ಬೆಂಗಳೂರು: “ಆದಿಕವಿ ಮಹರ್ಷಿ ವಾಲ್ಮೀಕಿ” ಪರಿಕಲ್ಪನೆಯ ಗಣರಾಜ್ಯೋತ್ಸವದ 217ನೇ ಫಲಪುಷ್ಪ ಪ್ರದರ್ಶನಕ್ಕೆ ಲಾಲ್ ಬಾಗ್ ಸಜ್ಜುಗೊಂಡಿದೆ. ಗಾಜಿನ ಮನೆಯ ಕೇಂದ್ರ ಭಾಗದಲ್ಲಿ ಬೃಹತ್ ಹುತ್ತದ (ವಲ್ಮೀಕ) ಮಾದರಿ ನಿರ್ಮಾಣ ಈ ಬಾರಿಯ ಫಲಪುಷ್ಪ ಪ್ರದರ್ಶನದ ವಿಶೇಷವಾಗಿದ್ದು, ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ.
ವಾಲ್ಮೀಕಿ ಎಂದರೆ ಎಲ್ಲರಲ್ಲಿ ಮೂಡುವ ಚಿತ್ರ ಹುತ್ತ. ಹುತ್ತ ಪದಕ್ಕೆ ಸಂಸ್ಕೃತದಲ್ಲಿ ವಲ್ಮೀಕ ಎನ್ನುತ್ತಾರೆ. ವಲ್ಮೀಕದಿಂದ ಹುಟ್ಟಿದವ ಅಥವಾ ಮೂಡಿದವ ವಾಲ್ಮೀಕಿ. ಮಹರ್ಷಿ ವಾಲ್ಮೀಕಿಯನ್ನು ಸಂಕೇತಿಸುವ ರೀತಿಯಲ್ಲಿ ಬೃಹತ್ ಹುತ್ತದ ಮಾದರಿಯನ್ನು ನಿರ್ಮಿಸಲಾಗುತ್ತಿದೆ. ಈ ಕಲಾಕೃತಿಯ ಪೀಠ ಭಾಗ ಸುಮಾರು 10 ಅಡಿಗಳ ಎತ್ತರವಿದ್ದು, ಅದರ ಮೇಲೆ ಸುಮಾರು 14ಅಡಿ ಅಗಲ, ಮತ್ತು 15 ಅಡಿ ಎತ್ತರದ ಹುತ್ತವನ್ನು ನಿರ್ಮಾಣ ಮಾಡಲಾಗುತ್ತಿದೆ. ಡಚ್ ಗುಲಾಬಿ ಹಾಗೂ ವಿವಿಧ ಬಣ್ಣಗಳ ಸೇವಂತಿಗೆ ಹೂಗಳನ್ನು ಬಳಸಿ. ಆಕರ್ಷಕ ರೂಪ ನೀಡಲಾಗುತ್ತದೆ. ಒಂದು ಬಾರಿಗೆ 1.5 ಲಕ್ಷ ಡಚ್ ಗುಲಾಬಿ, 400 ಕಿ.ಗ್ರಾಂ ಪಿಂಕ್ ಗುಲಾಬಿ ಹಾಗೂ 300 ಕಿ.ಗ್ರಾಂ ಹೈದರಾಬಾದ್ ಸೇವಂತಿಗೆ ಹೂಗಳನ್ನು ಬಳಸಲಾಗುತ್ತಿದೆ. ಒಟ್ಟು 2 ಬಾರಿ ಹೂಗಳನ್ನು ಬದಲಾಯಿಸಲಾಗುತ್ತದೆ.
ಬೃಹತ್ ಹುತ್ತದ ಕಲಾಕೃತಿಯ ಮುಂದೆ ಮಹರ್ಷಿ ವಾಲ್ಮೀಕಿ ಪ್ರತಿಮೆ:
ಬೃಹತ್ ಹುತ್ತದ ಕಲಾಕೃತಿಯ ಮುಂಭಾಗದಲ್ಲಿ ಸುಮಾರು 10 ಅಡಿ ಎತ್ತರದ ಆದಿಕವಿ ವಾಲ್ಮೀಕಿ ಮಹರ್ಷಿಗಳ ಪ್ರತಿಮೆ ಸುಮಾರು 6 ಅಡಿ ಪೀಠದ ಮೇಲೆ ಅನಾವರಣಗೊಳ್ಳಲಿದೆ. ಮಹರ್ಷಿ ವಾಲ್ಮೀಕಿಗಳು ರಾಮಾಯಣ ಕಾವ್ಯರಚನೆಯಲ್ಲಿ ನಿರತರಾಗಿರುವ ಭಂಗಿಯಲ್ಲಿ ಇರುವ ಪ್ರತಿಮೆ ಇದಾಗಿದೆ.
