇಶ ಇಂದಿನವರೆಗೂ ಸರ್ಕಾರಿ ಗೋಮಾಳ ಎಂದೇ ದಾಖಲೆಗಳಲ್ಲಿದೆ. ಒತ್ತುವರಿ ಆಗಿದೆಯೋ ಇಲ್ಲವೋ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಜಂಟಿ ಸರ್ವೇ ವರದಿಗೆ ಜಿಲ್ಲಾಧಿಕಾರಿ, ಡಿಸಿಎಫ್‌ ಹಾಗೂ ಡಿಡಿಎಲ್‌ಆರ್‌ ಮೂವರೂ ಸಹಿ ಹಾಕಿದರೆ ಮಾತ್ರ ವರದಿಗೆ ಮಾನ್ಯತೆ ಸಿಗುತ್ತದೆ. ಈ ಪ್ರದೇಶದಲ್ಲಿ ಮಾಜಿ ಸಚಿವ, ಮಾಜಿ ವಿಧಾನಸಭಾಧ್ಯಕ್ಷ  ಕೆ.ಆರ್‌.ರಮೇಶ್‌ ಕುಮಾರ್‌ ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಹೈಕೋರ್ಟ್‌ ಸೂಚನೆ ಮೇರೆಗೆ ಅವರ ಉಪಸ್ಥಿತಿಯಲ್ಲೇ ಜಂಟಿ ಸಮಿಕ್ಷೆ ನಡೆದಿದೆ. ಸರ್ವೇ ಕಾರ್ಯಕ್ಕೆ ರಮೇಶ್‌ ಕುಮಾರ್‌ ಅವರು ಸಹಕರಿಸಿದ್ದಾರೆ ಎಂದು ತಿಳಿದು ಬಂದಿದೆ.

ರಮೇಶ್‌ ಕುಮಾರ್‌  ಅವರು ನಾನು ಜಮೀನನ್ನು ಖರೀದಿ ಮಾಡಿದ್ದೇನೆಯೇ ಹೊರತು ಒತ್ತುವರಿ ಮಾಡಿಲ್ಲ. ಜಂಟಿ ಸರ್ವೇ ನಡೆಸುವಂತೆ ಬಹಳ ಹಿಂದೆಯೇ  ನಾನೇ ಕೋರಿದ್ದೆ. ಸರ್ಕಾರಿ ದಾಖಲೆಗಳಲ್ಲಿ ಗೋಮಾಳ ಎಂದು ನಮೂದಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ಅವರು ಅರಣ್ಯ ಇಲಾಖೆಯ ಸರ್ವೇ ವಿಧಾನಕ್ಕೆ (ಗಂಟರ್‌ ಚೈನ್‌ ಬಳಕೆ) ಆಕ್ಷೇಪ ವ್ಯಕ್ತಪಡಿಸಿದ್ದಾರೆ. 1937ರ ಸರ್ಕಾರಿ ನೋಟಿಫಿಕೇಷನ್‌ ಹಾಗೂ 1944ರ ಗೆಜೆಟ್‌ ಬಿಟ್ಟು ಅರಣ್ಯ ಇಲಾಖೆ ಬೇರೆ ಯಾವುದೇ ದಾಖಲೆ ಕೊಟ್ಟಿಲ್ಲ. ಫಾರೆಸ್ಟ್‌ ಸೆಟ್ಲ್‌ಮೆಂಟ್‌ ಮ್ಯಾಪ್‌ ದಾಖಲೆ ನೀಡಿಲ್ಲ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ. ಆದರೆ ಈ ಸಮಸ್ಯೆಗೆ ಭೂಪಟದ ಅಗತ್ಯ ಇಲ್ಲ. ಅಗತ್ಯ ಬಿದ್ದರೆ ಸೃಷ್ಟಿಸಿ ಕೊಡುತ್ತೇವೆ ಎಂದು ಡಿಸಿಎಫ್‌ ತಿಳಿಸಿದ್ದಾರೆ.

ಎರಡು ದಿನದ ಸರ್ವೇ ಕಾರ್ಯ ನಡೆಸುವಾಗ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್‌ ಬಿ.ನೇತೃತ್ವದಲ್ಲಿ ನೂರಾರು ಪೊಲೀಸರು ಭದ್ರತೆ ಒದಗಿಸಿದ್ದರು. ಡಿಡಿಎಲ್‌ಆರ್‌ ಸಂಜಯ್‌, ಉಪವಿಭಾಗಾಧಿಕಾರಿ ಡಾ.ಮೈತ್ರಿ, ಶ್ರೀನಿವಾಸಪುರ ತಹಶೀಲ್ದಾರ್‌ ಜಿ.ಎನ್‌.ಸುಧೀಂದ್ರ, ಮಹೇಶ್‌, ಕಂದಾಯ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಭಾಗವಹಿಸಿದ್ದರು.  

More articles

Latest article