ಸಂಪಾದಕೀಯ | ಪಶ್ಚಿಮ ಘಟ್ಟದಲ್ಲಿ ಮುಗಿದ ರಕ್ತಸಿಕ್ತ ನಕ್ಸಲ್ ಅಧ್ಯಾಯ: ಮುಂದೇನು?

Most read

ಒಂದು ರಕ್ತಸಿಕ್ತ ಚರಿತ್ರೆ ಇಂದಿಗೆ ಕೊನೆಗೊಂಡಿದೆ. ಪಶ್ಚಿಮಘಟ್ಟ ಭಾಗದಲ್ಲಿ ಚಟುವಟಿಕೆ ನಡೆಸುತ್ತಿದ್ದ ಮಾವೋವಾದಿ ನಕ್ಸಲೀಯರ ಕೊನೆಯ ತಂಡ ಶರಣಾಗಿ, ಮುಖ್ಯವಾಹಿನಿಗೆ ಮರಳುವುದರೊಂದಿಗೆ ಕಳೆದ ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ನಡೆಯುತ್ತ ಬಂದ ಸಂಘರ್ಷ ಕೊನೆಗೊಂಡಿದೆ. ಒಂದು ನಾಗರಿಕ ಸಮಾಜವಾಗಿ ನಾವೆಲ್ಲರೂ ಸಮಾಧಾನ ಪಟ್ಟುಕೊಳ್ಳಬೇಕಾದ ಬೆಳವಣಿಗೆ ಇದು.

ತೊಂಭತ್ತರ ದಶಕದ ಅಂತ್ಯದಲ್ಲಿ ಮಾವೋವಾದಿ ನಕ್ಸಲೀಯರ ಪಕ್ಷ‌ ಕರ್ನಾಟಕದಲ್ಲಿ ಕ್ರಿಯಾಶೀಲವಾಗಿದ್ದರೂ ಅದು ಸುದ್ದಿಗೆ ಬಂದಿದ್ದು 2002ರಲ್ಲಿ. ಮಾವೋವಾದಿ ಪಕ್ಷದ ಅಂಗಸಂಸ್ಥೆಯಾಗಿದ್ದ ಕರ್ನಾಟಕ ವಿಮೋಚನಾ ರಂಗ ಪ್ರಜಾಪ್ರಭುತ್ವ ಮಾರ್ಗದ ಹೋರಾಟದಲ್ಲಿ‌ ಪರಿಣಾಮಕಾರಿಯಾಗಿ ಮುನ್ನಡೆಯುತ್ತಿದ್ದ ಸಂದರ್ಭದಲ್ಲೇ ಸಶಸ್ತ್ರ ಸಂಘರ್ಷದ ಕೂಗು ಹುಟ್ಟಿಕೊಂಡು ಸಂಘಟನೆಯ ಬಹುತೇಕರು ಭೂಗತರಾದರು. ಬಂದೂಕು ಕೈಗೆತ್ತಿಕೊಂಡು ನಡೆಸುವ ಹೋರಾಟ ಸರಿಯಲ್ಲ ಎಂದು ತೀರ್ಮಾನಿಸಿದ ಹಲವರು ಚಳವಳಿಯಿಂದ ದೂರ ಉಳಿದರು.

