ಬೆಂಗಳೂರು: ಸಕಾಲದಲ್ಲಿ ಬೆಂಬಲ ಬೆಲೆಯೊಂದಿಗೆ ಆಹಾರ ಧಾನ್ಯಗಳು ಹಾಗೂ ಎಣ್ಣೆ ಕಾಳುಗಳ ಖರೀದಿಗೆ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಸೂಚನೆ ನೀಡಿದ್ದಾರೆ. ಬೆಂಬಲ ಬೆಲೆಯೊಂದಿಗೆ ಕೃಷಿ ಉತ್ಪನ್ನಗಳ ಖರೀದಿ ಕುರಿತು ವಿಧಾನ ಸೌಧದ ಸಮಿತಿ ಕೊಠಡಿಯಲ್ಲಿ ನಡೆದ ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ಬೆಲೆ ಸ್ಥಿರೀಕರಣ ಸಚಿವ ಸಂಪುಟ ಉಪ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆಹಾರ ಮತ್ತು ನಾಗರೀಕರ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರಾದ ವಿ.ಮುನಿಯಪ್ಪ, ಸಹಕಾರ ಸಚಿವರಾದ ಕೆ.ಎನ್.ರಾಜಣ್ಣ, ಸಕ್ಕರೆ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಅವರೂ ಸಹ ಪಾಲ್ಗೊಂಡಿದ್ದ ಈ ಸಭೆಯಲ್ಲಿ ಬೆಂಬಲ ಬೆಲೆ ಯೋಜನೆಗಳನ್ನು ರೈತರಿಗೆ ಸರಿಯಾದ ಸಮಯದಲ್ಲಿ ತಲುಪಿಸುವ ಮಾರ್ಗೋಪಾಯಗಳ ಕುರಿತು ಸುದೀರ್ಘ ಚರ್ಚೆ ನಡೆಸಲಾಯಿತು.
ಸಂಬಂಧ ಪಟ್ಟ ಇಲಾಖೆ ಹಾಗೂ ನಿಗಮ ಮಂಡಳಿ ಅಧಿಕಾರಿಗಳು ಮೊದಲೇ ಪೂರ್ವ ಸಿದ್ದತೆ ಮಾಡಿಕೊಂಡು ಕೇಂದ್ರದಿಂದ ಅನುಮತಿ ಬಂದ ತಕ್ಷಣದಿಂದ ಖರೀದಿ ಪ್ರಾರಂಭ ಮಾಡಬೇಕು ಎಂದು ಎನ್ ಚಲುವರಾಯಸ್ವಾಮಿ ನಿರ್ದೇಶನ ನೀಡಿದರು. ಬೆಂಬಲ ಬೆಲೆ ವ್ಯವಸ್ಥೆ, ಖರೀದಿ ಪ್ರಕ್ರಿಯೆ ಕುರಿತು ರೈತರಿಗೆ ಕಾಲಾಕಾಲಕ್ಕೆ ಮಾಹಿತಿ ನೀಡಿ ನೊಂದಣಿ ಮಾಡಿಸಿ ಎಂದು ಅವರು ತಿಳಿಸಿದರು. ಇಲಾಖೆ, ನಿಗಮ ಮಂಡಳಿಗಳ ಅಧಿಕಾರಿಗಳ ನಡುವೆ ಸೂಕ್ತ ಸಮನ್ವಯ ಬೇಕು. ಅನಗತ್ಯ ಕಾರಣ ಹೇಳಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಕೃಷಿ ಸಚಿವರು ಎಚ್ಚರಿಸಿದರು.
ಬೆಂಬಲ ಬೆಲೆಯೊಂದಿಗೆ ಆಹಾರ ಧಾನ್ಯಗಳ ಖರೀದಿ ಬಗ್ಗೆ ಸುದ್ದಿ ಮಾದ್ಯಮಗಳ ಮೂಲಕ,ವಿವಿಧ ಸ್ವರೂಪಗಳಲ್ಲಿ ರೈತರಿಗೆ ಅರಿವು ಮೂಡಿಸಬೇಕು. ಗ್ರಾಮ ಪಂಚಾಯಿತಿ ಹಂತದಲ್ಲಿಯೂ ಜಾಗೃತಿ ಚಟುವಟಿಕೆಗಳನ್ನು ನಡೆಸಬೇಕೆಂದು ಅವರು ಸೂಚಿಸಿದರು. ಸಭೆಯಲ್ಲಿ ಹಿಂಗಾರು ಬಿಳಿ ಜೋಳ ಖರೀದಿಗೆ ಬೆಂಬಲ ಬೆಲೆ ಸೌಲಭ್ಯ ದೊರೆಯದೆ ಇರುವ ಬಗ್ಗೆ ಸಭೆಯಲ್ಲಿ ಹಾಜರಿದ್ದ ಸಚಿವರು ಪ್ರಸ್ತಾಪಿಸಿದರು. ಮುಂದಿನ ದಿನಗಳಲ್ಲಿ ಈ ಬಗ್ಗೆಯೂ ಗಮನ ಹರಿಸಿ ಸೂಕ್ತ ಕ್ರಮ ವಹಿಸುವಂತೆ ಕೃಷಿ ಸಚಿವರು ನಿರ್ದೇಶನ ನೀಡಿದರು.
