ಮೀರತ್: ಉತ್ತರಪ್ರದೇಶದ ಮೀರತ್‌ನಲ್ಲಿ ದಂಪತಿ ಹಾಗೂ ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರು ಶವವಾಗಿ ಪತ್ತೆಯಾಗಿದ್ದಾರೆ. ಇಲ್ಲಿನ ಲಿಸಾಡಿ ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ರಾತ್ರಿ ಈ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ಮೊಯಿನ್, ಅವರ ಪತ್ನಿ ಅಸ್ಮಾ, ಮೂವರು ಹೆಣ್ಣು ಮಕ್ಕಳಾದ ಅಫ್ಸಾ (8), ಅಜೀಜಾ (4) ಮತ್ತು ಅಡಿಬಾ (1) ಎಂದು ಗುರುತಿಸಲಾಗಿದೆ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಮೃತದೇಹಗಳನ್ನು ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮನೆಗೆ ಹೊರಗಿನಿಂದ ಬೀಗ ಹಾಕಲಾಗಿತ್ತು. ಛಾವಣಿ ಮೂಲಕ ಒಳ ಹೊಕ್ಕು ನೋಡಿದಾಗ ಮೃತ ದೇಹಗಳು ಕಂಡು ಬಂದಿವೆ. ಮೂರು ಮಕ್ಕಳ ಶವಗಳನ್ನು ಮಂಚದ ಬಾಕ್ಸ್‌ನಲ್ಲಿ ಇಡಲಾಗಿತ್ತು. ಮೊಹಿನ್ ಕಾಲುಗಳನ್ನು ಬೆಡ್‌ಶೀಟ್‌ನಿಂದ ಕಟ್ಟಲಾಗಿತ್ತು ಎಂದು ಹಿರಿಯ ಪೊಲೀಸ್ ಅಧೀಕ್ಷಕ ವಿಪಿನ್ ತಾಡ ತಿಳಿಸಿದ್ದಾರೆ. ಮನೆಗೆ ಬೀಗ ಹಾಕಿರುವುದನ್ನು ನೋಡಿದರೆ ಇದು ಹತ್ಯೆ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಕುಟುಂಬಕ್ಕೆ ಪರಿಚಿತರಾದವರು ಅಥವಾ ಹಳೆಯ ವೈಷಮ್ಯ ಈ ಘಟನೆಗೆ ಕಾರಣ ಇರಬಹುದು ಎಂದು ಪೊಲೀಸರು ಶಂಕಿಸಿದ್ದು, ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.