ಕರ್ನಾಟಕದಲ್ಲಿ ಹಿಂದೆಂದೂ ಇಲ್ಲದ ಸಶಸ್ತ್ರ ಹೋರಾಟ ಪಶ್ಚಿಮಘಟ್ಟ ಭಾಗದಲ್ಲಿ ಆರಂಭಗೊಂಡಾಗ ಪಶ್ಚಿಮಘಟ್ಟವೇ ಯಾಕೆ‌ ಎಂದು ಹಲವರು ಹುಬ್ಬೇರಿಸಿದ್ದರು. ಆಂಧ್ರಪ್ರದೇಶದಂಥ ರಾಜ್ಯಗಳಲ್ಲಿ ಇದ್ದಷ್ಟು ಪ್ರಮಾಣದ ಭೂಮಾಲೀಕರ ಕ್ರೌರ್ಯ, ಹಿಂಸೆಯೇನು ಪಶ್ಚಿಮಘಟ್ಟದಲ್ಲಿರಲಿಲ್ಲ. ಆದರೆ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಹೆಸರಿನಲ್ಲಿ ಆದಿವಾಸಿಗಳನ್ನು ಎತ್ತಂಗಡಿ ಮಾಡುವ ಚಟುವಟಿಕೆಗಳು, ಅರಣ್ಯ ಇಲಾಖೆಯ ಕಿರುಕುಳ ನಕ್ಸಲ್ ಚಳವಳಿಗೆ ಬಲ ನೀಡಿತು. ಮಲೆನಾಡು ಭಾಗದಲ್ಲಿ‌ ನಡೆದ ನಕ್ಸಲ್ ಚಳವಳಿಯ ಭಾಗವಾಗಿದ್ದವರಲ್ಲಿ ಬಹುತೇಕ ಯುವತಿ ಯುವಕರು ಇಲ್ಲಿನ ಆದಿವಾಸಿ ಸಮುದಾಯದವರೇ ಆಗಿದ್ದರು. ಪ್ರಭುತ್ವದ ಕ್ರೌರ್ಯದಿಂದ ಬದುಕುವ ದಾರಿ ಕಾಣದೇ ಹೋದಾಗ ಅವರು ಬಂದೂಕು ಕೈಗೆತ್ತಿಕೊಂಡಿದ್ದರು.

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಸಣ್ಣಗ್ರಾಮ ಮೆಣಸಿನ ಹಾಡ್ಯ ಇದ್ದಕ್ಕಿದ್ದಂತೆ ಸುದ್ದಿಯಾಯಿತು. 2002ರ ನವೆಂಬರ್‌ನಲ್ಲಿ ಮೊದಲ ಬಾರಿ ಪಶ್ಚಿಮಘಟ್ಟದಿಂದ ಗುಂಡಿನ ಮೊರೆತ ಕೇಳಿಬಂದಿತ್ತು. ನಕ್ಸಲರು ಬಂದೂಕು ತರಬೇತಿಯಲ್ಲಿ ತೊಡಗಿದ್ದಾಗ ಚೀರಮ್ಮ ಎಂಬ ಮಹಿಳೆಯ ಕಾಲಿಗೆ ಗುಂಡೇಟು ಬಿದ್ದಿತ್ತು. ಇದು ಮಾಧ್ಯಮಗಳಲ್ಲಿ ಸುದ್ದಿಯಾದಾಗಲೇ ಹೊರಜಗತ್ತಿಗೆ ಘಟ್ಟದಲ್ಲಿ ಏನೋ ನಡೆಯುತ್ತಿದೆ ಎಂಬುದು ಅರಿವಾಗಿತ್ತು.

ಘಟ್ಟ ಭಾಗದಲ್ಲಿ ನಕ್ಸಲ್ ಚಟುವಟಿಕೆ ಬೆಳೆಯುತ್ತಿದ್ದಂತೆ ಪೊಲೀಸ್ ಇಲಾಖೆ ಅಖಾಡಕ್ಕೆ ಇಳಿದಿತ್ತು. ಕುದುರೆಮುಖ ಸಮೀಪದ ಸಿಂಗ್ಸಾರ್ ಗ್ರಾಮದ ಬಳಿ ಪೊಲೀಸರು ಮತ್ತು ನಕ್ಸಲರ ನಡುವೆ ಮೊದಲ ಎನ್ ಕೌಂಟರ್ ನಡೆದಿತ್ತು. ನಕ್ಸಲೀಯರು ಅಲ್ಲಿಂದ ಪಾರಾಗಿದ್ದರು.

