ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ: ದರ್ಶನ್‌ ಸೇರಿ ಎಲ್ಲ 17 ಆರೋಪಿಗಳು ಕೋರ್ಟ್‌ ಗೆ ಹಾಜರು

Most read

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ದರ್ಶನ್‌, ಪವಿತ್ರಾಗೌಡ ಸೇರಿದಂತೆ ಎಲ್ಲ 17 ಆರೋಪಿಗಳು ಇಂದು ಬೆಂಗಳೂರಿನ ಸಿಸಿಎಚ್- 57ರ ಕೋರ್ಟ್‌ಗೆ ಹಾಜರಾಗಿದ್ದಾರೆ. ಆರೋಪಿಗಳೆಲ್ಲರಿಗೂ ಜಾಮೀನು ದೊರೆತ ನಂತರ ಇದೇ ಮೊದಲ ಬಾರಿಗೆ ಒಟ್ಟಿಗೆ ನ್ಯಾಯಾಲಯದಲ್ಲಿ ಮುಖಾಮುಖಿಯಾಗಿದ್ದಾರೆ.

ಈ ಹಿಂದೆ ರೆಗ್ಯುಲರ್‌ ಜಾಮೀನು ಮಂಜೂರು ಮಾಡುವ ಸಂದರ್ಭದಲ್ಲಿ ಆರೋಪಿಗಳು ಪ್ರತಿ ತಿಂಗಳು ಕೋರ್ಟ್‌ಗೆ ಹಾಜರಾಗಬೇಕು ಎಂದು ಷರತ್ತು ವಿಧಿಸಿ ಇಂದು ಹಾಜರಾಗಲು ದಿನಾಂಕವನ್ನು ನಿಗದಿ ಮಾಡಲಾಗಿತ್ತು. ಹಾಗಾಗಿ ಇಂದು ಎಲ್ಲ ಆರೋಪಿಗಳು ನ್ಯಾಯಾಲಯದ ಮುಂದೆ ಹಾಜರಾಗಿದ್ದಾರೆ. ಮುಂಚಿತವಾಗಿ ಆಗಮಿಸಿದ್ದ ಪವಿತ್ರಾ ಗೌಡ, ತಮ್ಮ ವಕೀಲರೊಂದಿಗೆ ನ್ಯಾಯಾಲಯದ ಆವರಣದಲ್ಲಿ ಚರ್ಚಿಸುತ್ತಾ ನಿಂತಿದ್ದರು.  ದರ್ಶನ್ ಮತ್ತೊಬ್ಬ ನಟ ಧನ್ವೀರ್ ಮತ್ತು ತಮ್ಮ ವಕೀಲರೊಂದಿಗೆ ನ್ಯಾಯಾಲಯಕ್ಕೆ ಆಗಮಿಸಿದರು. ದರ್ಶನ್, ಆಗಮಿಸುತ್ತಿದ್ದಂತೆ  ಅಭಿಮಾನಿಗಳು ಮತ್ತು ಮಾಧ್ಯಮಗಳು ಸುತ್ತುವರೆದರು. ದರ್ಶನ್ ಸಾಮಾನ್ಯರಂತೆ ನ್ಯಾಯಾಲಯದ ಒಳಗೆ ನಡೆದುಕೊಂಡೇ ಹೋದರು.

ಆರೋಪಿಗಳೆಲ್ಲರೂ ನ್ಯಾಯಾಲಯಕ್ಕೆ ಹಾಜರಾದ ನಂತರ ಹಾಜರಿ ಪಡೆದುಕೊಂಡ ನ್ಯಾಯಾಧೀಶರು ಪ್ರಕರಣದ ವಿಚಾರಣೆಯನ್ನು ಫೆಬ್ರವರಿ 25ಕ್ಕೆ ಮುಂದೂಡಿ ಆದೇಶಿಸಿದರು. ಅಂದು ಮತ್ತೆ ಎಲ್ಲ ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗಬೇಕಿದೆ. ಈ ಮಧ್ಯೆ ಪವಿತ್ರಾಗೌಡ ರಾಜ್ಯ ಬಿಟ್ಟು ಹೊರಗೆ ಹೋಗಲು 1 ತಿಂಗಳ ಕಾಲಾವಕಾಶ ಕೋರಿ ಅರ್ಜಿ ಸಲ್ಲಿಸಿದ್ದಾರೆ.
ದರ್ಶನ್‌, ಪವಿತ್ರಾ ಗೌಡ ಸೇರಿದಂತೆ 7 ಮಂದಿಗೆ ಹೈಕೋರ್ಟ್‌ ಡಿ. 13 ರಂದು ಜಾಮೀನು ಮಂಜೂರು ಮಾಡಿತ್ತು. ನ್ಯಾಯಾಲಯದ ಅನುಮತಿ ಇಲ್ಲದೇ ಬೆಂಗಳೂರು ಬಿಟ್ಟು ಹೋಗುವಂತಿಲ್ಲ ಎಂಬ ಷರತ್ತನ್ನು ವಿಧಿಸಲಾಗಿತ್ತು. ಬೆಂಗಳೂರು ಬಿಟ್ಟು ಹೊರ ಹೋಗುವಂತಿಲ್ಲ ಎಂದು ಹೈ ಕೋರ್ಟ್ ಷರತ್ತು ವಿಧಿಸಿತ್ತು. ನಂತರ ದರ್ಶನ್ ಮನವಿ ಮಾಡಿಕೊಂಡ ನಂತರ ಮೈಸೂರಿಗೆ ತೆರಳಲು ಅನುಮತಿ ನೀಡಿತ್ತು. 

ರೆಗ್ಯುಲರ್ ಜಾಮೀನು ಮಂಜೂರು ಮಾಡಿರುವ ಹೈ ಕೋರ್ಟ್ ಆದೇಶವನ್ನು ಪ್ರಶ್ನಿಸಿ ಬೆಂಗಳೂರು ಪೊಲೀಸರು ಜನವರಿ 6 ರಂದು ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದಾರೆ.  ಜೂನ್ 8 ರಂದು 33 ವರ್ಷದ ರೇಣುಕಾಸ್ವಾಮಿ ಹತ್ಯೆ ನಡೆದಿತ್ತು. ಮಾಗಡಿ ರಸ್ತೆಯ ಚರಂಡಿಯಲ್ಲಿ ರೇಣುಕಸ್ವಾಮಿ ಶವ ಪತ್ತೆಯಾಗಿತ್ತು. ಪ್ರಕರಣದ ತನಿಖೆ ಆರಂಭಿಸಿದ್ದ ಪೊಲೀಸರಿಗೆ ಇದು ಕೊಲೆ ಎನ್ನುವುದು ಖಚಿತವಾದ ನಂತರ ಮೈಸೂರಿನಲ್ಲಿ ದರ್ಶನ್ ಅವರನ್ನು ಜೂನ್ 11ರಂದು ಬಂಧಿಸಿದ್ದರು. 

More articles

Latest article