ಹಿಂದೆ 1.5 ಲಕ್ಷ ಟನ್ ಗಳಿಗೆ ಸೀಮಿತವಾಗಿದ್ದ ಬೆಂಬಲ ಬೆಲೆಯೊಂದಿಗಿನ ಭತ್ತ ಖರೀದಿಯನ್ನು ರಾಜ್ಯ ಸರ್ಕಾರದ ಮನವಿಯ ಮೇರೆಗೆ 5 ಲಕ್ಷ ಟನ್ ಗಳಿಗೆ ಏರಿಕೆ ಮಾಡಿದ್ದು, ರೈತರು ಇದರ ಅನುಕೂಲವನ್ನು ಪಡೆದುಕೊಳ್ಳಬೇಕು. ಈ ಬಗ್ಗೆ ಕೃಷಿಕರಿಗೆ ವ್ಯವಸ್ಥಿತವಾಗಿ ಮಾಹಿತಿ ನೀಡಬೇಕೆಂದು ಎನ್.ಚಲುವರಾಯಸ್ವಾಮಿ ಹೇಳಿದರು. 2024-25ನೇ ಸಾಲಿನ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಎಫ್.ಎ.ಕ್ಯೂ ಗುಣಮಟ್ಟದ ಪ್ರಮುಖ ಕೃಷಿ ಉತ್ಪನ್ನಗಳ ಖರೀದಿ ಪ್ರಕ್ರಿಯೆಯ ಪ್ರಗತಿ ವಿವರದ ಬಗ್ಗೆ ಚರ್ಚಿಸಲಾಯಿತು
2024-25ನೇ ಸಾಲಿಗೆ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ತೊಗರಿಯನ್ನು ಖರೀದಿಸಲು ಆವರ್ತ ನಿಧಿಯಿಂದ ಹಣ ಬಿಡುಗಡೆ ಮಾಡುವ ಬಗ್ಗೆ ಕೃಷಿ ಮಾರಾಟ ಮಂಡಳಿಯಿಂದ ರೈತರಿಗೆ ವ್ಯಾಪಕವಾಗಿ ಯೋಜನೆಗಳ ಮಾಹಿತಿ ಒದಗಿಸಲು ಮಾಹಿತಿ ಶಿಕ್ಷಣ ಹಾಗೂ ಸಂವಹನ ಕಾರ್ಯಕ್ರಮಗಳಿಗೆ ಆವರ್ತ ನಿಧಿಯಿಂದ ವಾರ್ಷಿಕವಾಗಿ ರೂ.3.00 ಕೋಟಿಗಳನ್ನು ಉಪಯೋಗಿಸಿಕೊಳ್ಳುವ ಕುರಿತು ಸಹ ಸಭೆಯಲ್ಲಿ ಚರ್ಚಿಸಲಾಯಿತು. ಕರ್ನಾಟಕ ಆಹಾರ, ನಾಗರೀಕ ಸರಬರಾಜು ನಿಗಮಕ್ಕೆ, ಆವರ್ತ ನಿಧಿಯಿಂದ ಬಿಡುಗಡೆ ಮಾಡಲಾದ ಈವರೆಗಿನ ಮೊತ್ತಕ್ಕೆ ಆಕರಿಸಿದ ಬಡ್ಡಿಯನ್ನು ಆವರ್ತನಿಧಿಗೆ ಮರುಪಾವತಿಗೆ ಬಾಕಿಯಿರುವ ಕುರಿತು ಸಭೆಯಲ್ಲಿ ಚರ್ಚಿಸಿ ನಿರ್ದೇಶನಗಳನ್ನು ನೀಡಲಾಯಿತು.