ಇದಾದ ನಂತರ ಪಶ್ಚಿಮಘಟ್ಟದಲ್ಲಿ ರಕ್ತ ಹರಿಸಿದ ಎನ್ ಕೌಂಟರ್ ಇಡೀ ದೇಶದ ಗಮನ ಸೆಳೆದಿತ್ತು. 2003ರ ನವೆಂಬರ್ 16ರಂದು ನಿವಾಸಿ ರಾಮಪ್ಪ ಎಂಬುವವರ ಮನೆಯಲ್ಲಿ ಐವರು ನಕ್ಸಲೀಯರ ತಂಡ ತಂಗಿತ್ತು. ಮಾರನೇ ದಿನ ಬೆಳಿಗ್ಗೆ ಉಡುಪಿ ಎಸ್ ಪಿ ಮುರುಗನ್ ನೇತೃತ್ವದ ತಂಡ ಮನೆಯನ್ನು ಸುತ್ತುವರೆದಿತ್ತು. ಪೊಲೀಸರು ಹಾರಿಸಿದ ಗುಂಡಿಗೆ ಪಾರ್ವತಿ ಮತ್ತು ಹಾಜಿಮಾ ಎಂಬ ಇಬ್ಬರು ಹೆಣ್ಣುಮಕ್ಕಳು ಅಸುನೀಗಿದ್ದರು. ಗಂಡುಹೆಣ್ಣೆಂಬ ಭೇದವಿಲ್ಲದಂತೆ ನಕ್ಸಲ್ ಚಟುವಟಿಕೆಯನ್ನು ಹೊಸಕಿಹಾಕುತ್ತೇವೆ ಎಂಬ ಸಂದೇಶವನ್ನು ಪ್ರಭುತ್ವ ಸ್ಪಷ್ಟವಾಗಿ ನೀಡಿತ್ತು.

ಪಾರ್ವತಿ, ಹಾಜಿಮಾ ಹತ್ಯೆ ಘಟನೆಯ ನಂತರ ನಕ್ಸಲ್ ಚಳವಳಿ ತೀವ್ರವಾಗಿ ಬೆಳೆಯತೊಡಗಿತು. ನಕ್ಸಲರು ರೊಚ್ಚಿಗೆದ್ದರು, ಅವರ ಪರವಾಗಿ ಸಹಾನುಭೂತಿಯೂ ಬೆಳೆಯುತ್ತ‌ ಹೋಯಿತು. ಇನ್ನೊಂದೆಡೆ ಸರ್ಕಾರ ನಕ್ಸಲ್ ನಿಗ್ರಹ ದಳ ರಚಿಸಿ ನಕ್ಸಲರ ವಿರುದ್ಧ ತೊಡೆತಟ್ಟಿ ನಿಂತಿತು. ಪಶ್ಚಿಮಘಟ್ಟ ರಕ್ತಸಿಕ್ತ ಇತಿಹಾಸವನ್ನು ಬರೆಯತೊಡಗಿತು. ಸಾಲುಸಾಲಾಗಿ ನಕ್ಸಲ್ ಯುವಕರು ಪೊಲೀಸರ ಗುಂಡಿಗೆ ಆಹುತಿಯಾದರು. ನಕ್ಸಲರೂ ಒಂದೆರಡು ಪ್ರಕರಣಗಳಲ್ಲಿ ಹಿಂಸೆಗೆ ಇಳಿದು ಪೊಲೀಸ್ ಮಾಹಿತಿದಾರರನ್ನು ಕೊಂದರು.