ಗಾಜಿನ ಮನೆಯ ಎಡಬದಿಯಲ್ಲಿ ನೇಪಾಳದ ಚಿತ್ವಾನ್ ಜಿಲ್ಲೆಯ, ಚಿತ್ವಾನ್ ನ್ಯಾಷನಲ್ ಪಾರ್ಕ್ ಉದ್ಯಾನದಲ್ಲಿ, ತಮಸಾ, ಸೋನಾ ಮತ್ತು ಗಂಡಕಿ ನದಿಗಳ ತ್ರಿವೇಣಿ ಸಂಗಮದಲ್ಲಿರುವ ವಾಲ್ಮೀಕಿ ಆಶ್ರಮದಲ್ಲಿರುವ ವಾಲ್ಮೀಕಿ ದೇವಾಲಯದ ಪುಷ್ಪಮಾದರಿ ಪ್ರದರ್ಶನಗೊಳ್ಳಲಿದೆ. ಇದೇ ಆಶ್ರಮದಲ್ಲಿ ವಾಲ್ಮೀಕಿ ಮಹರ್ಷಿಗಳು ನೆಲೆಸಿದ್ದರೆಂಬ ಪ್ರತೀತಿ ಇದೆ. ಸುಮಾರು ಹದಿನೈದು ಅಡಿ ಎತ್ತರದ ಈ ಪುಷ್ಪ ಕಲಾಕೃತಿಯ ಮುಂದೆ, ರಾಮಾಯಣ ರಚನೆಗೆ ಕಾರಣವಾದ, ಬೇಡ ಕ್ರೌಂಚ ಪಕ್ಷಿಗಳಲ್ಲಿ ಒಂದನ್ನು ಕೊಲ್ಲುವ, ಶೋಕಗೊಂಡ ವಾಲ್ಮೀಕಿ ಬಾಯಿಂದ ‘ಮಾ ನಿಷಾದ ಎಂಬ ಶೋಕದ ಮಾತು ಬರುವ ಕಲ್ಪನೆಯಲ್ಲಿ ನಿರ್ಮಿಸಲಾಗಿದೆ.
ವಾಲ್ಮೀಕಿ ಆಶ್ರಮದ ಪ್ರತಿರೂಪ ಒಟ್ಟು 14 ಅಡಿ ಅಗಲ ಮತ್ತು 24 ಆಡಿ ಎತ್ತರವನ್ನು ಹೊಂದಿರುತ್ತದೆ. ಈ ಪ್ರತಿರೂಪಕ್ಕೆ ಒಟ್ಟಾರೆ ಕೆಂಪು ಮತ್ತು ಹಳದಿ ಬಣ್ಣದ ಒಟ್ಟು ಒಂದು ಲಕ್ಷ ಗುಲಾಬಿ ಹೂಗಳನ್ನು ಹಾಗೂ ಶ್ವೇತ, ಪರ್ಪಲ್, ಹಳದಿ ಮತ್ತು ಚಾಕ್ಲೀಟ್ ವರ್ಣದ ಒಟ್ಟು 1.75 ಲಕ್ಷ ಆಕರ್ಷಕ ಕಲ್ಕತ್ತಾ ಮತ್ತು ಸಾಮಾನ್ಯ ಸೇವಂತಿಗೆ ಸೇರಿ ಒಂದು ಬಾರಿಗೆ 2.75 ಲಕ್ಷ ಹೂ ಬಳಕೆ ಮಾಡಲಾಗುತ್ತಿದೆ.
