ಸಾಗರ: ಸಾಗರದಲ್ಲಿ ಜ.18ರಂದು ನಡೆಯುತ್ತಿರುವ ಸಾಗರ ಪ್ರಾಂತ್ಯ ಅಡಕೆ ಬೆಳೆಗಾರರ ಸಂಘದ ಸಮಾವೇಶಕ್ಕೆ ಆಗಮಿಸುವುದಕ್ಕೂ ಮುನ್ನ 51 ದಿನಗಳಿಂದ ಉಪವಾಸ ಸತ್ಯಾಗ್ರಹ ಮಾಡುತ್ತಿರುವ ಜಗದೀಪ್ ಸಿಂಗ್ ದಲ್ಲೆವಾಲ ಅವರ ಜೀವ ಉಳಿಸಿ ರಾಜ್ಯಕ್ಕೆ ಬನ್ನಿ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಕರ್ನಾಟಕ ರಾಜ್ಯ ರೈತ ಸಂಘ ಆಗ್ರಹಪಡಿಸಿದೆ.
ಸಾಗರ ಪ್ರಾಂತ್ಯ ಅಡಕೆ ಬೆಳೆಗಾರರ ಸಂಘ ಹಮ್ಮಿಕೊಂಡಿರುವ ಸಮಾವೇಶದಲ್ಲಿ ಭಾಗವಹಿಸಲು ಸಚಿವ ಶಿವರಾಜ್ ಸಿಂಗ್ ಚೌಹಾಣ್ ಆಗಮಿಸುತ್ತಿದ್ದಾರೆ. ಮತ್ತೊಂದು ಕಡೆ ದೆಹಲಿಯ ಶಂಭು ಗಡಿಯಲ್ಲಿ ರೈತ ನಾಯಕ ಜಗದೀಪ್ ಸಿಂಗ್ ದಲ್ಲೆವಾಲ ಅವರು ಎಂ ಎಸ್ ಪಿ ಕಾಯ್ದೆ ಮತ್ತು ಸ್ವಾಮಿನಾಥನ್ ವರದಿಯನ್ನು ಜಾರಿಗೆ ತರುವಂತೆ ಕಳೆದ 51 ದಿನಗಳಿಂದ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ. ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟಿದೆ. ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ದಲ್ಲೆವಾಲ ಅವರನ್ನು ಭೇಟಿ ಮಾಡಿ ಉಪವಾಸ ಸತ್ಯಾಗ್ರಹ ನಿಲ್ಲಿಸುವಂತೆ ಮನವೊಲಿಸಿ ಬರಬೇಕು ಎಂದು ರೈತ ಸಂಘದ ಉಪಾಧ್ಯಕ್ಷ ಶಿವಾನಂದ ಕುಗ್ವೆ ಮತ್ತು ಪ್ರಧಾನ ಕಾರ್ಯದರ್ಶಿ ಎನ್.ಡಿ.ವಸಂತ್ ಕುಮಾರ್ ಆಗ್ರಹಪಡಿಸಿದ್ದಾರೆ.
ರೈತಪರ ಕಾಳಜಿಯ ಈ ಸಮಾವೇಶವನ್ನು ಕರ್ನಾಟಕ ರಾಜ್ಯ ರೈತ ಸಂಘ ಬೆಂಬಲಿಸಿದೆ ಎಂದೂ ಅವರು ತಿಳಿಸಿದ್ದಾರೆ.
ಎಂ ಎಸ್ ಪಿ ಕಾಯ್ದೆ ಮತ್ತು ಸ್ವಾಮಿನಾಥನ್ ವರದಿಯನ್ನು ಜಾರಿಗೆ ತರುವಂತೆ ದೆಹಲಿಯ ಶಂಭು ಗಡಿಯಲ್ಲಿ ರೈತ ನಾಯಕ ಜಗದೀಪ್ ಸಿಂಗ್ ದಲ್ಲೆವಾಲ ಅವರು ಕಳೆದ 51 ದಿನಗಳಿಂದ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದು, ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟಿದೆ. ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ಬೇಡಿಕೆಗಳಿಗೆ ಸ್ಪಂದಿಸದೆ ಅವರ ಹೋರಾಟವನ್ನು ಅವಮಾನಿಸಿದ್ದಾರೆ ಮತ್ತು ರೈತ ಸಮುದಾಯವನ್ನು ಕಡೆಗಣಿಸಿದ್ದಾರೆ. ಇದು ಕೇಂದ್ರ ಸರ್ಕಾರದ ರೈತ ವಿರೋಧಿ, ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಆಕ್ರೋಶ ವ್ಯಕ್ತಪಡಿಸಿದೆ.
ಆದ್ದರಿಂದ ಅಡಕೆ ಬೆಳೆಗಾರರ ಸಮಾವೇಶಕ್ಕೆ ಬರುವುದಕ್ಕೂ ಮೊದಲು ಉಪವಾಸ ನಡೆಸುತ್ತಿರುವ ರೈತ ನಾಯಕ ಜಗದೀಪ್ ಸಿಂಗ್ ದಲ್ಲೆವಾಲರ ಜೀವ ಉಳಿಸಿ ಸಾಗರದಲ್ಲಿ ನಡೆಯುವ ಅಡಕೆ ಬೆಳೆಗಾರರ ಸಮಾವೇಶಕ್ಕೆ ಆಗಮಿಸಬೇಕು ಎಂದು ಶಿವಾನಂದ ಕುಗ್ವೆ ಮತ್ತು ವಸಂತ್ ಕುಮಾರ್ ಆಗ್ರಹಪಡಿಸಿದ್ದಾರೆ. ಒಂದು ವೇಳೆ ಜಗದೀಪ್ ಸಿಂಗ್ ದಲ್ಲೆವಾಲ ಅವರನ್ನು ಭೇಟಿ ಮಾಡದೆ ಸಾಗರಕ್ಕೆ ಆಗಮಿಸಿದರೆ ಕರ್ನಾಟಕ ರಾಜ್ಯ ರೈತ ಸಂಘ ಕಪ್ಪ ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಲಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.