2005ರಲ್ಲಿ ಸಾಕೇತ್ ರಾಜನ್ ಅವರನ್ನು ನಕ್ಸಲ್ ನಿಗ್ರಹಪಡೆ ಕೊಂದುಹಾಕಿತು. ಅಲ್ಲಿಯವರಿಗೆ ಸಾಕೇತ್ ಅವರೇ ನಕ್ಸಲ್ ಚಳವಳಿಯನ್ನು ಮುನ್ನಡೆಸುತ್ತಿದ್ದಾರೆ ಎಂಬ ಮಾಹಿತಿ ಹೊರಜಗತ್ತಿಗೆ ಗೊತ್ತಿರಲಿಲ್ಲ‌. ಪ್ರತಿಭಾವಂತ ಸಾಕೇತ್ ಕರ್ನಾಟಕದ ಪರ್ಯಾಯ ಚರಿತ್ರೆಯನ್ನು ತಮ್ಮ ಮೇಕಿಂಗ್ ಹಿಸ್ಟರಿ ಎಂಬ ಕೃತಿಯಲ್ಲಿ ಕಟ್ಟಿಕೊಟ್ಟವರು. ಆಗರ್ಭ ಶ್ರೀಮಂತರಾಗಿದ್ದರೂ, ಮೇಲ್ಜಾತಿಯಲ್ಲೇ ಹುಟ್ಟಿದ್ದರೂ ಬಡವರ, ನಿರ್ಗತಿಕರ, ಶೋಷಿತರ ಪರವಾಗಿ ಕಾಳಜಿ ಅವರನ್ನು ನಕ್ಸಲ್ ಚಳವಳಿಗೆ ಸೆಳೆದಿತ್ತು. ಸಶಸ್ತ್ರ ಹೋರಾಟದ ನಾಯಕತ್ವ ವಹಿಸಿದ್ದರೂ, ಅವರು ಸಾಯುವವರೆಗೆ ಘಟ್ಟದ ನಕ್ಸಲರು ಎಂದೂ ಹಿಂಸೆಗೆ ಇಳಿದಿರಲಿಲ್ಲ.

ಸಾಕೇತ್ ಹತ್ಯೆ ಕರ್ನಾಟಕದಲ್ಲಿ ದೊಡ್ಡ ಮಟ್ಟದ ಸಂಚಲನ ಸೃಷ್ಟಿಸಿತು. ಈ ಸಂದರ್ಭದಲ್ಲಿ ಆಂಧ್ರಪ್ರದೇಶದ ನಕ್ಸಲರು ಪಾವಗಡದ ವೆಂಕಟಮ್ಮನಹಳ್ಳಿಗೆ ನುಗ್ಗಿ ಸಿಆರ್ ಪಿಎಫ್ ಶಿಬಿರದ ಮೇಲೆ ದಾಳಿ ನಡೆಸಿ ಮಾರಣಹೋಮವನ್ನೇ ನಡೆಸಿದರು. ಸಾಕೇತ್ ಹತ್ಯೆಗೆ ನಕ್ಸಲರು ತೀರಿಸಿಕೊಂಡ ಸೇಡು ಇದಾಗಿತ್ತು. ಕರ್ನಾಟಕವನ್ನೇ ಬೆಚ್ಚಿಬೀಳಿಸಿದ ಘಟನೆ ಇದು. ಸಹಜವಾಗಿಯೇ ನಕ್ಸಲರ ವಿರುದ್ಧ ಜನಾಕ್ರೋಶ ಭುಗಿಲೆದ್ದಿತ್ತು. ವೆಂಕಟಮ್ಮನಹಳ್ಳಿಯ ಪ್ರಾಣತೆತ್ತ ಪೊಲೀಸ್ ಕಾನ್ಸ್ ಟೇಬಲ್ ಗಳೂ ಕೂಡ ಬಡ ಕುಟುಂಬಗಳು, ದುರ್ಬಲ ವರ್ಗದಿಂದ ಬಂದವರೇ ಆಗಿದ್ದರು. ಇಂಥವರನ್ನು ಕೊಂದಿದ್ದು ಯಾವ ನ್ಯಾಯ ಎಂಬ ಪ್ರಶ್ನೆ ಉದ್ಭವವಾಗಿತ್ತು. ನಕ್ಸಲರ ಪರವಾಗಿ ಇದ್ದ ಸಹಾನುಭೂತಿಯೂ ಮರೆಯಾಗತೊಡಗಿತು.