ಗಾಜಿನ ಮನೆಯ ಹಿಂಬದಿಗೆ ರಾಮಾಯಣದ ಪಂಚವಟಿಯನ್ನು ಬಿಂಬಿಸುವ 3ಡಿ ಕಲಾಕೃತಿ ಹಾಗೂ ರಾಮಾಯಣದ ಸಾಂದರ್ಭಿಕ ಚಿತ್ರಕಲಾ ಕೃತಿಗಳ ಅನಾವರಣ ಮಾಡಲಾಗುತ್ತಿದೆ. ವಾಲ್ಮೀಕಿ ಪರಂಪರೆಯನ್ನು ಬಿಂಬಿಸುವ ರಾಮಾಯಣದ ನಂತರದ ಕವಿಗಳ ಕಲಾಕೃತಿಗಳು ಹಾಗೂ ಗಾಜಿನ ಮನೆಯ ಕೇಂದ್ರಭಾಗದ ಬಲಬದಿಯ ಅಂಕಣದಲ್ಲಿ ವಿಶೇಷ ಕುಠೀರ ವಿನ್ಯಾಸದ ವರ್ಟಿಕಲ್ ಗಾರ್ಡನ್ ಮಾದರಿ ಮತ್ತು ವಾಲ್ಮೀಕಿ ರಾಮಾಯಣ ಕಲಾಕೃತಿಗಳನ್ನು ಸ್ಥಾಪಿಸಲಾಗುತ್ತಿದೆ.
ಗಾಜಿನ ಮನೆಯ ಒಳಾಂಗಣದಲ್ಲಿ ಸೂಕ್ತ ಸ್ಥಳದಲ್ಲಿ ರಾಮಾಯಣ ಮಹಾಕಾವ್ಯದ ಓಲೆಗರಿ ಹಸ್ತಪ್ರತಿಗಳನ್ನು ಪ್ರದರ್ಶಿಸಲಾಗುವುದು. ಈ ಪ್ರದರ್ಶನವನ್ನು ಬೆಂಗಳೂರಿನ ಎನ್.ಆರ್. ಕಾಲೋನಿಯಲ್ಲಿರುವ ಶ್ರೀ ಬಿ.ಎಂ.ಶ್ರೀ. ಸ್ಮಾರಕ ಪ್ರತಿಷ್ಠಾನ ಕೈಗೊಳ್ಳಲಿದೆ. ಎಲ್.ಇ.ಡಿ. ಸ್ಟೀನ್ಗಳನ್ನು ಬಳಸಿ ಲಾಲ್ಬಾಗ್ ಆಯ್ದ ಹತ್ತು ಜಾಗಗಳಲ್ಲಿ ಮಹರ್ಷಿ ವಾಲ್ಮೀಕಿ ಬದುಕು ಸಾಧನೆ ಮತ್ತು ಸಂದೇಶಗಳ ಜೊತೆಯಲ್ಲಿ ರಾಮಾಯಣದ ಮಹಾಕಾವ್ಯದ ಹೆಗ್ಗಳಿಕೆಯನ್ನು ಸಾರುವ ವಿಡಿಯೋ ತುಣುಕುಗಳು, ಚಿತ್ರಗಳು, ಫಲಪುಷ್ಪ ಪ್ರದರ್ಶನದ ಆವಧಿಯುದ್ದಕ್ಕೂ ಪ್ರದರ್ಶನಗೊಳ್ಳಲಿವೆ.
ರಾಜನಹಳ್ಳಿಯ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮೀಜಿ, ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ್, ರಾಮಲಿಂಗಾರೆಡ್ಡಿ ಭಾಗವಹಿಸಲಿದ್ದಾರೆ.
ಲಾಲ್ಬಾಗ್ನ ಎಲ್ಲಾ ದ್ವಾರಗಳಲ್ಲಿ ಎಲೆಕ್ಟ್ರಾನಿಕ್ ಟಿಕೆಟಿಂಗ್ ಹಾಗೂ ನಗದು ಮೂಲಕ ಪ್ರವೇಶ ಟಿಕೆಟ್ಗಳನ್ನು ಕೊಳ್ಳಲು ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಪ್ರವೇಶ ಟಿಕೆಟ್ಗಳನ್ನು ಗಾಜಿನ ಮನೆಯ ಬಳಿ ಮುಂಜಾನೆ 6 ಗಂಟೆಯಿಂದ 9 ಗಂಟೆಯವರೆಗೆ ಹಾಗೂ ಲಾಲ್ಬಾಗ್ನ ಎಲ್ಲಾ ಪ್ರವೇಶ ದ್ವಾರಗಳಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಂಜೆ 6.30 ಗಂಟೆಯವರೆಗೆ ನೀಡಲಾಗುತ್ತದೆ. ಗಾಜಿನ ಮನೆಯ ಪ್ರವೇಶವು ರಾತ್ರಿ 7.00 ಗಂಟೆಯವರೆಗೆ ಮಾತ್ರವಿರುತ್ತದೆ.