ಮಹಿಳಾ ಪರ ಹೋರಾಟಗಾರ್ತಿ ಮೀನಾಕ್ಷಿ ಬಾಳಿ, ಚಿತ್ರನಟಿ ತಾರಾ ಅವರಿಗೆ ಅಕ್ಕಮಹಾದೇವಿ ವಿವಿ ಗೌರವ ಡಾಕ್ಟರೇಟ್

Most read

ವಿಜಯಪುರ:  ಮಹಿಳಾ ಪರ ಹೋರಾಟಗಾರ್ತಿ ಕಲಬುರ್ಗಿಯ ಮೀನಾಕ್ಷಿ ಬಾಳಿ, ಚಿತ್ರನಟಿ ತಾರಾ ಅನುರಾಧ ಹಾಗೂ ಶಿಗ್ಗಾವಿಯ ಉತ್ಸವ ರಾಕ್ ಗಾರ್ಡನ್ ನಿರ್ವಾಹಕಿ ವೇದರಾಣಿ ದಾಸನೂರು ಅವರಿಗೆ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪ್ರಕಟಿಸಲಾಗಿದೆ.  ಜನವರಿ 9ರಂದು ಮಧ್ಯಾಹ್ನ 12.30ಕ್ಕೆ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯಲಿರುವ 16ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು ಗೌರವ ಡಾಕ್ಟರೇಟ್ ಪ್ರದಾನ ಮಾಡಲಿದ್ದಾರೆ ಎಂದು ಕುಲಪತಿ ಪ್ರೊ. ತುಳಸಿಮಾಲಾ ತಿಳಿಸಿದ್ದಾರೆ.

ವಿಶ್ವವಿದ್ಯಾಲಯದಿಂದ ವಿವಿಧ ಸ್ನಾತಕ, ಸ್ನಾತಕೋತ್ತರ ಕೋರ್ಸ್ ಗಳಲ್ಲಿ ಗರಿಷ್ಠ ಅಂಕಗಳನ್ನು ಗಳಿಸಿ ತೇರ್ಗಡೆಯಾದ ಒಟ್ಟು 63 ವಿದ್ಯಾರ್ಥಿನಿಯರಿಗೆ 80 ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಗುತ್ತದೆ. ಘಟಿಕೋತ್ಸವದಲ್ಲಿ 13,461 ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿನಿಯರು ಪದವಿ ಪಡೆಯಲು ಅರ್ಹರಾಗಿರುತ್ತಾರೆ. ಘಟಿಕೋತ್ಸವದಲ್ಲಿ ಒಟ್ಟು 34 ವಿದ್ಯಾರ್ಥಿನಿಯರಿಗೆ ಪಿ.ಎಚ್ ಡಿ, ಒಟ್ಟು 1,106 ವಿದ್ಯಾರ್ಥಿನಿಯರಿಗೆ ವಿವಿಧ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ನೀಡಲಾಗುವುದು. ಈ ಘಟಿಕೋತ್ಸವದಲ್ಲಿ ಒಟ್ಟು 12, 350 ವಿದ್ಯಾರ್ಥಿನಿಯರಿಗೆ ಸ್ನಾತಕ ಪದವಿ ಪ್ರದಾನ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯ ಮಾಪನ ಕುಲಸಚಿವ ಪ್ರೊ.ಎಚ್.ಎಂ.ಚಂದ್ರಶೇಖರ್, ಘಟಿಕೋತ್ಸವ ಸಂಯೋಜನಾಧಿಕಾರಿ ಪ್ರೊ. ಸಕ್ಪಾಲ್ ಹೂವಣ್ಣ, ಪ್ರೊ.ಓಂಕಾರ ಕಾಕಡೆ, ಡಾ.ತಹಮೀನಾ ಕೋಲಾರ, ಸಂದೀಪ ನಾಯಕ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

More articles

Latest article