2005ರಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಸಾಕೇತ್ ರಾಜನ್ ಜೊತೆಯಲ್ಲಿ ಶಿವಲಿಂಗು ಎಂಬ ಯುವಕ ಹತ್ಯೆಯಾಗಿದ್ದರು. ನಂತರದ ದಿನಗಳಲ್ಲಿ ಮನೋಹರ್, ಉಮೇಶ್, ದೇವಯ್ಯ, ದಿನಕರ್, ವಸಂತ, ಅಜಿತ್ ಕುಸುಬಿ, ಸುಂದರೇಶ್, ಗೌತಮ್, ಪರಮೇಶ್ವರ್.. ಹೀಗೆ ಸಾಲುಸಾಲು ನಕ್ಸಲರು ಪೊಲೀಸರ ಗುಂಡಿಗೆ ಬಲಿಯಾದರು.

ಈ ನಡುವೆ ನಕ್ಸಲ್ ಚಳವಳಿಯ ಭಾಗವಾಗಿದ್ದ ನೂರ್ ಶ್ರೀಧರ್, ಸಿರಿಮನೆ ನಾಗರಾಜ್ ಸಶಸ್ತ್ರ ಹೋರಾಟದಿಂದ ದೂರವಿರುವ ತೀರ್ಮಾನ ಕೈಗೊಂಡಿದ್ದರು. ಸಿದ್ಧರಾಮಯ್ಯ ಅವರು ಮೊದಲು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಶಾಂತಿಗಾಗಿ ನಾಗರಿಕರ ವೇದಿಕೆ ಮುಖ್ಯವಾಹಿನಿಗೆ ಮರಳುವ ನಕ್ಸಲರಿಗೆ ಶರಣಾಗತಿಗೆ ಅವಕಾಶ ನೀಡಬೇಕು, ಅವರ ಮುಂದಿನ ಬದುಕಿಗೆ ನೆರವಾಗಬೇಕು ಎಂಬ ಪ್ರಸ್ತಾಪ ಮಂಡಿಸಿತು. ಸರ್ಕಾರವೂ ಒಪ್ಪಿಕೊಂಡು ನಕ್ಸಲ್ ಶರಣಾಗತಿ ಪ್ಯಾಕೇಜ್ ರೂಪಿಸಿತು. ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಒಳಗೊಂಡ ತಂಡ ಸರ್ಕಾರದ ಮೇಲೆ ಒತ್ತಡ ಹೇರಿ ಕೊನೆಗೂ ನೂರ್ ಶ್ರೀಧರ್, ಸಿರಿಮನೆ ನಾಗರಾಜ್ ಅವರನ್ನು ಮುಖ್ಯವಾಹಿನಿಗೆ ಮರಳುವಂತೆ ಮಾಡಿತು.

ಇದಾದ ನಂತರವೂ ಹಲವರು ನಕ್ಸಲ್ ಶರಣಾಗತಿ ಪ್ಯಾಕೇಜ್ ಅಡಿಯಲ್ಲಿ ಶರಣಾದರೂ ಸರ್ಕಾರ, ಪೊಲೀಸ್ ಅಧಿಕಾರಿಗಳು ಕೊಟ್ಟ ಮಾತಿನಂತೆ ನಡೆದುಕೊಳ್ಳಲಿಲ್ಲ. ಶರಣಾದವರು ಜೈಲಿನಲ್ಲಿ ಕೊಳೆಯುವಂತಾಯಿತು. ಹೀಗಾಗಿ ಮುಖ್ಯವಾಹಿನಿಗೆ ಮರಳಲು ಬಯಸಿದ ನಕ್ಸಲರು ಕಾಡಿನಲ್ಲೇ ಉಳಿಯುವಂತಾಯಿತು.

