ಚಾಮರಾಜಪೇಟೆಯ ವಿನಾಯಕ ನಗರದ ಓಲ್ಡ್ ಪೆನ್ಷನ್ ಮೊಹಲ್ಲಾದ ರಸಗತೆ ಬದಿಯ ಶೆಡ್ ನಲದಲಿ ಮಲಗಿದ್ದ ಮೂರು ಹಸುಗಳ ಕೆಚ್ಚಲು ಕೊಯ್ದು ಮಚ್ಚಿನಿಂದ ಕಾಲುಗಳನ್ನು ಕತ್ತರಿಸಿದ್ದ ಆರೋಪಿಯನ್ನು ಕಾಟನ್ ಪೇಟೆ ಪೊಲೀಸರು ಬಂಧಿಸಿದ್ದಾರೆ. ಬಿಹಾರ ಮೂಲದ 35 ವರ್ಷದ ಶೇಖ್ ನಸ್ರೂ ಬಂಧಿತ ಆರೋಪಿ.
ಭಾನುವಾರ ಬೆಳಿಗ್ಗೆ ಈ ಘಟನೆ ನಡೆದಿತ್ತು. ಬಿಎನ್‌ಎಸ್ ಸೆಕ್ಷನ್ 325 ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಓಲ್ಡ್ ಪೆನ್ಷನ್ ಮೊಹಲ್ಲಾದಿಂದ ಸುಮಾರು 50 ಮೀಟರ್‌ನಷ್ಟು ದೂರ ಇರುವ ಪ್ಲಾಸ್ಟಿಕ್ ಹಾಗೂ ಬ್ಯಾಗ್ ಹೊಲಿಯುವ ಅಂಗಡಿಯಲ್ಲಿ ಆರೋಪಿ ಕೆಲಸ ಮಾಡುತ್ತಿದ್ದ. ಮದ್ಯದ ನಶೆಯಲ್ಲಿ ಹಸುಗಳ ಕೆಚ್ಚಲು ಕೊಯ್ದಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಒಬ್ಬನೇ ಕೃತ್ಯ ಎಸಗಿದ್ದಾನೆ. ಈತನ ಜತೆ ಬೇರೆ ಯಾರೂ ಭಾಗಿಯಾಗಿಲ್ಲ. ಆದರೂ ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಆರೋಪಿಯನ್ನು ನ್ಯಾಯಾಧೀಶರ ಎದುರು ಹಾಜರು ಪಡಿಸಲಾಗಿದ್ದು, ಜನವರಿ 24ರ ತನಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈಗಾಗಲೇ ಆರೋಪಿಯನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಆರೋಪಿ ಯಾರೇ ಆಗಿದ್ದರೂ ಶಿಕ್ಷೆ ವಿಧಿಸುವುದಾಗಿ ಭರವಸೆ ನೀಡಿದ್ದರು.