ಇತ್ತೀಚಿಗೆ ನಡೆದ ನಕ್ಸಲ್ ಯುವಕ ವಿಕ್ರಂ ಗೌಡ್ಲು ಎನ್ ಕೌಂಟರ್ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿತ್ತು. ಬಂಧಿಸುವ ಅವಕಾಶವಿದ್ದರೂ ಪೊಲೀಸರು ಎನ್ ಕೌಂಟರ್ ಹೆಸರಲ್ಲಿ ಕೊಂದಿದ್ದೇಕೆ ಎಂದು ಪ್ರಜಾಪ್ರಭುತ್ವವಾದಿಗಳು ಪ್ರಶ್ನಿಸಿದ್ದರು. ಸಿದ್ಧರಾಮಯ್ಯ ಸರ್ಕಾರ ಹೊಸ ಪ್ರಸ್ತಾಪ ಮಂಡಿಸಿ ನಕ್ಸಲ್ ಶರಣಾಗತಿ ಪ್ಯಾಕೇಜ್ ನಲ್ಲಿ ಬದಲಾವಣೆ ತಂದಿತು. ನಕ್ಸಲೀಯರು ಶರಣಾದರೆ ಅವರಿಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಸ್ವತಃ ಸಿದ್ಧರಾಮಯ್ಯ ಅವರೇ ಘೋಷಿಸಿದರು.

ಶಾಂತಿಗಾಗಿ ನಾಗರಿಕರ ವೇದಿಕೆ ಮತ್ತು ಸರ್ಕಾರ ರಚಿಸಿರುವ ನಕ್ಸಲ್ ಶರಣಾಗತಿ ಸಮಿತಿ ಶರಣಾಗತಿ ಬಯಸಿರುವ ನಕ್ಸಲರ ಕೊನೆಯ ತಂಡದೊಂದಿಗೆ ಚರ್ಚೆ ನಡೆಸಿ ಕೊನೆಗೂ ಇಂದು ಎಲ್ಲರೂ ಶರಣಾಗತಿಯಾಗಿದ್ದಾರೆ‌. ಹೊರಬಂದಿರುವ ಎಲ್ಲರೂ ಕಾನೂನು ಪ್ರಕ್ರಿಯೆಗಳಿಗೆ ಒಳಗಾಗಿ ತಮ್ಮ ಮೇಲಿರುವ ಪ್ರಕರಣಗಳನ್ನು ಎದುರಿಸಬೇಕಿದೆ. ಈ ಹಂತದಲ್ಲಿ ಅಧಿಕಾರಿಗಳು ಅನಗತ್ಯ ಕಿರುಕುಳ ನೀಡದೆ ಸರ್ಕಾರದ ಉದ್ಧೇಶವನ್ನು, ನಾಗರಿಕ ಸಮಿತಿಗಳ ಕಾಳಜಿಯ ಪ್ರಯತ್ನಗಳನ್ನು ವಿಫಲಗೊಳಿಸದಂತೆ ನೋಡಿಕೊಳ್ಳಬೇಕಿದೆ.

ಮಲೆನಾಡು ಭಾಗದಲ್ಲಿ ಕ್ರಿಯಾಶೀಲವಾಗಿದ್ದ ನಕ್ಸಲ್ ಚಟುವಟಿಕೆ ನಿಂತು ಹಲವು ವರ್ಷಗಳೇ ಆಗಿದ್ದರೂ, ಈಗ ಕೊನೆಯ ತಂಡ ಶರಣಾಗುವುದರೊಂದಿಗೆ ಈ ರಕ್ತಸಿಕ್ತ ಚರಿತ್ರೆಯ ಕೊನೆಯ ಪುಟ ದಾಖಲಾದಂತಾಗಿದೆ.

ನಕ್ಸಲ್ ಚಳವಳಿಯೇನೋ ಮುಗಿಯಿತು? ಆದರೆ ಘಟ್ಟದ ಭಾಗದ ಸಮಸ್ಯೆಗಳು ಸಂಪೂರ್ಣ ಬಗೆಹರಿದಿಲ್ಲ. ಕಸ್ತೂರಿ ರಂಗನ್ ವರದಿಯ ತೂಗುಗತ್ತಿ ಇಲ್ಲಿನ ಜನರ ತಲೆಯ ಮೇಲೆ ಇನ್ನೂ ತೂಗುತ್ತಿದೆ. ಕಾಡುರಕ್ಷಣೆಯ ಹೆಸರಲ್ಲಿ ಕಾಡಿನ ಜನರನ್ನು ಒಕ್ಕಲೆಬ್ಬಿಸುವ ಪ್ರಯತ್ನಗಳೇನು ನಿಂತಿಲ್ಲ. ಕಾಡಿನ ಉತ್ಪನ್ನಗಳನ್ನು ಸಂಗ್ರಹಿಸುವ ಆದಿವಾಸಿಗಳ ಮೇಲೆ ಅರಣ್ಯ ಇಲಾಖೆಯವರ ದೌರ್ಜನ್ಯಗಳು ನಿಂತಿಲ್ಲ.

ನಕ್ಸಲರ ಚಟುವಟಿಕೆ ಆರಂಭವಾದ ನಂತರ ಸರ್ಕಾರ ಈ ಭಾಗದ ಆದಿವಾಸಿಗಳ ಪರವಾಗಿ ನಾವಿದ್ದೇವೆ ಎಂದು ತೋರಿಸಿಕೊಳ್ಳಲು ಹಲವು ಯೋಜನೆಗಳನ್ನು ಪ್ರಕಟಿಸಿತ್ತು. ನಕ್ಸಲರು ಅಲ್ಲಿಂದ ಹೊರಬಂದ ನಂತರ ಈ ಜನರನ್ನು ಮರೆತರೆ ಸರ್ಕಾರ ಮತ್ತೆ ದ್ರೋಹವೆಸಗಿದಂತಾಗುತ್ತೆ. ಕಾಡಿನ ಜನರು ಕಾಡಿನಲ್ಲಿ ಬದುಕಲು ಸರ್ಕಾರ ತೊಂದರೆ ಕೊಡಬಾರದು. ಅವರ ಹಕ್ಕುಗಳನ್ನು ಕಿತ್ತುಕೊಳ್ಳಬಾರದು. ಈ ಜನರಿಗೆ ಮೂಲಭೂತ ಸೌಕರ್ಯಗಳನ್ನು ಆದ್ಯತೆಯ ಮೇಲೆ ಒದಗಿಸಬೇಕು. ಸರ್ಕಾರ ಮನಸ್ಸು ಮಾಡಿದರೆ ಇದ್ಯಾವುದೂ ದೊಡ್ಡ ವಿಷಯವೇನಲ್ಲ. ಅದಕ್ಕಾಗಿ ಸಾವಿರಾರು ಕೋಟಿ ರುಪಾಯಿಯೇನು ಸುರಿಯಬೇಕಿಲ್ಲ. ಬೇಕಿರುವುದು ಮಾನವೀಯವಾಗಿ ಮಿಡಿಯುವ ಹೃದಯಗಳು ಮಾತ್ರ. ಕೊನೆಯ ನಕ್ಸಲನನ್ನೂ ಹೊರಗೆ ತಂದಿರುವ ಸಿದ್ಧರಾಮಯ್ಯ ಅವರನ್ನು ಅಭಿನಂದಿಸುತ್ತಲೇ, ಅವರು ಈ ಭಾಗದ ಜನತೆಯ ಅಳಲುಗಳಿಗೆ ಕಿವಿಯಾಗುತ್ತಾರೆಂದು ಆಶಿಸೋಣ.

ದಿನೇಶ್ ಕುಮಾರ್ ಎಸ್.ಸಿ.

More articles

Latest article